ಬೆಂಗಳೂರು : ರಾಜ್ಯದಲ್ಲಿ ಶಾಲೆ ಆರಂಭ ಯಾವಾಗ.? ಈ ಪ್ರಶ್ನೆ ಸದ್ಯ ಹೆಚ್ಚು ಚರ್ಚೆಯಾಗುತ್ತಿದೆ. ಈಗಾಗಲೇ ಕೇಂದ್ರ ಸರ್ಕಾರ ಶಾಲಾ-ಕಾಲೇಜು ಆರಂಭದ ಕುರಿತು ಆಯಾ ರಾಜ್ಯಕ್ಕೆ ಸಂಪೂರ್ಣ ಅಧಿಕಾರ ಕೊಟ್ಟಿದೆ. ಸದ್ಯ ರಾಜ್ಯದಲ್ಲಿ ಸೋಂಕು ಇಳಿಕೆಯತ್ತ ಸಾಗಿದ್ದು, ಶಾಲೆ ಆರಂಭದ ಸಿದ್ಧತೆಯ ಕುರಿತು ಸಭೆಗಳು ಆರಂಭವಾಗಿದೆ. ಇತ್ತ ನವೆಂಬರ್ 17ರಿಂದ ಪದವಿ ಕಾಲೇಜುಗಳು ಆರಂಭವಾಗಲಿದ್ದು, ಶಾಲೆ ಆರಂಭದ ಕುರಿತು ನಾಳೆ ಸಭೆ ನಡೆಯಲಿದೆ.
ನಾಳೆ ಸಮಗ್ರ ಶಿಕ್ಷಣ ಅಭಿಯಾನದಲ್ಲಿ ಬೆಳಗ್ಗೆ 11:30ಕ್ಕೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಅನ್ಬುಕುಮಾರ್ ಹಾಗೂ ಆಯಾ ಜಿಲ್ಲಾ ಉಪ ನಿರ್ದೇಶಕರು, ಬಿಇಒ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಪೆರನ್ಸ್ ನಡೆಸಲಿದ್ದಾರೆ. ಬಳಿಕ ರಾಜ್ಯದಲ್ಲಿ ಶಾಲೆ ಪುನಾರಂಭ ಯಾವಾಗ ಎಂಬುದು ಸಭೆಯಲ್ಲಿ ಅಂತಿಮವಾಗುವ ಸಾಧ್ಯತೆ ಇದೆ.
ಈಗಾಗಲೇ ಇತರೆ ರಾಜ್ಯಗಳಲ್ಲಿ ಶಾಲಾರಂಭ ಮಾಡಲಾಗಿದೆ. ಕಳೆದ 18 ದಿನಗಳಿಂದ ರಾಜ್ಯದಲ್ಲಿ ಕೊರೊನಾ ಪ್ರಕರಣ ಕೂಡ ಕಡಿಮೆಯಾಗುತ್ತಿದ್ದು, ಶಿಕ್ಷಣ ಇಲಾಖೆಯೇ ರಚಿಸಿರೋ ತಜ್ಞರ ಸಮಿತಿಯಿಂದ ಸಂಪೂರ್ಣ ಎಸ್‌ಒಪಿ ನೀಡಲಾಗಿದೆ. ಯಾವ ರೀತಿ ಸುರಕ್ಷತಾ ಕ್ರಮ ಕೈಗೊಳ್ಳಬೇಕು ಎನ್ನುವುದರ ಬಗ್ಗೆ ಮಾರ್ಗಸೂಚಿ ನೀಡಲಾಗಿದೆ.