ಬೆಂಗಳೂರು: ರಾಜಕಾರಣದಲ್ಲಿ ಅಧಿಕಾರಕ್ಕಾಗಿ ತಂದೆ - ಮಕ್ಕಳು, ಸಹೋದರರು, ಸಂಬಂಧಿಕರು ಎದುರು ಬದುರಾದ ಉದಾಹರಣೆಗಳಿವೆ. ಪ್ರತ್ಯೇಕ ಪಕ್ಷಗಳಲ್ಲಿ ಗುರುತಿಸಿಕೊಂಡು ರಾಜಕಾರಣ ನಡೆಸುತ್ತಿದ್ದಾರೆ. ಅದರಲ್ಲೂ ಸಹೋದರರು ತುಸು ಹೆಚ್ಚಾಗಿ ಸವಾಲು ಹಾಕಿರುವುದು ಕಣ್ಣೆದುರುಗಿದೆ.
ಗೆಲುವಿನ ನಗೆ ಬೀರಿದ ಮಧು ಬಂಗಾರಪ್ಪ:ಮೊದಲ ಸುತ್ತಿನ ಮತ ಏಣಿಕೆಯಿಂದಲೂ ಮುನ್ನಡೆ ಕಾದುಕೊಂಡಿದ್ದ ಮಧು ಬಂಗಾರಪ್ಪ ಅವರು 62,818 ಮತ ಪಡೆಯುವ ಮೂಲಕ ಗೆಲುವಿನ ನಗು ಬೀರಿದ್ದಾರೆ. 1994ರವರೆಗೆ ಸತತ ಏಳು ಬಾರಿ ಎಸ್.ಬಂಗಾರಪ್ಪ ಅವರು, ಸೊರಬವನ್ನು ಪ್ರತಿನಿಧಿಸಿದ್ದರು. ಇದಾದ ಬಳಿಕ 2008ರಲ್ಲಿ ಒಮ್ಮೆ ಬಂಗಾರಪ್ಪ ಕುಟುಂಬದ ಹೊರತಾಗಿ ಹಾಲಪ್ಪ ಈ ಕ್ಷೇತ್ರದ ಶಾಸಕರಾಗಿದ್ದರು. ಈ ಹಿಂದಿನ ಅಣ್ಣ-ತಮ್ಮಂದಿರ ನಡುವಿನ ಎರಡೂ ಚುನಾವಣೆಯಲ್ಲಿ ಕುಮಾರ ಬಂಗಾರಪ್ಪ ಗೆಲುವು ಸಾಧಿಸಿದ್ದರು.
ಸಹೋದರರ ನಡುವೆ ಜಿದ್ದಾಜಿದ್ದಿ:ಮಾಜಿ ಮುಖ್ಯಮಂತ್ರಿ ದಿ.ಬಂಗಾರಪ್ಪ ಅವರ ಕುಟುಂಬ ಭಿನ್ನ ಪಕ್ಷಗಳಲ್ಲಿ ಗುರುತಿಸಿಕೊಂಡಿದೆ. ಸೊರಬದಲ್ಲಿ ಅವರ ಮಕ್ಕಳಾದ ಕುಮಾರ್ ಬಂಗಾರಪ್ಪ ಮತ್ತು ಮಧು ಬಂಗಾರಪ್ಪ ಅವರು 2004 ರಿಂದಲೂ ಅಧಿಕಾರಕ್ಕಾಗಿ ಸೆಣಸಾಡುತ್ತಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ನಿಂದ ಇಬ್ಬರೂ ಪ್ರತ್ಯೇಕವಾಗಿ ಒಬ್ಬರ ವಿರುದ್ಧ ಒಬ್ಬರು ಚುನಾವಣಾ ಅಖಾಡದಲ್ಲಿದ್ದರು. ಈ ಬಾರಿಯ ಚುನಾವಣೆಯಲ್ಲೂ ಪ್ರತಿಸ್ಪರ್ಧಿಗಳಾಗಿದ್ದು, ಪಕ್ಷಗಳು ಬೇರೆಯಾಗಿವೆ. ಕುಮಾರ್ ಬಿಜೆಪಿಯಿಂದ, ಮಧು ಕಾಂಗ್ರೆಸ್ನಿಂದ ಸ್ಪರ್ಧೆ ಮಾಡಿದ್ದಾರೆ. ಸದ್ಯ ಮಧು ಬಂಗಾರಪ್ಪ 20,621 ಮತಗಳ ಮುನ್ನಡೆ ಸಾಧಿಸಿದ್ಧಾರೆ.
ಗಣಿ ಧಣಿಗಳ ಮಧ್ಯೆ ಫೈಟ್: ಗಣಿ ಧಣಿಗಳ ಊರಾದ ಬಳ್ಳಾರಿಯಲ್ಲೂ ಕುಟುಂಬಸ್ಥರ ಮಧ್ಯೆ ಪೈಪೋಟಿ ಇದೆ. ರೆಡ್ಡಿ ಸಹೋದರರು ರಾಜಕೀಯವಾಗಿ ಪ್ರತ್ಯೇಕವಾಗಿ ಕಣದಲ್ಲಿದ್ದಾರೆ. ಮಾಜಿ ಸಚಿವ ಕರುಣಾಕರ್ ರೆಡ್ಡಿ ಮತ್ತು ಸೋಮಶೇಖರ್ ರೆಡ್ಡಿ ಬಿಜೆಪಿಯಲ್ಲಿದ್ದಾರೆ. ಬಿಜೆಪಿಯಿಂದ ಹೊರನಡೆದಿರುವ ಗಾಲಿ ಜನಾರ್ದನ ರೆಡ್ಡಿ ಅವರು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಕಟ್ಟಿ ಮಾತೃ ಪಕ್ಷಕ್ಕೆ ಸೆಡ್ಡು ಹೊಡೆದಿದ್ದರು. ಇದಷ್ಟೇ ಅಲ್ಲ, ಬಳ್ಳಾರಿ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಸಹೋದರ ಸೋಮಶೇಖರ್ ರೆಡ್ಡಿ ವಿರುದ್ಧವೇ ಪತ್ನಿ ಲಕ್ಷ್ಮಿಅರುಣಾರನ್ನು ಕಣಕ್ಕಿಳಿಸಿದ್ದಾರೆ. ಆದರೆ ಅವರು ಬಳ್ಳಾರಿ ಸಿಟಿ ಕ್ಷೇತ್ರದಲ್ಲಿ ಗೆಲ್ಲಲು ವಿಫಲರಾಗಿದ್ದಾರೆ. ಸೋಮಶೇಖರ ರೆಡ್ಡಿ ಇಲ್ಲ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ಸದ್ಯ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಅಭ್ಯರ್ಥಿ ಜನಾರ್ದನರೆಡ್ಡಿ ಭರ್ಜರಿ ಗೆಲುವು ಸಾಧಿಸಿದ್ದಾರೆ.