ಬೆಂಗಳೂರು: ಓಲಾ, ಉಬರ್ ಮತ್ತು ರಾಪಿಡೊ ಕಂಪನಿಗಳ ಆ್ಯಪ್‌ಗಳಲ್ಲಿ ಆಟೊರಿಕ್ಷಾ ಸೇವೆ ನಾಳೆಯಿಂದ ಸ್ಥಗಿತವಾಗಲಿದೆ ಎಂದು ಸಾರಿಗೆ ಆಯುಕ್ತ ಟಿಎಚ್‌ಎಂ ಕುಮಾರ್ ತಿಳಿಸಿದರು.
ಶಾಂತಿನಗರದ ಸಾರಿಗೆ ಇಲಾಖೆಯಲ್ಲಿ ಓಲಾ ಮತ್ತು ಉಬರ್ ಕಂಪನಿಗಳ ಪ್ರತಿನಿಧಿಗಳ ಜತೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ನಿಯಮದ ಪ್ರಕಾರ ಆಟೊ ಸೇವೆ ಒದಗಿಸಲು ಈ ಕಂಪನಿಗಳಿಗೆ ಅನುಮತಿ ಇಲ್ಲ. ಈ ಸಂಬಂಧ ಸಭೆಯಲ್ಲಿ ಸಂಸ್ಥೆಗಳಿಗೆ ಮನವರಿಕೆ ಮಾಡಿ ಕೊಡಲಾಗಿದೆ. ಸಂಸ್ಥೆಗಳಿಗೆ ಆಟೊ ಸೇವೆಯನ್ನು ಆಪ್‌ನಿಂದ ತೆಗೆಯಲು ಸೂಚಿಸಲಾಗಿದೆ. ಒಂದು ವೇಳೆ, ಸೂಚನೆ ಪಾಲಿಸದೇ ಇದ್ದರೆ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿ, ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ರಸ್ತೆಗಿಳಿದರೆ ದಂಡ ಪ್ರಯೋಗ:ನಾಳೆಯಿಂದ ಓಲಾ, ಉಬರ್, ರಾಪಿಡೋಗಳ ಆಟೊ ಸೇವೆ ಸ್ಥಗಿತವಾಗಲಿದೆ. ಪರವಾನಗಿ ಪಡೆದ ಬಳಿಕವಷ್ಟೇ ಆಟೋಗಳನ್ನು ಚಲಾಯಿಸಬಹುದು. ಅದೂ ಕೂಡಾ ಸಾರಿಗೆ ಇಲಾಖೆ ನಿಗದಿ ಪಡಿಸಿದ ದರದಲ್ಲೇ ಆಟೊ ಓಡಿಸಬೇಕೆಂಬ ನಿಯಮ ಹಾಕಲಾಗಿದೆ. ಒಂದು ವೇಳೆ ನಿಯಮ ಉಲ್ಲಂಘಿಸಿ ಆಟೊ ಓಡಿಸಿದರೆ ಓಲಾ, ಊಬರ್ ಸಂಸ್ಥೆಗೆ 5 ಸಾವಿರ ದಂಡ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಆಟೊ ಸೇವೆ ಕಾನೂನು ಬಾಹಿರವಾಗಿದೆ. ಹೀಗಾಗಿ ಆಟೊ ಚಾಲಕರು ಮತ್ತು ಪ್ರಯಾಣಿಕರು ಈ ಸೇವೆ ಬಳಕೆ ಮಾಡಬಾರದು ಎಂದು ಮನವಿ ಮಾಡಿದರು. ಬಳಕೆ ಮಾಡಿ ತೊಂದರೆ ಅನುಭವಿಸಿದರೆ ಅದಕ್ಕೆ ಇಲಾಖೆ ಜವಾಬ್ದಾರಿ ಆಗುವುದಿಲ್ಲ ಎಂಬ ಪ್ರಕಟಣೆ ಹೊರಡಿಸಲಾಗುವುದು ಎಂದು ಸ್ಪಷ್ಟಪಡಿಸಿದರು.