ಬೆಂಗಳೂರು :ಲಾಕ್ಡೌನ್ನಿಂದ ರಾಜ್ಯ ಸರ್ಕಾರ ಭಾರಿ ಆದಾಯ ಕೊರತೆ ಎದುರಿಸುತ್ತಿದೆ. ಹೀಗಾಗಿ, ಕೊರತೆ ಸರಿದೂಗಿಸಲು ಸರ್ಕಾರ ನಾನಾ ಕಸರತ್ತು ನಡೆಸಲು ಮುಂದಾಗಿದೆ. ಈ ಮಧ್ಯೆ ತೈಲ ಬೆಲೆ ಏರಿಕೆ ಆರ್ಥಿಕ ಸಂಕಷ್ಟದಲ್ಲಿರುವ ರಾಜ್ಯ ಸರ್ಕಾರಕ್ಕೆ ವರದಾನವಾಗಿ ಪರಿಣಮಿಸಿದೆ.
ತೈಲ ಬೆಲೆ ಏರಿಕೆ ಸೊರಗಿದ ರಾಜ್ಯದ ಬೊಕ್ಕಸಕ್ಕೆ ಟಾನಿಕ್ ಆಗಿ ಪರಿಣಮಿಸಿದೆ. ಕಳೆದ 45 ದಿನಗಳಿಂದ ರಾಜ್ಯ ಸಂಪೂರ್ಣ ಲಾಕ್‌ಡೌನ್‌ನಲ್ಲಿದೆ. ಇದರಿಂದ ಬಹುತೇಕ ಆರ್ಥಿಕ ಚಟುವಟಿಕೆಗಳು ಸ್ತಬ್ಧವಾಗಿವೆ. ಹೀಗಾಗಿ, ರಾಜ್ಯದ ಆದಾಯ ಮೂಲಕ್ಕೆ ಹೊಡೆತ ಬಿದ್ದಿದ್ದು, ಬೊಕ್ಕಸ ಬುಡಮೇಲಾಗಿದೆ.
ಹೇಗಪ್ಪಾ ಈ ಆದಾಯ ಕೊರತೆ ನೀಗಿಸುವುದು ಎಂಬ ಚಿಂತೆಯಲ್ಲಿರುವ ಸರ್ಕಾರಕ್ಕೆ ತೈಲ ಬೆಲೆಯಲ್ಲಿನ ನಿರಂತರ ಏರಿಕೆ ಕೊಂಚ ರಿಲೀಫ್ ನೀಡಿದೆ. ಖಾಲಿಯಾಗುತ್ತಿರುವ ಬೊಕ್ಕಸದ ಹೊರೆಯನ್ನು ತೈಲ ಬೆಲೆ ಏರಿಕೆ ಕೊಂಚ ಇಳಿಸುತ್ತಿದೆ. ತೈಲ ಬೆಲೆ ಏರಿಕೆಯಾಗುತ್ತಿದ್ದ ಹಾಗೇ ಮಾರಾಟ ತೆರಿಗೆ ರೂಪದಲ್ಲಿ ರಾಜ್ಯದ ಬೊಕ್ಕಸವೂ ತುಂಬುತ್ತಿದೆ.
ಸದ್ಯ ಬೆಂಗಳೂರಲ್ಲಿ ಪೆಟ್ರೋಲ್ ಬೆಲೆ 97.92ರೂ.ಗೆ ಏರಿಕೆಯಾಗಿದ್ದರೆ, ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 90.81 ರೂ.ಗೆ ಏರಿಕೆ ಕಂಡಿದೆ. ಅದರಲ್ಲೂ ಪ್ರೀಮಿಯಂ ಪೆಟ್ರೋಲ್ ಬೆಲೆ 100ರ ಗಡಿ ದಾಟಿದೆ. ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ 64.41 ರೂ. ಇದ್ದ ಡೀಸೆಲ್ ಬೆಲೆ ಈಗ 90.81ರೂ. ಗೆ ಏರಿಕೆಯಾಗಿದೆ. ಅಂದರೆ ಒಟ್ಟು 26.2 ರೂ. ಏರಿಕೆಯಾಗಿದೆ.
ಕಳೆದ ಏಪ್ರಿಲ್ ತಿಂಗಳಲ್ಲಿ 71.95 ರೂ. ಇದ್ದ ಪೆಟ್ರೋಲ್ ಬೆಲೆ ಈಗ 97.92 ರೂ. ಗೆ ಏರಿಕೆಯಾಗಿದೆ. ಅಂದರೆ ಒಟ್ಟು 25.97 ರೂ. ಏರಿಕೆಯಾಗಿದೆ. ಕಳೆದ ವರ್ಷ ಸೆಪ್ಟೆಂಬರ್ನಿಂದ ಪ್ರಾರಂಭವಾದ ತೈಲ ಬೆಲೆ ಏರಿಕೆಯಿಂದಾಗಿ ಮಾರ್ಚ್ ಅಂತ್ಯದವರೆಗೆ ರಾಜ್ಯದ ಬೊಕ್ಕಸಕ್ಕೆ ಅಂದಾಜು ಸುಮಾರು 2,800-3,000 ಕೋಟಿ ರೂ. ಹೆಚ್ಚುವರಿ ತೆರಿಗೆ ಸಂಗ್ರಹವಾಗಿದೆ.
2020-21ರಲ್ಲಿ ಸುಮಾರು ಮೂರುವರೆ ತಿಂಗಳು ಲಾಕ್‌ಡೌನ್ ಇದ್ದರೂ ತೈಲದ ಮೇಲಿನ ಮಾರಾಟ ತೆರಿಗೆಯಲ್ಲಿ ಹೆಚ್ಚಿನ ಸಂಗ್ರಹವಾಗಿದೆ ಎಂದು ವಾಣಿಜ್ಯ ತೆರಿಗೆ ಅಧಿಕಾರಿಗಳು ತಿಳಿಸಿದ್ದಾರೆ.
ಸದ್ಯ ತೈಲ ಬೆಲೆ ಮೇಲಿನ ಮಾರಾಟ ತೆರಿಗೆ ಹೀಗಿದೆ :ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ತೈಲಗಳ ಮೂಲ ಬೆಲೆ ಮೇಲೆ ಕೇಂದ್ರ ಅಬಕಾರಿ ಸುಂಕ ಮತ್ತು ವಿತರಕರ ಕಮೀಷನ್ ಸೇರ್ಪಡೆಗೊಳಿಸಿದ ನಂತರ ಬರುವ ಒಟ್ಟು ಮೊತ್ತಕ್ಕೆ ರಾಜ್ಯ ಮಾರಾಟ ತೆರಿಗೆ ವಿಧಿಸುತ್ತಿದೆ. ಕಳೆದ ವರ್ಷದ ಬಜೆಟ್‌ನಲ್ಲಿ ಸಿಎಂ ಯಡಿಯೂರಪ್ಪ ಪೆಟ್ರೋಲ್ ಮೇಲಿನ ಮಾರಾಟ ತೆರಿಗೆಯನ್ನು 35%, ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು 24%ಗೆ ಏರಿಸಿದ್ದರು.
ಅದರಂತೆ ಪ್ರಸ್ತುತ ಬೆಂಗಳೂರಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ನ ಮೂಲ ದರ 37 ರೂ. ಇದೆ. ಅದಕ್ಕೆ 32.90 ರೂ. ಕೇಂದ್ರ ಅಬಕಾರಿ ಸುಂಕ ಸೇರಿಸಿದರೆ 69.90 ರೂ. ಒಟ್ಟು ಮೊತ್ತ ಆಗುತ್ತದೆ. ಅದರ ಮೇಲೆ ರಾಜ್ಯ ಮಾರಾಟ ತೆರಿಗೆ (35%) 24.36 ರೂ. ವಿಧಿಸಲಾಗುತ್ತದೆ. ಆಗ ಬರುವ 94.26 ರೂ. ಮೌಲ್ಯಕ್ಕೆ 3.66 ರೂ. ಡೀಲರ್ಸ್ ಕಮೀಷನ್ ಸೇರಿಸಲಾಗುತ್ತದೆ. ಅಂತಿಮವಾಗಿ ಈ ಎಲ್ಲಾ ತೆರಿಗೆಗಳನ್ನು ವಿಧಿಸಿದ ಬಳಿಕ ರಾಜ್ಯದಲ್ಲಿ ಇಂದಿನ ಪೆಟ್ರೋಲ್ ಬೆಲೆ 97.92 ರೂ. ಆಗಿದೆ.
ಅದೇ ರೀತಿ ಪ್ರತಿ ಲೀಟರ್ ಡೀಸೆಲ್ ನ ಮೂಲ ಬೆಲೆ 39.44 ರೂ. ಇದ್ದು, ಅದಕ್ಕೆ 31.80 ರೂ. ಕೇಂದ್ರ ಅಬಕಾರಿ ಸುಂಕ, ರಾಜ್ಯ ಮಾರಾಟ ತೆರಿಗೆ (24%) 17.05 ರೂ. ಮತ್ತು 2.52 ರೂ. ಡೀಲರ್ ಕಮಿಷನ್ ಸೇರಿಸಲಾಗುತ್ತದೆ. ಆ ಮೂಲಕ ಡೀಸೆಲ್ ನ ಇಂದಿನ ದರ 90.81 ರೂ. ಆಗಿದೆ.
97.92 ರೂ.ನಂತೆ ಪ್ರತಿ ಲೀಟರ್ ಪೆಟ್ರೋಲ್ ಮಾರಾಟದ ಮೇಲೆ ರಾಜ್ಯ ತೆರಿಗೆ ರೂಪದಲ್ಲಿ 24.36ರೂ.ನಂತೆ ಸಂಗ್ರಹಿಸುತ್ತಿದ್ದರೆ, 90.81 ರೂ.ನಂತೆ ಪ್ರತಿ ಲೀಟರ್ ಡೀಸೆಲ್ ಮಾರಾಟದ ಮೇಲೆ ರಾಜ್ಯ ಬೊಕ್ಕಸಕ್ಕೆ ತೆರಿಗೆ ರೂಪದಲ್ಲಿ 17.05 ರೂ. ನಂತೆ ಸಂಗ್ರಹಿಸಲಾಗುತ್ತಿದೆ. ಬೆಲೆ ಏರಿಕೆಯಾದಂತೆ ಮಾರಾಟ ತೆರಿಗೆಯೂ ಹೆಚ್ಚಳವಾಗುತ್ತದೆ.
ರಾಜ್ಯದ ಬೊಕ್ಕಸ ಸೇರಿದ ತೈಲ ಆದಾಯ ಎಷ್ಟು?:ರಾಜ್ಯ ಸರ್ಕಾರಕ್ಕೆ ಲಾಕ್ಡೌನ್ನಿಂದ ಎದುರಾಗಿರುವ ಆರ್ಥಿಕ ಸಂಕಷ್ಟದ ಮಧ್ಯೆ ತೈಲ ಬೆಲೆ ಏರಿಕೆ ನಿಜವಾಗಿಯೂ ವರದಾನವಾಗಿ ಪರಿಣಮಿಸಿದೆ. ಸೊರಗಿರುವ ಬೊಕ್ಕಸವನ್ನು ತೈಲ ಮಾರಾಟ ತೆರಿಗೆ ತುಂಬುತ್ತಿದೆ. ಕಳೆದ 3 ವರ್ಷಗಳಲ್ಲಿ ರಾಜ್ಯ ಬೊಕ್ಕಸ ಸೇರಿರುವ ತೈಲ ಮಾರಾಟ ತೆರಿಗೆಯ ಪ್ರಮಾಣ ಹೀಗಿದೆ.
2018-19:
ಪೆಟ್ರೋಲ್ ತೆರಿಗೆ- 5564.52 ಕೋಟಿ
ಡೀಸೆಲ್ ತೆರಿಗೆ- 8730.14 ಕೋಟಿ
ಒಟ್ಟು- 14,294.66 ಕೋಟಿ ರೂ.
2019-20:
ಪೆಟ್ರೋಲ್ ತೆರಿಗೆ- 6037.83 ಕೋಟಿ
ಡೀಸೆಲ್ ತೆರಿಗೆ- 9304.25 ಕೋಟಿ
ಒಟ್ಟು- 15,342.08 ಕೋಟಿ ರೂ.
2020-21:
ಪೆಟ್ರೋಲ್ ತೆರಿಗೆ- 6356.32 ಕೋಟಿ
ಡೀಸೆಲ್ ತೆರಿಗೆ-9504.24 ಕೋಟಿ
ಒಟ್ಟು- 15,860.56 ಕೋಟಿ ರೂ.
ಲಾಕ್‌ಡೌನ್ ಹಿನ್ನೆಲೆ ತೈಲ ಬಳಕೆಯಲ್ಲಿ ಇಳಿಕೆ: ಕಳೆದ 45 ದಿನಗಳಿಂದ ಹೇರಲಾಗಿರುವ ಲಾಕ್‌ಡೌನ್ ನಿಂದ ತೈಲ ಬಳಕೆಯಲ್ಲಿ ಗಣನೀಯ ಇಳಿಕೆಯಾಗಿದೆ. ವಾಹನ ಓಡಾಟ ಸೀಮಿತವಾಗಿದ್ದು, ಕೈಗಾರಿಕಾ ಚಟುವಟಿಕೆಗಳಿಗೂ ನಿರ್ಬಂಧಗಳಿರುವ ಕಾರಣ ತೈಲ ಮಾರಾಟದಲ್ಲಿ ಸುಮಾರು 40% ಇಳಿಕೆ ಕಂಡಿದೆ.
ರಾಜ್ಯದಲ್ಲಿರುವ 4200 ತೈಲ ಬಂಕ್ಗಳು ನಿತ್ಯ ಸರಾಸರಿ 70 ಕಿಲೋ ಲೀಟರ್ ತೈಲ ಮಾರಾಟ ಮಾಡುತ್ತಿವೆ. ಪೆಟ್ರೋಲ್ ಮಾರಾಟದಲ್ಲಂತೂ ಗಣನೀಯ ಇಳಿಕೆಯಾಗಿದೆ. ನಿತ್ಯ ಸರಾಸರಿ 40-50 ಕಿ.ಲೀ ಪೆಟ್ರೋಲ್ ಮಾರಾಟ ಮಾಡುವ ಪ್ರತಿ ಬಂಕ್ ಈಗ ಕೇವಲ 20 ಕಿ.ಲೀ. ಮಾತ್ರ ಮಾರಾಟ ಮಾಡುತ್ತಿದೆ ಎಂದು ಪೆಟ್ರೋಲ್ ಮಾರಾಟ ಡೀಲರ್ ಒಕ್ಕೂಟ ತಿಳಿಸಿದೆ.
ಲಾಕ್‌ಡೌನ್ ಹಿನ್ನೆಲೆ ತೈಲ ಮಾರಾಟ ಕಡಿಮೆಯಾಗಿರುವುದರಿಂದ ಸುಮಾರು 400 ಕೋಟಿ ರೂ. ತೆರಿಗೆ ಕೊರತೆಯಾಗಿದೆ. ಕಳೆದ ಎರಡು ತಿಂಗಳಲ್ಲಿ ತೈಲ ಮಾರಾಟ ತೆರಿಗೆ ರೂಪದಲ್ಲಿ ಸುಮಾರು 3,506.39 ಕೋಟಿ ರೂ. ಸಂಗ್ರಹವಾಗಿದೆ. ಇದರಲ್ಲಿ ಮಾರ್ಚ್ ತಿಂಗಳ ತೆರಿಗೆ ಸಂಗ್ರಹವೂ ಸೇರಿದೆ. ಸಾಮಾನ್ಯವಾಗಿ ಮಾಸಿಕ 1,250 ಕೋಟಿ ರೂ. ಮಾರಾಟ ತೆರಿಗೆ ಸಂಗ್ರಹಿಸಬೇಕಾಗಿದೆ.
ಓದಿ:ದೇಶದಲ್ಲಿ 9.27 ಲಕ್ಷ ಮಕ್ಕಳಿಗೆ ತೀವ್ರ ಅಪೌಷ್ಟಿಕತೆ: ಹೆಚ್ಚಾಗುತ್ತಿದೆ ಹಸಿವಿನ ಹಾಹಾಕಾರ!