ಬೆಂಗಳೂರು: ರಾಜ್ಯದಲ್ಲಿ ಡಿಸೆಂಬರ್ ವೇಳೆಗೆ ಶೇ.50ರಷ್ಟು ಅರ್ಹರಿಗೆ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಕಾರ್ಡ್‌ಗಳನ್ನು ವಿತರಿಸಲಾಗುವುದು. ಒಟ್ಟು 1 ಕೋಟಿ ಕಾರ್ಡ್‌ಗಳನ್ನು ವಿತರಿಸಲು ಸಿದ್ಧತೆ ನಡೆಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಅತ್ಯಂತ ಕಡಿಮೆ ಅವಧಿಯಲ್ಲಿ ಒಂದು ಕೋಟಿ ಕಾರ್ಡ್‌ಗಳನ್ನು ಸಿದ್ಧಪಡಿಸಲಾಗಿದೆ. ಆಯುಷ್ಮಾನ್ ಕಾರ್ಡ್ ವಿತರಣೆಯಲ್ಲಿ ಕರ್ನಾಟಕ ಇಡೀ ದೇಶದಲ್ಲಿಯೇ ಮಾದರಿ ರಾಜ್ಯವಾಗಿ ಹೊರಹೊಮ್ಮಿದೆ. ಶೀಘ್ರದಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಆಯುಷ್ಮಾನ್ ಕಾರ್ಡ್‌ಗಳನ್ನು ಎಲ್ಲಾ ಅರ್ಹರಿಗೆ ವಿತರಿಸಲಾಗುವುದು ಎಂದು ಹೇಳಿದರು.
ಕಾರ್ಡ್ ವಿತರಣೆಯಲ್ಲಿ ಚಿಕ್ಕಬಳ್ಳಾಪುರ, ಹಾವೇರಿ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು ಅತ್ಯುತ್ತಮ ಸಾಧನೆ ತೋರಿದ್ದು, ಮೂರನೇ ಒಂದರಷ್ಟು ಫಲಾನುಭವಿಗಳನ್ನು ಈಗಾಗಲೇ ನೋಂದಣಿ ಮಾಡಲಾಗಿದೆ. ಆರೋಗ್ಯ ಇಲಾಖೆಯ ಕ್ಷೇತ್ರಾಧಿಕಾರಿಗಳು ಕಾರ್ಡ್‌ಗಳ ನೋಂದಣಿಗಾಗಿ ಯಶಸ್ವಿಯಾಗಿ ಅಭಿಯಾನ ನಡೆಸುತ್ತಿದ್ದಾರೆ.
ನವೆಂಬರ್ 11ಕ್ಕೆ ಅಂತ್ಯಗೊಂಡಂತೆ, ಒಂದು ಕೋಟಿ ಕಾರ್ಡ್‌ಗಳ ನೋಂದಣಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಆರೋಗ್ಯಾಧಿಕಾರಿಗಳು ಮತ್ತು ಜಿಲ್ಲಾ ಕುಷ್ಠರೋಗ ವಿಭಾಗದ ಅಧಿಕಾರಿಗಳ ಜಂಟಿ ಪ್ರಯತ್ನದಿಂದ ಇಂತಹ ಮಹತ್ವದ ಸಾಧನೆಯಾಗಿದೆ ಎಂದು ವಿವರಿಸಿದರು.
ಮಾರ್ಚ್‌ಗೆ ಎಲ್ಲಾ ಅರ್ಹರಿಗೆ ಕಾರ್ಡ್: ಇಡಿಸಿಎಸ್ ವಿಭಾಗದ ನಿರಂತರ ಪ್ರಯತ್ನ ಶ್ಲಾಘನೀಯವಾಗಿದ್ದು, ಗ್ರಾಮ ಒನ್ ಕೇಂದ್ರಗಳಲ್ಲಿ ದೈನಂದಿನ ಗುರಿ ತಲುಪಲು ಪ್ರಯತ್ನಿಸಲಾಗುತ್ತಿದೆ. ಇದಕ್ಕಾಗಿ ದೊಡ್ಡ ಪ್ರಮಾಣದ ಶಿಬಿರಗಳನ್ನು ಕೂಡ ಆಯೋಜಿಸಲಾಗುತ್ತಿದೆ.