ಬೆಂಗಳೂರು: ಶೀಘ್ರದಲ್ಲೇ ಒನ್ ಹೆಲ್ತ್ ಮಿಷನ್ ಕರ್ನಾಟಕದಲ್ಲೂ ಪ್ರಾರಂಭಿಸಲಾಗುವುದು ಎಂದು ಕೇಂದ್ರ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಅಜಯ್ ಸೂದ್ ತಿಳಿಸಿದ್ದಾರೆ.
ಬೆಂಗಳೂರು ಟೆಕ್ ಸಮ್ಮಿಟ್ ನಲ್ಲಿ ಮಾತನಾಡಿದ ಅವರು, ಸದ್ಯದಲ್ಲೇ ಒನ್ ಹೆಲ್ತ್ ಮಿಷನ್ ಕರ್ನಾಟಕದಲ್ಲೂ ಜಾರಿಗೊಳಿಸಲಾಗುವುದು. ಈಗಾಗಲೇ ದಿಲ್ಲಿ ಸೇರಿ ಕೆಲ ರಾಜ್ಯಗಳಲ್ಲಿ ಈ ಕಾರ್ಯಕ್ರಮ ಜಾರಿಯಲ್ಲಿದೆ. ಇದನ್ನು ಕರ್ನಾಟಕದಲ್ಲೂ ಆರಂಭಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಒನ್ ಹೆಲ್ತ್ ಮಿಷನ್ ಏಕೀಕೃತ ಪರಿಕಲ್ಪನೆ : ಒನ್ ಹೆಲ್ತ್ ಮಿಷನ್ ಏಕೀಕೃತ ಪರಿಕಲ್ಪನೆಯಾಗಿದ್ದು, ಮಾನವ, ಪ್ರಾಣಿ ಮತ್ತು ಪರಿಸರದ ಮೇಲೆ ನಿಗಾ ಇರಿಸುವ ಮೂಲಕ ರೋಗ ತಡೆಗಟ್ಟುವ ಕಾರ್ಯಕ್ರಮ ಇದಾಗಿದೆ. ವಿಜ್ಞಾನ ತಂತ್ರಜ್ಞಾನ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಪಶುಸಂಗೋಪನೆ, ಪರಿಸರ ಮತ್ತು ವನ್ಯ ಜೀವಿ ಇಲಾಖೆಯ ಜೊತೆ ಸಮನ್ವಯ ಸಾಧಿಸಿ ನಿಗಾ ವಹಿಸಲಾಗುತ್ತದೆ.
ಆರು ಇಲಾಖೆಗಳ ನಡುವೆ ಸಮನ್ವಯ ಸಾಧಿಸಿ ಭಾರತದ ರೋಗ ನಿಗಾ ವ್ಯವಸ್ಥೆಯಲ್ಲಿನ ನ್ಯೂನತೆಗಳನ್ನು ಸರಿದೂಗಿಸಿ ಸಮಗ್ರ ವ್ಯವಸ್ಥೆ ಸದೃಢಗೊಳಿಸುವ ಕಾರ್ಯಕ್ರಮ ಇದಾಗಿದೆ ಎಂದು ವಿವರಿಸಿದರು. ಈ ಮಿಷನ್ನಡಿ ಮಾನವ, ವನ್ಯಜೀವಿ ಮತ್ತು ಪರಿಸರ ಕ್ಷೇತ್ರಗಳನ್ನು ಸಮಗ್ರವಾಗಿ ಅವಲೋಕಿಸಲಾಗುವುದು. ಈ ಮೂರು ವಲಯಗಳು ಪರಸ್ಪರ ಅವಲಂಬಿತವಾಗಿದ್ದು, ಪ್ರಾಣಿಗಳಿಂದ ರೋಗ ಹೇಗೆ ಮಾನವನಿಗೆ ಹರಡುತ್ತವೆ ಎಂಬುದನ್ನು ಕೋವಿಡ್ ಅನುಭವ ತೋರಿಸಿಕೊಟ್ಟಿದೆ ಎಂದು ತಿಳಿಸಿದರು.
ಈ ಏಕೀಕೃತ ಪರಿಕಲ್ಪನೆ ಮೂಲಕ ಸ್ಥಳೀಯವಾಗಿ, ರಾಷ್ಟ್ರೀಯ, ಜಾಗತಿಕವಾಗಿ ಕೆಲಸ ಮಾಡುವ ಅಂಶಗಳನ್ನು ಸಮಗ್ರವಾಗಿ ಅವಲೋಕಿಸಲಾಗುವುದು. ಇದರಿಂದ ಜನರಿಗೆ, ಪ್ರಾಣಿಗಳಿಗೆ ಮತ್ತು ನಮ್ಮ ಪರಿಸರದ ಗರಿಷ್ಠ ಆರೋಗ್ಯ ಬಲವರ್ಧನೆ ಮಾಡಲಾಗುವುದು. ಈ ಪರಿಕಲ್ಪನೆಗೆ ಭಾರತದಲ್ಲಿ ಮಾತ್ರವಲ್ಲ ಇತರ ಹಲವು ರಾಷ್ಟ್ರಗಳಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಇದೇ ವೇಳೆ ತಿಳಿಸಿದರು.
ಮಹಾಮಾರಿ ಎದುರಾಗುವ ವೇಳೆ ಕೇವಲ ಮಾನವರನ್ನು ಪರೀಕ್ಷೆಗೆ ಒಳಪಡಿಸುವುದು ಅಷ್ಟೇ ಅಲ್ಲ. ಈ ಒನ್ ಹೆಲ್ತ್ ಮಿಷನ್ ವನ್ಯಜೀವಿ, ಪರಿಸರದ ಮೇಲೂ ನಿಗಾವಹಿಸಿ ನಮ್ಮ ಆರೋಗ್ಯದ ಮೇಲೆ ನೇರವಾಗಿ ಮತ್ತು ಪರೋಕ್ಷವಾಗಿ ಪರಿಣಾಮ ಬೀರುವ ಅಂಶಗಳನ್ನು ಅವಲೋಕಿಸಲಿದೆ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ :ಶಿಕ್ಷಕರ ವರ್ಗಾವಣೆಗೆ ಕರಡು ನಿಯಮ ಪ್ರಕಟ: ಆಕ್ಷೇಪಣೆ ಸಲ್ಲಿಸಲು ಅವಕಾಶ