ಬೆಂಗಳೂರು: ಅಕ್ರಮ ಚಟುವಟಿಕೆ ನಿಯಂತ್ರಿಸಬೇಕಾದ ಪೊಲೀಸರೇ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿದ್ದು, ಈ ಕೃತ್ಯದಲ್ಲಿ ಸ್ಥಳೀಯ ಪತ್ರಿಕೆಯ ಓರ್ವ ಪತ್ರಕರ್ತ ಸೇರಿ ಐವರನ್ನು ರಾಮಮೂರ್ತಿನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರಾಮಮೂರ್ತಿನಗರ ಠಾಣಾ ವ್ಯಾಪ್ತಿಯಲ್ಲಿರುವ ಜಯಂತಿನಗರದಲ್ಲಿರುವ ಆಲಯ ಸ್ಪಾ ಆ್ಯಂಡ್ ಸಲ್ಯೂನ್ ಶಾಪ್ ಮಾಲೀಕರಿಗೆ ಹಣ ಬ್ಲ್ಯಾಕ್ ಮೇಲ್ ಮಾಡಿದ ಆರೋಪದಡಿ ನಾಲ್ವರು ಗೃಹ ರಕ್ಷಕರು ಹಾಗೂ ಪತ್ರಕರ್ತ ಸೇರಿ ಐವರನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಖಾಸಗಿ ಪತ್ರಿಕೆ ಕಲೀಮ್, ಕೆ. ಜಿ ಹಳ್ಳಿ ಎಸಿಪಿ ಕಚೇರಿಯಲ್ಲಿ ಹೋಮ್ ಗಾರ್ಡ್ ಸಂಪಂಗಿ ರಾಮ್, ಹೆಣ್ಣೂರು ಪೊಲೀಸ್ ಠಾಣೆಯ ಆಸಿಫ್ ಖಾನ್ ಹಾಗೂ ಗೃಹರಕ್ಷಕ ಕೇಂದ್ರ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಆನಂದ್ ರಾಜ್, ವಿನಾಯಕ್ ಎಂಬುವರನ್ನು ಬಂಧಿಸಲಾಗಿದೆ.
ಐವರು ಆರೋಪಿಗಳು ಕೆಲ ತಿಂಗಳಿಂದ ಪರಸ್ಪರ ಸ್ನೇಹಿತರಾಗಿದ್ದು, ಅಕ್ರಮವಾಗಿ ಹಣ ಸಂಪಾದನೆ ಮಾಡಲು ವ್ಯವಸ್ಥಿತವಾಗಿ ಸಂಚು ರೂಪಿಸಿಕೊಂಡು ಜಯಂತಿ ನಗರದ ಆಲಯ ಸ್ಪಾಗೆ ಕಳೆದ ತಿಂಗಳು 26 ರಂದು ಹೋಗಿದ್ದಾರೆ.
ಪೊಲೀಸರು ಎಂದು ಒಳನುಗ್ಗಿ ಸ್ವತಃ ಕಾಂಡೋಮ್ ಎಸೆದು ನಿಮ್ಮ ಮಸಾಜ್ ಪಾರ್ಲರ್ನಲ್ಲಿ ಅನೈತಿಕ ಚಟುವಟಿಕೆ ನಡೆಸುತ್ತಿದ್ದೀರಾ?. ಹಿರಿಯ ಅಧಿಕಾರಿಗಳು ನಮ್ಮ ಜೊತೆ ಬಂದಿದ್ದಾರೆ. ಹಣ ನೀಡದಿದ್ದರೆ ಪ್ರಕರಣ ದಾಖಲಿಸಿ ಜೈಲಿಗಟ್ಟುತ್ತೇವೆ ಎಂದು ಹೆದರಿಸಿ 1.60 ಲಕ್ಷ ರೂಪಾಯಿ ವಸೂಲಿ ಮಾಡಿದ್ದರು ಎನ್ನಲಾಗ್ತಿದೆ.
ಕಳೆದ ಎರಡು ದಿನಗಳ ಹಿಂದೆ ಮತ್ತೆ ಸ್ಪಾ ಬಳಿ ಬಂದು ಹೆಚ್ಚಿನ ಹಣಕ್ಕೆ ಡಿಮ್ಯಾಂಡ್ ಮಾಡಿದ್ದರು. ಇದರಿಂದ ಕಂಗಲಾದ ಸ್ಪಾ ಮಾಲೀಕ ರಾಮಮೂರ್ತಿನಗರ ಪೊಲೀಸರಿಗೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಐವರನ್ನು ಬಂಧಿಸಿದ್ದಾರೆ.
ಓದಿ:ಲಂಚ ಪ್ರಕರಣ: ಲೋಕಾಯುಕ್ತ ಬಲೆಗೆ ಬಿದ್ದಿದ್ದ ಅಧಿಕಾರಿಗೆ ಶಿಕ್ಷೆ ಕಾಯಂಗೊಳಿಸಿದ ಹೈಕೋರ್ಟ್