ಬೆಂಗಳೂರು:ಸಾಂಕ್ರಾಮಿಕ ಕೊರೊನಾ ಸೋಂಕು ಕಾರಣಕ್ಕೆ ಬರೋಬ್ಬರಿ ಎರಡು ವರ್ಷಗಳ ಕಾಲ ಶಾಲಾ - ಕಾಲೇಜುಗಳು ಬಾಗಿಲು ಮುಚ್ಚಿದ್ದವು. ವಿದ್ಯಾರ್ಥಿಗಳ ಪಾಠ -ಪ್ರವಚನವೆಲ್ಲ ಆನ್ ಲೈನ್ ಆಗಿತ್ತು. ಕಾಲಕ್ರಮೇಣ ಸೋಂಕು ಹರಡುವಿಕೆ ಪ್ರಮಾಣ ಕಡಿಮೆಯಾದ ಕಾರಣಕ್ಕೆ ಶಾಲಾ-ಕಾಲೇಜು ಆರಂಭವಾಗಿವೆ.
ಈ ಮಧ್ಯೆ ಇದೀಗ ಒಮಿಕ್ರಾನ್ ತಂದ ಹೊಸ ವೈರಸ್ ಭೀತಿಗೆ ಮತ್ತೆ ಶಾಲಾ ಕಾಲೇಜುಗಳು ಬಂದ್ ಆಗುವ ಆತಂಕ ಎದುರಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ಈಗಾಗಲೇ ಪೋಷಕರು ತಮ್ಮ ಮಕ್ಕಳನ್ನ ಶಾಲೆಗೆ ಕಳುಹಿಸಲು ಹಿಂದೆಟು ಹಾಕುತ್ತಿದ್ದು, ಭೌತಿಕ ತರಗತಿಗೆ ಗುಡ್ ಬೈ ಹೇಳಿ ಆನ್ ಲೈನ್ ಪಾಠಕ್ಕೆ ಹಿಂದಿರುಗುತ್ತಿದ್ದಾರೆ.
ಇನ್ನು, ಕಳೆದ ನವೆಂಬರ್ 8 ರಿಂದ UKG ಹಾಗೂ LKG ಸೇರಿದಂತೆ ಪೂರ್ಣ ಪ್ರಮಾಣದಲ್ಲಿ ಶಾಲೆ ಪ್ರಾರಂಭವಾಗಿತ್ತು. ಪೂರ್ಣ ಪ್ರಮಾಣದ ಶಾಲೆ ಪ್ರಾರಂಭದ ಬೆನ್ನಲ್ಲೇ ಮತ್ತೆ ಬಂದ್ ಆಗುತ್ತಾ ಅಥವಾ ಪಾಳಿ ಪದ್ಧತಿ ತರಗತಿಗೆ ಶಿಫ್ಟ್ ಆಗುತ್ತಾ? ಎಂಬ ಹಲವು ಗೊಂದಲಗಳು ಶುರುವಾಗಿವೆ. ಇತ್ತ ಒಮಿಕ್ರಾನ್ ಬಗ್ಗೆ ತಜ್ಞರು ಆತಂಕ ವ್ಯಕ್ತಪಡಿಸಿದ ಬೆನ್ನಲ್ಲೇ ಖಾಸಗಿ ಶಾಲೆಗಳ ಒಕ್ಕೂಟ ರುಪ್ಸಾ ಸರ್ಕಾರಕ್ಕೆ ಮನವಿ ಮಾಡಿದೆ.
ಪೂರ್ಣ ಪ್ರಮಾಣದಲ್ಲಿ ಈಗಾಗಲೇ ಶಾಲೆ ಪ್ರಾರಂಭವಾಗಿದೆ. ಶೇ.100 ರಷ್ಟು ಹಾಜರಾತಿಗೆ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ಶಾಲೆಯಲ್ಲಿ ಮಕ್ಕಳ ಕೋವಿಡ್ ಮಾರ್ಗಸೂಚಿ ಪಾಲನೆ ಮಾಡೋದು ಕಷ್ಟ ಸಾಧ್ಯ. ಪೋಷಕರು ಕೂಡ ಮಕ್ಕಳನ್ನ ಶಾಲೆಗೆ ಕಳುಹಿಸಲು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಶಿಕ್ಷಣ ಇಲಾಖೆ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಬೇಕು, ಇಲ್ಲವಾದಲ್ಲಿ ಮತ್ತೆ ಶಾಲೆಗಳು ಅತಂತ್ರಕಕ್ಕೆ ಸಿಲುಕಲಿವೆ ಎಂದು ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಆತಂಕ ಹೊರಹಾಕಿದ್ದಾರೆ.
ಈಗಾಗಲೇ ಸಿಬಿಎಸ್ಇ 10ನೇ ತರಗತಿ ಅರ್ಧ ವಾರ್ಷಿಕ ಪರೀಕ್ಷೆ ಪ್ರಾರಂಭ ವಾಗಿದೆ. ಆದರೆ ರಾಜ್ಯ ಪಠ್ಯಕ್ರಮದ 10ನೇ ತರಗತಿ ಅರ್ಧ ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿ ಪ್ರಕಟವಾಗಿಲ್ಲ. ಇದರ ಮಧ್ಯೆ ಇದೀಗ ಕೊರೊನಾ ಹೊಸ ರೂಪಾಂತರ ವೈರಸ್ ಆತಂಕ ಉಂಟುಮಾಡಿದೆ. ಅದಷ್ಟು ಬೇಗ ರಾಜ್ಯಪಠ್ಯಕ್ರಮದ 10 ನೇ ತರಗತಿ ಅರ್ಧ ವಾರ್ಷಿಕ ಪರೀಕ್ಷೆ ನಡೆಸುವ ಕುರಿತು ಶಿಕ್ಷಣ ಇಲಾಖೆ ಆದೇಶ ಹೊರಡಿಸಬೇಕು ಅಂತ ಸರ್ಕಾರಕ್ಕೆ ಲೋಕೇಶ್ ತಾಳಿಕಟ್ಟೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಇನ್ನೂ ಕೋವಿಡ್ ಲಸಿಕೆ ಪಡೆಯದ 1,707 ಬೋಧಕ-ಬೋಧಕೇತರ ಸಿಬ್ಬಂದಿ: ಕೇರಳ ಸರ್ಕಾರದಿಂದ ಕಠಿಣ ಕ್ರಮ