ಬೆಂಗಳೂರು: ಕರ್ನಾಟಕ ಹಾಲು ಒಕ್ಕೂಟದ (ಕೆಎಂಎಫ್) ನಂದಿನಿ ಉತ್ಪನ್ನಗಳು ಸಾಕಷ್ಟು ಜನಪ್ರಿಯವಾಗಿವೆ. ಸದ್ಯ ಕರ್ನಾಟಕಕ್ಕೆ ಅಮುಲ್ ಹಾಲು ಮತ್ತು ಮೊಸರು ಪ್ರವೇಶಿಸಿರುವ ವಿಚಾರ ವಿವಾದಕ್ಕೆ ಕಾರಣವಾಗಿದೆ. ಇದರೊಂದಿಗೆ ನಂದಿನಿ ವಿಷಯ ಚರ್ಚೆಯ ಮುನ್ನಲೆಗೆ ಬಂದಿದೆ. ಅಮುಲ್ ಹಾಲು ಮತ್ತು ಮೊಸರು ಮಾರಾಟಕ್ಕೆ ಅವಕಾಶ ಸಿಕ್ಕರೆ ನಂದಿನಿ ಉತ್ಪನ್ನಗಳಿಗೆ ಪೆಟ್ಟು ಬೀಳುತ್ತದೆ ಎಂಬ ಆತಂಕವನ್ನು ಅನೇಕರು ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ನಂದಿನಿ ಉಳಿಸಿ ಎಂಬ ಅಭಿಯಾನಕ್ಕೂ ಚಾಲನೆ ನೀಡಲಾಗಿದೆ. ಇದರ ನಡುವೆ ಕನ್ನಡದ ಮೇರು ನಟ, ಪದ್ಮಭೂಷಣ ಪುರಸ್ಕೃತ ಡಾ.ರಾಜ್‌ಕುಮಾರ್ ಅವರು ನಂದಿನಿ ಉತ್ಪನ್ನದ ಬಗ್ಗೆ ಮಾತನಾಡಿದ್ದ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.
ಇದನ್ನೂ ಓದಿ:ಡಾ ರಾಜ್ ಕುಮಾರ್ 17ನೇ ಪುಣ್ಮ ಸ್ಮರಣೆ.. ಕುಟುಂಬಸ್ಥರಿಂದ ಸಮಾಧಿಗೆ ಪೂಜೆ
ಅಣ್ಣಾವ್ರು ಪ್ರಚಾರ ಮಾಡಿದ್ದ ಏಕೈಕ ಉತ್ಪನ್ನ: ನಂದಿನಿ ಬ್ರ್ಯಾಂಡ್ ಕನ್ನಡಿಗರ ಅಸ್ಮಿತೆ. ವರನಟ ಡಾ.ರಾಜ್‌ಕುಮಾರ್ ಯಾವುದೇ ಸಂಭಾವನೆ ಪಡೆಯದೇ ನಂದಿನಿ ಉತ್ಪನ್ನಗಳ ರಾಯಭಾರಿಯಾಗಿದ್ದರು. ಅಷ್ಟೇ ಅಲ್ಲ, ಅಣ್ಣಾವ್ರು ತಮ್ಮ ವೃತ್ತಿ ಜೀವನದಲ್ಲಿ ಯಾವುದೇ ಕಂಪನಿಗೆ ಜಾಹೀರಾತನ್ನೂ ಮಾಡಿರಲಿಲ್ಲ. ಅವರು ಪ್ರಚಾರ ಮಾಡಿದ್ದ ಏಕೈಕ ಬ್ರ್ಯಾಂಡ್ ಎಂದರೆ ನಂದಿನಿ ಮಾತ್ರ. ರಸಮಂಜರಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಡಾ. ರಾಜ್ ಅವರು ವೇದಿಕೆ ಮೇಲೆ ನಂದಿನಿ ಫ್ಲೇವರ್ಡ್ ಹಾಲನ್ನು ಸೇವಿಸಿದ್ದರು. "ವೇದಿಕೆಯಿಂದಲೇ ನಂದಿನಿ ಉತ್ಪನ್ನ ಬಹಳ ರುಚಿಯಾಗಿದೆ. ಎಲ್ಲರೂ ಉಪಯೋಗಿಸಬಹುದು" ಎಂದು ಜನತೆಗೆ ಕರೆ ನೀಡಿದ್ದರು. ಇದೀಗ ಇದರ ವಿಡಿಯೋ ಮುನ್ನೆಲೆಗೆ ಬಂದಿದ್ದು, ಹಲವರು ಅದನ್ನು ಹಂಚಿಕೊಳ್ಳಲುವ ಮೂಲಕ ನಂದಿನಿ ಪರವಾಗಿ ಬೆಂಬಲ ಸೂಚಿಸುತ್ತಿದ್ದಾರೆ.
ವಿಡಿಯೋದಲ್ಲಿ ಇರುವುದೇನು?: ನಂದಿನಿ ಉತ್ಪನ್ನ ಬಗ್ಗೆ ಅಣ್ಣಾವ್ರು ಮಾತನಾಡಿದ ವೇದಿಕೆಯ ಮೇಲೆ ಪುತ್ರರಾದ ನಟ ಶಿವರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್‌ಕುಮಾರ್ ಕೂಡ ಇರುತ್ತಾರೆ. ಕಾರ್ಯಕ್ರಮದಲ್ಲಿ ಗೀತೆಯೊಂದನ್ನು ಹಾಡಿದ ನಂತರ ಡಾ.ರಾಜ್ ಅವರಿಗೆ ಶಿವರಾಜ್ ಕುಮಾರ್ ಅವರು ನಂದಿನಿ ಬ್ರ್ಯಾಂಡ್ನ ಫ್ಲೇವರ್ಡ್ ಹಾಲನ್ನು ಕೊಡುತ್ತಾರೆ. ಆಗ ಅದನ್ನು ಸೇವಿಸಿದ ಖುಷಿಯಲ್ಲಿ ಅಣ್ಣಾವ್ರು ''ಬಹಳ ರುಚಿಯಾಗಿದೆ, ಎಲ್ಲರೂ ಉಪಯೋಗಿಸಬಹುದು'' ಎಂದು ಹೇಳುತ್ತಾರೆ. ನಂತರ ಶಿವರಾಜ್ ಕುಮಾರ್ ತಾವೇ ರಾಘವೇಂದ್ರ ರಾಜ್‌ಕುಮಾರ್ ಅವರಿಗೆ ಬಾಟಲಿಯಿಂದ ಹಾಲು ಕುಡಿಸುತ್ತಾರೆ. ಅಲ್ಲದೇ, ಡಾ.ರಾಜ್ ಅವರು ತಮ್ಮ ಎರಡು ನಂದಿನಿ ಬಾಟಲಿಗಳನ್ನು ಕೈಯಲ್ಲಿ ಹಿಡಿದುಕೊಂಡು ತೋರಿಸುವುದನ್ನು ವಿಡಿಯೋದಲ್ಲಿ ಕಾಣಬಹುದು.