ಕರ್ನಾಟಕ

karnataka

ETV Bharat / state

ಡ್ಯಾನ್ಸ್ ವಿಚಾರವಾಗಿ ಗಣೇಶ ಮೂರ್ತಿ ನಿಮಜ್ಜನ ವೇಳೆ ಮಾರಾಮಾರಿ: ಓರ್ವನ ಹತ್ಯೆ - Ganesh idol immersion in Bengaluru

ಬೆಂಗಳೂರಿನ ಆಡುಗೋಡಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಗಣೇಶನ ಮೂರ್ತಿ ನಿಮಜ್ಜನ ವೇಳೆ ಡ್ಯಾನ್ಸ್ ಮಾಡುವ ವಿಚಾರವಾಗಿ ಮಾರಾಮಾರಿ ನಡೆದಿದ್ದು ಓರ್ವ ಸಾವನ್ನಪ್ಪಿದ್ದಾನೆ.

Ganesh idol immersion
ಗಣೇಶ ಮೂರ್ತಿ ನಿಮಜ್ಜನ ವೇಳೆ ಮಾರಾಮಾರಿ

By ETV Bharat Karnataka Team

Published : Oct 9, 2023, 12:12 PM IST

ಗಣೇಶ ಮೂರ್ತಿ ನಿಮಜ್ಜನ ವೇಳೆ ಮಾರಾಮಾರಿ

ಬೆಂಗಳೂರು :ಗಣೇಶ ಮೂರ್ತಿ ನಿಮಜ್ಜನ ಮೆರವಣಿಗೆ ಸಂದರ್ಭದಲ್ಲಿ ಎರಡು ಗುಂಪುಗಳ ನಡುವೆ ನಡೆದ ಮಾರಾಮಾರಿಯಲ್ಲಿ ಓರ್ವ ಬಲಿಯಾದ ಘಟನೆ ತಡರಾತ್ರಿ ಆಡುಗೋಡಿ ಠಾಣಾ ವ್ಯಾಪ್ತಿಯ ರಾಮಾಂಜನೇಯ ದೇವಾಲಯ ರಸ್ತೆಯಲ್ಲಿ ನಡೆದಿದೆ.

ಗಣಪತಿ ನಿಮಜ್ಜನ ವೇಳೆ ಡ್ಯಾನ್ಸ್ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳು ಮಾರಕಾಸ್ತ್ರಗಳಿಂದ ಬಡಿದಾಡಿಕೊಂಡ ಪರಿಣಾಮ ಶ್ರೀನಿವಾಸ್ ಎಂಬಾತ ಸಾವನ್ನಪ್ಪಿದ್ದರೆ, ರಂಜಿತ್ ಹಾಗೂ ಇಂದಿರಾ ಎಂಬುವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕಳೆದ ತಿಂಗಳು ಸಹ ಅದೇ ಏರಿಯಾದಲ್ಲಿ ಗಣೇಶನ ಮೂರ್ತಿ ನಿಮಜ್ಜನ ಮಾಡುವಾಗ ಡ್ಯಾನ್ಸ್ ಮಾಡುವ ವಿಚಾರಕ್ಕೆ ಶ್ರೀನಿವಾಸ್ ಮತ್ತು ವಿನಯ್, ಅಲೆಕ್ಸ್, ರಂಜಿತ್, ಪ್ರಶಾಂತ್ ನಡುವೆ ಜಗಳವಾಗಿತ್ತು. ನಿನ್ನೆ ಮತ್ತೊಂದು ಗಣೇಶನ ಮೂರ್ತಿ ನಿಮಜ್ಜನ ಮೆರವಣಿಗೆ ನಡೆಯುತ್ತಿತ್ತು. ಗಣಪತಿ ಮೆರವಣಿಗೆ ಮನೆ ಮುಂದೆ ಬಂದಾಗ ಶ್ರೀನಿವಾಸ್, ಡ್ಯಾನ್ಸ್ ಮಾಡುತ್ತಿದ್ದವರಿಗೆ ಆಕ್ಷೇಪ ವ್ಯಕ್ತಪಡಿಸಿದ್ದ. ಈ ಸಂದರ್ಭದಲ್ಲಿ ಶ್ರೀನಿವಾಸ್ ಹಾಗೂ ಆರೋಪಿಗಳ ಗುಂಪಿನ ನಡುವೆ ಮಾರಾಮಾರಿಯಾಗಿದೆ. ಜಗಳದಲ್ಲಿ ಮಾರಕಾಸ್ತ್ರಗಳಿಂದ ಶ್ರೀನಿವಾಸ್, ರಂಜಿತ್ ಹಾಗೂ ಶ್ರೀನಿವಾಸನ ತಾಯಿ ಇಂದಿರಾಗೆ ಚಾಕುವಿನಿಂದ ಇರಿಯಲಾಗಿದ್ದು, ಶ್ರೀನಿವಾಸ್ ಸಾವನ್ನಪ್ಪಿದ್ದಾನೆ.

ಸದ್ಯಕ್ಕೆ ಶ್ರೀನಿವಾಸ್ ತಾಯಿ ಹಾಗೂ ರಂಜಿತ್ ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿನಯ್, ಅಲೆಕ್ಸ್, ರಂಜಿತ್ ಹಾಗೂ ಪ್ರಶಾಂತ್ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಆಡುಗೋಡಿ ಪೊಲೀಸರು, ಕೆಲ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

ಇನ್ನೊಂದೆಡೆ, ರಾಜಧಾನಿಯಲ್ಲಿ ರೋಡ್ ರೇಜ್ ಗಲಾಟೆ ಪ್ರಕರಣಗಳು ಹೆಚ್ಚಾಗುತ್ತಿವೆ. ಓವರ್ ಟೇಕ್, ವೇಗದ ಚಾಲನೆ ಹೀಗೆ ವಿವಿಧ ಕ್ಷುಲ್ಲಕ ಕಾರಣಗಳ ನೆಪವೊಡ್ಡಿ ಕಿಡಿಗೇಡಿಗಳು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ. ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವಂತಹ ಪುಂಡರ ಮೇಲೆ ನಗರ ಪೊಲೀಸರು ರೌಡಿಶೀಟ್ ತೆರೆಯುವ ಮೂಲಕ ಚಾಟಿ ಬೀಸಿದ್ದಾರೆ. ಕಳೆದ ಜನವರಿಯಿಂದ ಸೆ.30ರ ವರೆಗೆ ನಗರದಲ್ಲಿ 18 ರಸ್ತೆ ಬದಿ ಗಲಾಟೆ ಪ್ರಕರಣಗಳು ದಾಖಲಾಗಿವೆ. 2022ರಲ್ಲಿ 7 ಪ್ರಕರಣಗಳು ದಾಖಲಾಗಿತ್ತು. ಈ ವರ್ಷದಲ್ಲಿ ದಾಖಲಾಗಿದ್ದ 18 ಪ್ರಕರಣಗಳಲ್ಲಿ ನಾಲ್ವರ ವಿರುದ್ಧ ರೌಡಿಶೀಟರ್ ತೆರೆಯಲಾಗಿದೆ.

ಇದನ್ನೂ ಓದಿ :ಬೆಂಗಳೂರಲ್ಲಿ ರೋಡ್ ರೇಜ್ ಗಲಾಟೆ ಹೆಚ್ಚಳ : ಗಂಭೀರವಾಗಿ ಪರಿಗಣಿಸಿದ‌ ಪೊಲೀಸರು, ನಾಲ್ವರ ವಿರುದ್ಧ ರೌಡಿಪಟ್ಟಿ ಓಪನ್

ಎರಡು ಗುಂಪುಗಳ ನಡುವೆ ಮಾರಾಮಾರಿ :ಕಳೆದ ತಿಂಗಳ ಸೆಪ್ಟೆಂಬರ್​ 22 ರಂದು ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ಶಿವಮೊಗ್ಗ ನಗರದ ಆಲ್ಕೋಳ ಸರ್ಕಲ್​ ಸಮೀಪದಲ್ಲಿ ನಡೆದಿತ್ತು. ಘಟನೆಯಲ್ಲಿ ಐವರಿಗೆ ಚಾಕು ಇರಿಯಲಾಗಿತ್ತು. ಪವನ್​ ಮತ್ತು ಕಿರಣ್ ಎಂಬ ಸ್ನೇಹಿತರ ಗುಂಪುಗಳ ಮಧ್ಯೆ ಸಂಘರ್ಷ ನಡೆದಿತ್ತು.

ಕಳೆದ ಕೆಲ ವರ್ಷಗಳಿಂದ ಈ ಎರಡು ಗುಂಪುಗಳ ನಡುವೆ ಸಣ್ಣಪುಟ್ಟ ವಿಚಾರಕ್ಕೆ ಭಿನ್ನಾಭಿಪ್ರಾಯಗಳಿದ್ದವು. ಇದೇ ಕಾರಣಕ್ಕೆ ಆಗಾಗ್ಗೆ ಗಲಾಟೆ ಆಗುತ್ತಿತ್ತು. ಸೆಪ್ಟೆಂಬರ್​ 21 ರ ತಡರಾತ್ರಿ ನೇತಾಜಿ ಸರ್ಕಲ್​ನಲ್ಲಿ ಪವನ್​ ಮತ್ತು ಕಿರಣ್ ನಡುವೆ ಜಗಳವಾಗಿದೆ. ಬಳಿಕ, ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗಿದ್ದು, ಎರಡೂ ಕಡೆಯವರು ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡಿದ್ದರು.

ABOUT THE AUTHOR

...view details