ಬೆಂಗಳೂರು:ಸಿಲಿಕಾನ್ ಸಿಟಿಯನ್ನ ಮಾದಕ ಮುಕ್ತ ಸಿಟಿಯನ್ನಾಗಿ ಮಾಡಬೇಕೆಂದು ಸರ್ಕಾರ ಪಣತೊಟ್ಟಿದೆ. ಈ ಕಾರಣಕ್ಕಾಗಿ ಸದ್ಯ ಗೃಹ ಸಚಿವರ ಆದೇಶದ ಮೇರೆಗೆ ನಗರ ಪೊಲೀಸರು ಪ್ರತಿ ದಿನ ಡ್ರಗ್ ಮಾಫಿಯಾ ಬಯಲಿಗೆ ಎಳೆಯಲು ಮುಂದಾಗಿದ್ದಾರೆ.
ಸದ್ಯ ಒಂದೂವರೆ ಕೋಟಿ ರೂ. ಮೌಲ್ಯದ ಬಣ್ಣ ಬಣ್ಣದಿಂದ ಕೂಡಿದ ಚಿತ್ರ ವಿಚಿತ್ರವಾಗಿರುವ ಪೇಪರ್ ಮುಖಾಂತರ ಮಾರಾಟ ಮಾಡಲಾಗುತ್ತಿದ್ದ ಡ್ರಗ್ಸ್ ಅನ್ನು ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ಡಿಸಿಪಿ ಕುಲ್ದೀಪ್ ಜೈನ್ ತಂಡ ಜಪ್ತಿ ಮಾಡಿದ್ದು, ಕೇರಳ ಮೂಲದ ನಾಲ್ವರು ಡ್ರಗ್ ಪೆಡ್ಲರ್ಗಳನ್ನು ಬಂಧಿಸಿದ್ದಾರೆ. ಶಹದ್ ಮೊಹಮ್ಮದ್, ಅಜ್ಮಲ್, ಅಜಿನ್, ಕೆ.ಜಿ. ವರ್ಗೇಶ್, ನಿತಿನ್, ಮೋಹನ್ ಬಂಧಿತ ಆರೋಪಿಗಳು.
ಪತ್ತೆ ಹಚ್ಚಿದ ಡ್ರಗ್ಸ್ ಪರಿಶೀಲಿಸಿದ ಗೃಹ ಸಚಿವರು ಈ ಡ್ರಗ್ಸ್ ನೋಡುವುದಕ್ಕೆ ಪೇಪರ್ ತರಹ ಕಾಣಿಸುತ್ತದೆ. ಇದರ ಕಾಲು ಇಂಚು ಬಾಯಲ್ಲಿಟ್ಟುಕೊಂಡರೆ ಏಳೆಂಟು ಗಂಟೆ ನಶೆಯಲ್ಲೇ ತೇಲಬಹುದಾಗಿದೆ ಎಂದು ಡ್ರಗ್ ಸೇವಿಸುವ ಮಂದಿಯಿಂದ ಮಾಹಿತಿ ಪಡೆದುಕೊಂಡಿದ್ದೇವೆ. ಇವರ ಮಾಹಿತಿ ಮೇರೆಗೆ ಆರೋಪಿಗಳನ್ನ ಬಂಧಿಸಿ ತನಿಖೆ ನಡೆಸಿದಾಗ ಪ್ರಕರಣದ ಕಿಂಗ್ ಪಿನ್ ಧೀರಜ್ ಎಂಬುದು ತಿಳಿದಿದೆ. ಈತ ಸದ್ಯ ತಲೆಮರೆಸಿಕೊಂಡಿದ್ದು, ನೆದರ್ಲ್ಯಾಂಡ್ ಹಾಗೂ ಜರ್ಮನಿಯಿಂದ ಪೋಸ್ಟಲ್ ಮುಖಾಂತರ ಡ್ರಗ್ ತರಿಸಿ ಕಿಂಗ್ ಪಿನ್ ಧೀರಜ್ ಹೇಳಿದಂತೆ ಈಗಾಗಲೇ ಬಂಧಿತ ಆರೋಪಿಗಳು ಡೀಲ್ ಮಾಡುತ್ತಿದ್ದರು ಎಂದು ಸಿಸಿಬಿ ಹೆಚ್ಚುವರಿ ಆಯುಕ್ತರು ಹೇಳಿದ್ದಾರೆ.
ಜಪ್ತಿ ಮಾಡಲಾದ ಬಣ್ಣ ಬಣ್ಣದ ಡ್ರಗ್ಸ್ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮಾತನಾಡಿ, ನಮ್ಮ ಎಲ್ಲಾ ಸಿಸಿಬಿ ವಿಂಗ್ಗಳನ್ನು ಈಗಾಗಲೇ ಡ್ರಗ್ಸ್ ನಿಯಂತ್ರಣ ಮಾಡಲು ಮೀಸಲಿಟ್ಟಿದ್ದೇವೆ. ಡ್ರಗ್ಸ್ ಡೀಲರ್ಗಳು ವಿಶೇಷವಾಗಿ ಮಾರ್ಕೆಟ್, ಕಾಲೇಜ್, ಹಾಸ್ಟೆಲ್ಗಳಲ್ಲಿ ಮಾರಾಟ ಮಾಡಲು ಯತ್ನಿಸುತ್ತಾರೆ. ಸದ್ಯ ಬೆಂಗಳೂರು ಅಲ್ಲದೆ ಇಡೀ ರಾಜ್ಯದಲ್ಲಿ ಡ್ರಗ್ ನಿರ್ಮೂಲನೆ ಮಾಡುವ ಪಣ ತೊಟ್ಟಿದ್ದೇವೆ. ಬೆಂಗಳೂರಿನಲ್ಲಿ ಎಲ್ಲಾ ಭಾಗದ ಜನರು ಇರುವುದರಿಂದ ಡ್ರಗ್ ಡೀಲರ್ಗಳಿಗೆ ಬೆಂಗಳೂರು ಬ್ಯುಸಿನೆಸ್ ಪಾಯಿಂಟ್ ಆಗಿದೆ. ಈಗಾಗಲೇ ಡ್ರಗ್ ಡೀಲಿಂಗ್ಗೆ ಸಂಬಂಧಪಟ್ಟಂತೆ 799 ವಿದೇಶಿಗರನ್ನ ಪೊಲೀಸರು ಬಂಧಿಸಿದ್ದಾರೆ ಎಂದು ಹೇಳಿದರು.
ಅಧಿಕಾರಿಗಳಿಗೆ ಭೇಷ್ ಎಂದ ಗೃಹ ಸಚಿವರು ನಾವು ಈ ಮೊದಲೇ ಡ್ರಗ್ ಮಾಫಿಯಾ ಕುರಿತು ಜಾಗೃತಿ ಕಾರ್ಯಕ್ರಮ ಮಾಡಲು ನಿರ್ಧರಿಸಿದ್ದೆವು. ಆದರೆ ಕೊರೊನಾ ಬಂದ ಕಾರಣ ಕೊಂಚ ಮಟ್ಟಿಗೆ ಹಿನ್ನಡೆಯಾಗಿದೆ. ಮಾದಕ ವಸ್ತು ವಿರೋಧಿ ಅಭಿಯಾನ ಮಾಡಿ ಎಲ್ಲಾ ಶಾಲಾ-ಕಾಲೆಜುಗಳಲ್ಲಿ ಸಭೆ ನಡೆಸಲು ತೀರ್ಮಾನಿಸಿದ್ದೇವೆ. ಡ್ರಗ್ಸ್ ಮಾರಾಟ ಮಾಡುವವರು ಯಾರೇ ಆಗಿದ್ದರೂ ಸರಿಯೇ ಅವರನ್ನು ಮಟ್ಟ ಹಾಕಲಾಗುವುದು. ಬೇರೆ ಬೇರೆ ರಾಜ್ಯದಿಂದ ಬರುವ ಎಂಟ್ರಿ ಪಾಯಿಂಟ್ಗಳಲ್ಲಿ ಹೆಚ್ಚಿನ ನಿಗಾ ಇಡಲಾಗಿದೆ. ಹಾಗೆಯೇ ವಿದೇಶಿಗರ ಮೇಲೂ ಕೂಡ ಕಟ್ಟುನಿಟ್ಟಿನ ಕ್ರಮ ಕೈಗೊಂಡು ನಿಗಾ ಇಡಲಾಗುವುದು ಎಂದರು.
ಸೈಬರ್ ಕ್ರೈಂ ಬಗ್ಗೆ ಹೆಚ್ಚಿನ ನಿಗಾ:
ಸಿಲಿಕಾನ್ ಸಿಟಿಯಲ್ಲಿ ಸೈಬರ್ ಕ್ರೈಂ ಹೆಚ್ಚಾಗಿ ನಡೆಯುತ್ತಿರುವ ಕಾರಣ ಇದರ ಬಗ್ಗೆ ತೀವ್ರ ನಿಗಾ ಇಡಲಾಗಿದೆ. ಆಗಸ್ಟ್ ಮೊದಲ ವಾರದಲ್ಲಿ ಎಲ್ಲಾ ಬ್ಯಾಂಕ್ನವರ ಜೊತೆ ಸಭೆ ನಡೆಸಿ ಸೈಬರ್ ಕ್ರೈಮ್ಗೆ ಸಂಬಂಧಿಸಿದಂತೆ ಎಚ್ಚರಿಕೆಯಿಂದ ಇರುವಂತೆ ತಿಳಿಸುತ್ತೇವೆ. ಸದ್ಯ ನಗರದಲ್ಲಿ 8 ಸಿಇಎನ್ ಸೈಬರ್ ಠಾಣೆ ಕಾರ್ಯನಿರತವಾಗಿದ್ದು, ಇಲ್ಲಿರುವ ಸಿಬ್ಬಂದಿ ಕೂಡ ಅಲರ್ಟ್ ಆಗಿದ್ದಾರೆ. ಮೋಸ ಹೋದವರು ಸಿಇಎನ್ ಠಾಣೆಯಲ್ಲಿ ಭಯ ಪಡದೆ ದೂರು ನೀಡಿ ಎಂದು ಗೃಹ ಸಚಿವರು ಕರೆ ನೀಡಿದ್ಧಾರೆ.