ಬೆಂಗಳೂರು:ಮಾಸಾಶನಕ್ಕಾಗಿ 5 ಕಿ.ಮೀ. ದೂರ ತೆವಳಿಕೊಂಡು ಬಂದಿರುವ ದಾವಣಗೆರೆ ಜಿಲ್ಲೆಯ ಅಜ್ಜಿಯೊಬ್ಬರು ನಾಗರಿಕ ಸಮಾಜದ ಆತ್ಮಸಾಕ್ಷಿಯನ್ನೇ ಕಲಕಿದ್ದಾರೆ ಎಂದು ದುಃಖ, ಆಘಾತ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಗ್ಯಾರಂಟಿ ಕೊಟ್ಟ ಸರ್ಕಾರಕ್ಕೆ ಕರುಣೆ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಇಂತಹ ಅಶಕ್ತರನ್ನು ಸರ್ಕಾರ ನಿರ್ಲಕ್ಷ್ಯ ಮಾಡಬಾರದು. ನಿಯಮಿತವಾಗಿ ಮಾಸಾಶನ ನೀಡಬೇಕು, ರಾಜ್ಯ ಸರ್ಕಾರ ಗ್ಯಾರಂಟಿಗಳನ್ನು ಕೊಟ್ಟು ಜನರ ಬದುಕು ಹಸನು ಮಾಡುತ್ತಿದ್ದೇವೆ ಎಂದು ಹೇಳುತ್ತಿದೆ. ಹಸನು ಮಾಡುವ ಮಾತು ಒಳ್ಳೆಯದೇ. ಆದರೆ, ಜನಜೀವನ ಹೇಗೆ ಹಳಿ ತಪ್ಪುತ್ತಿದೆ ಎನ್ನುತ್ತಿರುವುದಕ್ಕೆ ಈ ದೃಶ್ಯವೇ ಜೀವಂತ ಸಾಕ್ಷಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮಾಸಾಶನಕ್ಕಾಗಿ 5 ಕಿ.ಮೀ. ದೂರ ತೆವಳಿಕೊಂಡು ಬಂದಿರುವ ಈ ಅಜ್ಜಿ ನಾಗರಿಕ ಸಮಾಜದ ಆತ್ಮಸಾಕ್ಷಿಯನ್ನೇ ಕಲಕಿದ್ದಾರೆ. ಆ ಅಜ್ಜಿ ಅನುಭವಿಸಿರುವ ಯಾತನೆ ನಾವೆಲ್ಲರೂ ತಲೆತಗ್ಗಿಸುವಂತೆ ಮಾಡಿದೆ, ಹಾಗೂ ಸರ್ಕಾರದ ಕ್ಷಮತೆಯನ್ನೂ ಪ್ರಶ್ನಿಸಿದೆ. ಈ ಅಜ್ಜಿ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಕುಣಿಬೆಳಕೆರೆ ಗ್ರಾಮದವರು. ರಸ್ತೆಯ ಬದಿಯಲ್ಲಿ ತೆವಳಿಕೊಂಡು ಸಾಗಿದ ಅಜ್ಜಿಯ ದುಸ್ಥಿತಿಯನ್ನು ಕಂಡು ನನಗೆ ತೀವ್ರ ಆಘಾತ ಉಂಟಾಗಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.