ಬೆಂಗಳೂರು: ಇನ್ನು ಮುಂದೆ ರೈಲುಗಳ ಜನರಲ್ ಕಂಪಾರ್ಟ್ಮೆಂಟ್ಗಳಲ್ಲಿ ಗಲೀಜು ಕಂಡು ಬಂದರೆ ಅದಕ್ಕೆ ಅಧಿಕಾರಿಗಳನ್ನು ಹೊಣೆ ಮಾಡುತ್ತೇವೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಹಿರಿಯ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿ ಕಾರ್ಯಾಲಯಕ್ಕೆ ಭೇಟಿ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ನಾನು ಬೆಳಗಾವಿಯಿಂದ ಬೆಂಗಳೂರಿಗೆ ರೈಲಿನಲ್ಲಿ ಬಂದಿದ್ದೇನೆ. ಜನ ಸಾಮಾನ್ಯರ ತೊಂದರೆಗಳೇನು ಎಂದು ತಿಳಿದುಕೊಳ್ಳುವ ಸಲುವಾಗಿಯೇ ಜನರಲ್ ಕಂಪಾರ್ಟ್ಮೆಂಟ್ನಲ್ಲಿ ಪ್ರಯಾಣಿಸಿದೆ ಎಂದರು.
ಸಾಮಾನ್ಯರ ಬೋಗಿಗಳಲ್ಲಿ ಸ್ವಚ್ಛತೆ ಇರಲಿಲ್ಲ. ಇನ್ನು ಮುಂದೆ ಹೀಗಾಗಬಾರದು, ಜನರಲ್ ಕಂಪಾರ್ಟ್ಮೆಂಟ್ನಲ್ಲಿಯೂ ಸ್ವಚ್ಛತೆ ಇರಬೇಕು. ಎಸಿ ಹಾಗೂ ಮೊದಲ ದರ್ಜೆ ರೀತಿಯಂತೆಯೇ ಸಾಮಾನ್ಯ ಬೋಗಿಗಳಲ್ಲಿಯೂ ಸ್ವಚ್ಛತೆ ಇರಬೇಕು. ಒಂದು ವೇಳೆ ಕಸ, ಗಲೀಜು ಕಂಡುಬಂದರೆ ಅದಕ್ಕೆ ಅಧಿಕಾರಿಗಳನ್ನು ಹೊಣೆ ಮಾಡಬೇಕಾಗಲಿದೆ ಎಂದು ಖಡಕ್ ಎಚ್ಚರಿಕೆ ನೀಡಿದರು.
ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಬೆಂಗಳೂರು ಸಬರ್ಬನ್ ರೈಲ್ವೆ ಯೋಜನೆ ಜಾರಿ ಸಂಬಂಧ ಇಂದು ಸಂಜೆ ಅಧಿಕಾರಿಗಳ ಸಭೆ ಕರೆದಿದ್ದೇನೆ. ಯೋಜನೆಯ ಪ್ರಗತಿ ಎಷ್ಟಾಗಿದೆ ಎಂದು ತಿಳಿದುಕೊಂಡ ನಂತರ ಪ್ರತಿಕ್ರಿಯಿಸುತ್ತೇನೆ ಎಂದರು.
ಕೇಂದ್ರ ಸಚಿವ ಸಂಪುಟದಲ್ಲಿ ಒಬ್ಬರೇ ಲಿಂಗಾಯತರಿಗೆ ಸಚಿವ ಸ್ಥಾನ ಕೊಟ್ಟಿರುವುದನ್ನು ಸಚಿವ ಸುರೇಶ್ ಅಂಗಡಿ ಸಮರ್ಥಿಸಿಕೊಂಡಿದ್ದಾರೆ. ಲೋಕಸಭೆಯಲ್ಲಿ 65 ಬ್ರಾಹ್ಮಣ ಎಂಪಿಗಳಿದ್ದಾರೆ. ಆದರೆ, ಲಿಂಗಾಯತರು ಇರೋದು ಕೇವಲ 9 ಸಂಸದರು ಮಾತ್ರ. ಹಾಗಿರುವಾಗ ನನ್ನೊಬ್ಬನಿಗೆ ಸಚಿವ ಸ್ಥಾನ ಕೊಟ್ಟಿರೋದು. ಅದೂ ಕೂಡ ರಾಜ್ಯಖಾತೆ ಕೊಟ್ಟಿರುವುದು ಸರಿಯಾಗಿಯೇ ಇದೆ. ಇದರಲ್ಲಿ ಲೋಪ ಹುಡುಕುವುದು ಸರಿಯಲ್ಲ ಎಂದು ಶಾಮನೂರು ಶಿವಶಂಕರಪ್ಪನವರಿಗೆ ಟಾಂಗ್ ಕೊಟ್ಟರು.