ಬೆಂಗಳೂರು:ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ಪ್ರವಾಹವನ್ನ ಉಂಟು ಮಾಡಿದೆ. ಆದ್ರೆ ಇದರ ಬೆನ್ಮಲ್ಲೇ ರಾಜ್ಯದ ಜನರನ್ನ ಬೆಚ್ಚಿಬೀಳಿಸುವಂತಹ ಸುದ್ದಿಯೊಂದನ್ನ ರಾಜ್ಯ ಹವಾಮಾನ ಇಲಾಖೆ ಇದೀಗ ನೀಡಿದೆ.
ಹವಾಮಾನ ಇಲಾಖೆಯ ವಿಜ್ಞಾನಿ ಸಿ ಎಸ್ ಪಾಟೀಲ್ ಮಾತನಾಡಿದರು ಹೌದು, ನಾಳೆಗೆ ರಾಜ್ಯದಲ್ಲಿ ಮಳೆಯ ಪ್ರಮಾಣದಲ್ಲಿ ಸ್ವಲ್ಪ ಮಟ್ಟಿಗಿನ ಕುಸಿತ ಕಂಡುಬಂದರೂ ,ಸೋಮವಾರ ಅಥವಾ ಮಂಗಳವಾರದಂದು (12-13 ರಂದು) ಮಳೆಯ ಪ್ರಮಾಣ ಏರಿಕೆಯಾಗಲಿದೆ. ಉತ್ತರ ಬಂಗಾಳ ಕೊಲ್ಲಿಯ ಸಾಗರದಲ್ಲಿ ವಾಯುಭಾರ ಕುಸಿತವಾಗಲಿದ್ದು, ಇದರಿಂದ ಗಾಳಿಯ ವೇಗ, ಹೆಚ್ಚಿ ಅರಬ್ಬೀ ಸಮುದ್ರದ ಕಡೆಯಿಂದ ಬೀಸುವ ಗಾಳಿ ನೀರನ್ನು ಹೊತ್ತು ತಂದು ರಾಜ್ಯಾದ್ಯಂತ ಮಳೆ ಪ್ರಮಾಣ ಹೆಚ್ಚಿಸಲಿದೆ ಎಂದು ಹವಾಮಾನ ಇಲಾಖೆಯ ವಿಜ್ಞಾನಿ ಸಿಎಸ್ ಪಾಟೀಲ್ ಅವರು ತಿಳಿಸಿದ್ದಾರೆ.
ಮುಂದಿನ 48 ಗಂಟೆಗಳಲ್ಲಿ ( ಅಂದರೆ ಸೋಮವಾರದಿಂದ) ಕರಾವಳಿ ಜಿಲ್ಲೆಗಳಾದ ಉತ್ತರಕನ್ನಡ, ಉಡುಪಿ, ದಕ್ಷಿಣ ಕನ್ನಡ ಹಾಗೂ ಬೆಳಗಾವಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಮತ್ತು ಕೊಡಗು ಇತರೆಡೆ ಭಾರಿಯಿಂದ ಕೂಡಿದ ಭಾರಿ ಮಳೆ ಆಗಲಿದೆ. ಹಾಗೆಯೇ ಈ 8 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಿದ್ದೇವೆ ಎಂದರು.
ಕೆಲವೆಡೆ ಮಳೆ ಪ್ರಮಾಣದಲ್ಲಿ ಇಳಿಕೆ ಸಾಧ್ಯತೆ
ಹಾಗೆಯೇ ಬಂಗಾಳಕೊಲ್ಲಿಯಲ್ಲಿ ಉಂಟಾಗಿದ್ದ ವಾಯುಭಾರ ಕುಸಿತವೂ ಕಡಿಮೆಯಾಗಿದ್ದು, ಛತ್ತೀಸಗಢ, ಮಧ್ಯಪ್ರದೇಶ, ಉತ್ತರ ಮಹಾರಾಷ್ಟ್ರ, ಗುಜಾರಾತ್ ಕಡೆಗೆ ಹಾದು ಹೋಗಲಿದೆ. ಹೀಗಾಗಿ ಕರ್ನಾಟಕದ ಸುತ್ತಮುತ್ತ ಮೋಡದ ಪ್ರಮಾಣ ಕಡಿಮೆಯಾಗಿ ಉತ್ತರ ಕರ್ನಾಟಕದಲ್ಲಿ ನಾಳೆಯಿಂದ ಸ್ವಲ್ಪ ಮಟ್ಟಿಗೆ ಮಳೆ ಪ್ರಮಾಣ ಕಡಿಮೆಯಾಗಲಿದೆ ಎಂದು ಅವರು ಇದೇ ವೇಳೆ ತಿಳಿಸಿದರು. ಆದರೆ 12ನೇ ತಾರೀಖಿನಿಂದ ರಾಜ್ಯದ ಎಲ್ಲೆಡೆ ಮಳೆ ಆಗಲಿದೆ ಎಂದು ಮುನ್ಸೂಚನೆ ನೀಡಿದರು.