ಬೆಂಗಳೂರು : ಒಂಟಿ ವೃದ್ದೆಯ ಕೈಕಾಲು ಕಟ್ಟಿ ಕೊಲೆ ಮಾಡಿ, ಮನೆಯಲ್ಲಿದ್ದ ಚಿನ್ನಾಭರಣ ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ಕದ್ದೊಯ್ದಿದ್ದ ಮೂವರು ಹಂತಕರನ್ನು ಮಹಾಲಕ್ಷ್ಮೀ ಲೇಔಟ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಅಶೋಕ್, ಅಂಜನ್ ಹಾಗೂ ಸಿದ್ಧರಾಜು ಬಂಧಿತರು ಎಂದು ಗುರುತಿಸಲಾಗಿದೆ. ಮೇ 27 ರ ಸಂಜೆ ಕಮಲಮ್ಮ (80) ಎಂಬ ವೃದ್ದೆಯ ಮನೆಗೆ ನುಗ್ಗಿದ್ದ ಆರೋಪಿಗಳು ಆಕೆಯನ್ನು ಹತ್ಯೆಗೈದು ಮನೆಯಲ್ಲಿದ್ದ ನಗದು ಹಾಗೂ ಚಿನ್ನ ದೋಚಿ ಪರಾರಿಯಾಗಿದ್ದರು.
ಬೆಟ್ಟಿಂಗ್ ಸಾಲ ತೀರಿಸಲು ದರೋಡೆ:ಪ್ಲಂಬಿಂಗ್ ಕೆಲಸ ಮಾಡುತ್ತಿದ್ದ ಅಶೋಕ್, ಆಟೋ ಚಾಲಕರಾದ ಅಂಜನ್ ಹಾಗೂ ಸಿದ್ಧರಾಜು ಐಪಿಎಲ್ ಸಂದರ್ಭದಲ್ಲಿ ಬೆಟ್ಟಿಂಗ್ ಗೀಳಿಗೆ ಬಿದ್ದು ಸಾಕಷ್ಟು ಸಾಲ ಮಾಡಿಕೊಂಡಿದ್ದರು. ಒಂದು ತಿಂಗಳ ಹಿಂದಷ್ಟೇ ಕಮಲಮ್ಮಳ ಮನೆಯಲ್ಲಿ ಪ್ಲಂಬಿಂಗ್ ವರ್ಕ್ ಮಾಡಿದ್ದ ಅಶೋಕ್ 'ವೃದ್ದೆಯ ಮನೆಯನ್ನು ದೋಚಿದರೆ ಸೆಟಲ್ ಆಗಬಹುದು' ಎಂದು ಅಂಜನ್ ಹಾಗೂ ಸಿದ್ಧರಾಜುವಿಗೆ ಹೇಳಿದ್ದ.
ಮೇ 27ರಂದು ಸಂಜೆ ನಾಲ್ಕು ಗಂಟೆಗೆ ಕಮಲಮ್ಮಳ ಮನೆ ಬಳಿ ಬಂದಿದ್ದ ಆರೋಪಿಗಳು 'ಖಾಲಿ ಇರುವ ನಿಮ್ಮ ಮನೆ ಬಾಡಿಗೆಗೆ ಕೊಡ್ತೀರಾ, ಬಿಸ್ಕೆಟ್ ಗೋಡೌನ್ ಮಾಡುತ್ತೇವೆ' ಎಂದು ಕೇಳಿದ್ದಾರೆ. ಕಮಲಮ್ಮ ನಿರಾಕರಿಸಿದ್ದಾರೆ. ಬಳಿಕ ಆರು ಗಂಟೆ ಸುಮಾರಿಗೆ ಪುನಃ ಮನೆ ಬಳಿ ಬಂದ ಆರೋಪಿಗಳನ್ನು ಕಂಡ ಕಮಲಮ್ಮ, ಈ ಹಿಂದೆ ಬಂದಿದ್ದ ಹುಡುಗರೇ ತಾನೇ, ಎಂದು ಬಾಗಿಲು ತೆರೆದಿದ್ದಾರೆ. ತಕ್ಷಣ ಆರೋಪಿಗಳು ಕಮಲಮ್ಮಳ ಮೇಲೆ ಹಲ್ಲೆ ಮಾಡಿ, ಆಕೆ ಕಿರುಚದಂತೆ ಬಾಯಿಗೆ ಬಟ್ಟೆ ತುರುಕಿ, ಕೈಕಾಲುಗಳನ್ನು ಕಟ್ಟಿ, ಮನೆಯಲ್ಲಿದ್ದ ಚಿನ್ನಾಭರಣ ದೋಚಿದ್ದರು. ಪರಾರಿಯಾಗುವ ಆತುರದಲ್ಲಿ ಆಕೆಯನ್ನು ಗಮನಿಸಿದೇ ತೆರಳಿದ್ದರು. ಉಸಿರಾಡಲೂ ಸಾಧ್ಯವಾಗದೇ ಕಮಲಮ್ಮ ಸ್ಥಳದಲ್ಲೇ ಮೃತಪಟ್ಟಿದ್ದರು.