ಬೆಂಗಳೂರು: ರಾಜ್ಯದ ಮಹಿಳೆಯರ ಸಬಲೀಕರಣಕ್ಕೆ ಕಾಂಗ್ರೆಸ್ ಪಕ್ಷದ ವತಿಯಿಂದ ಜನವರಿ 16ರಂದು ಅರಮನೆ ಮೈದಾನದಲ್ಲಿ ನಾ ನಾಯಕಿ ಸಮಾವೇಶ ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಭಾಗವಹಿಸಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ರಾಜ್ಯ ಹಾಗೂ ದೇಶದ ಜನಸಂಖ್ಯೆಯಲ್ಲಿ ಶೇ.50ರಷ್ಟು ಮಹಿಳೆಯರಿದ್ದಾರೆ. ಹೀಗಾಗಿ ಮಹಿಳೆಯರಿಗೆ ಪ್ರತ್ಯೇಕ ಪ್ರಣಾಳಿಕೆ ಮಾಡಲು ಕಾಂಗ್ರೆಸ್ ನಿರ್ಧರಿಸಿದೆ. ಅವರ ಬದುಕಿನಲ್ಲಿ ಕಾಂಗ್ರೆಸ್ ಪಕ್ಷ ಕೊಡುಗೆ ನೀಡಿ, ಸಮಸ್ಯೆಗಳಿಗೆ ಪರಿಹಾರ ನೀಡಬೇಕು. ಕಾಂಗ್ರೆಸ್ ಪಕ್ಷ ಮಹಿಳೆಯರಿಗೆ ನಾಯಕತ್ವ, ಶಕ್ತಿ ನೀಡುತ್ತಾ ಬಂದಿದೆ. ಈ ಹಿಂದೆ ಅಂಗನವಾಡಿ ಕಾರ್ಯಕ್ರಮ, ಆಶಾಕಾರ್ಯಕರ್ತರು, ಸ್ತ್ರೀಶಕ್ತಿ ಸ್ವಸಹಾಯ ಕಾರ್ಯಕ್ರಮಗಳನ್ನು ಕಾಂಗ್ರೆಸ್ ಪಕ್ಷ ಮಾತ್ರ ಮಾಡಿಕೊಂಡು ಬಂದಿದೆ ಎಂದರು.
ಚುನಾವಣೆಗೂ ಮುನ್ನ ಮಹಿಳೆಯರ ಸಬಲೀಕರಣಕ್ಕೆ ಮಹಿಳೆಯರಿಗೆ ನೀಡುವ ಭರವಸೆ ಬಿಡುಗಡೆ ಮಾಡಲಾಗುವುದು. ಈ ಹಿನ್ನೆಲೆಯಲ್ಲಿ ಜ.15ರ ಒಳಗೆ ಎಲ್ಲ ಹೆಣ್ಣು ಮಕ್ಕಳು ಹಾಗೂ ನಾಯಕರುಗಳು ತಮ್ಮ ಸಲಹೆ ನೀಡಬಹುದು. ಮಹಿಳೆಯರ ಆಚಾರ, ವಿಚಾರ, ಅಭಿಪ್ರಾಯ ನಮ್ಮ ಧ್ವನಿ ಆಗಬೇಕು. ಮಹಿಳೆಯರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಮಹಿಳೆಯರ ಅಭಿಪ್ರಾಯ ಸಂಗ್ರಹಿಸುತ್ತಿದ್ದೇವೆ. ಸಾಮಾಜಿಕ ಜಾಲತಾಣ, ಇಮೇಲ್, ವಾಟ್ಸ್ಆ್ಯಪ್ ಹಾಗೂ ಪತ್ರದ ಮೂಲಕ ತಮ್ಮ ಸಲಹೆ ನೀಡಬಹುದು.
ಪಂಚಾಯಿತಿ ಮಹಿಳಾ ಸದಸ್ಯರು ಭಾಗಿ:ಇದಕ್ಕಾಗಿ ಜ.16ರಂದು ಅರಮನೆ ಮೈದಾನದಲ್ಲಿ ಮಹಿಳೆಯರ ನಾ ನಾಯಕಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದ್ದು, ಈ ಸಮಾವೇಶದಲ್ಲಿ ಪಂಚಾಯಿತಿ, ಸಹಕಾರ ಸಂಘಗಳಲ್ಲಿ ಸ್ಪರ್ಧೆ ಮಾಡಿದ ಮಹಿಳಾ ನಾಯಕಿಯರು ಭಾಗವಹಿಸುತ್ತಾರೆ. ರಾಜ್ಯದ ಮೂಲೆ ಮೂಲೆಗಳಿಂದ ಪ್ರತಿ ಬೂತ್, ಪಂಚಾಯಿತಿಗಳಿಂದ ಕನಿಷ್ಠ 3-10 ಹೆಣ್ಣು ಮಕ್ಕಳು ಈ ಸಮಾವೇಶಕ್ಕೆ ಆಗಮಿಸಬೇಕು ಎಂದು ಕರೆ ನೀಡಿದರು. ಈಗಾಗಲೇ ಸಾವಿರಾರು ಸಲಹೆಗಳು ಬಂದಿದ್ದು, ಇವುಗಳನ್ನು ಒಂದು ಸಮಿತಿ ಪರಿಶೀಲನೆ ನಡೆಸುತ್ತಿವೆ ಎಂದರು.
ಇನ್ನು ಮಹಿಳೆಯರಿಗೆ ನೀಡಲಾಗುವ ಘೋಷಣೆಗಳನ್ನು ಈಡೇರಿಸುವ ಕುರಿತು ಕೇಳಿದ ಪ್ರಶ್ನೆಗೆ, ನಾವು ನುಡಿದಂತೆ ನಡೆಯುತ್ತೇವೆ. ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ 600 ಭರವಸೆ ನೀಡಿದ್ದು, 550 ಭರವಸೆ ಈಡೇರಿಸಿಲ್ಲ. ಸಿದ್ದರಾಮಯ್ಯ ಅವರ ಸರ್ಕಾರ ಬರುವ ಮುನ್ನ ನಾವು ಕೊಟ್ಟ ಭರವಸೆಗಳಲ್ಲಿ ಶೇ.95ರಷ್ಟು ಪೂರ್ಣಗೊಳಿಸಿ ನಂತರ ಹೆಚ್ಚುವರಿ ಕಾರ್ಯಕ್ರಮ ನೀಡಲಾಗಿತ್ತು ಎಂದು ಹೇಳಿದರು.