ಬೆಂಗಳೂರು: ಪ್ಯಾರಿಸ್ ಒಲಿಂಪಿಕ್ ಗೇಮ್ಸ್ 2024ಕ್ಕೆ ತನ್ನ ತಾಂತ್ರಿಕ ಪ್ರತಿನಿಧಿಗಳು, ಅಧಿಕಾರಿಗಳು, ಅಂಪೈರ್ ಮ್ಯಾನೇಜರ್‌ಗಳು, ಅಂಪೈರ್‌ಗಳು ಮತ್ತು ವೈದ್ಯಕೀಯ ಅಧಿಕಾರಿಗಳ ಹೆಸರನ್ನು ಇಂಟರ್ನ್ಯಾಷನಲ್ ಹಾಕಿ ಫೆಡರೇಶನ್ (ಎಫ್‌ಐಹೆಚ್) ಪ್ರಕಟಿಸಿದೆ. ಪಟ್ಟಿಯಲ್ಲಿ ಕನ್ನಡಿಗ ಆರ್ ವಿ ರಘುಪ್ರಸಾದ್ ಸ್ಥಾನ ಪಡೆದಿದ್ದಾರೆ. ಅಂಪೈರ್ಸ್ ವಿಭಾಗದಲ್ಲಿರುವ ಸ್ಥಾನ ಪಡೆದಿರುವ ಅವರು ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯರಾಗಿದ್ದಾರೆ. ಲಂಡನ್ ಹಾಗೂ ಟೋಕಿಯೋ ಒಲಿಂಪಿಕ್ಸ್‌ನಲ್ಲಿಯೂ ಅಂಪೈರ್ ಆಗಿ ಕಾರ್ಯ ನಿರ್ವಹಿಸಿದ್ದ ರಘುಪ್ರಸಾದ್, ರಿಯೋ ಒಲಿಂಪಿಕ್ಸ್‌ನ ರಿಸರ್ವ್ ಅಂಪೈರ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು.
ಶೀಲಾ ಬ್ರೌನ್ (ದಕ್ಷಿಣ ಆಫ್ರಿಕಾ) ಮತ್ತು ರೋಜರ್ ಸೇಂಟ್ ರೋಸ್ (ಟ್ರಿನಿಡಾಡ್ & ಟೊಬಾಗೋ) ಅಧ್ಯಕ್ಷತೆಯ ಎಫ್‌ಐಎಚ್ ತಾಂತ್ರಿಕ ಅಧಿಕಾರಿಗಳು ಮತ್ತು ಅಂಪೈರಿಂಗ್ ಸಮಿತಿ 2024ರ ಪ್ಯಾರಿಸ್ ಒಲಿಂಪಿಕ್ ಕ್ರೀಡಾಕೂಟಕ್ಕಾಗಿ ತನ್ನ ತಾಂತ್ರಿಕ ಅಧಿಕಾರಿಗಳು, ಅಂಪೈರ್ಸ್ ಗಳನ್ನ ಹೆಸರಿಸಿದೆ.
2024ರ ಪ್ಯಾರಿಸ್ ಒಲಿಂಪಿಕ್ ಗೇಮ್ಸ್‌ನಲ್ಲಿ ಲಿಂಗ ಸಮಾನತೆಯನ್ನು ಕಾಯ್ದುಕೊಳ್ಳುವುದು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ)ಯ ಪ್ರಮುಖ ಗುರಿಯಾಗಿದೆ. ಈ ನಿಟ್ಟಿನಲ್ಲಿ ಇಂಟರ್ನ್ಯಾಷನಲ್ ಹಾಕಿ ಫೆಡರೇಶನ್ ಸಹ ಅಧಿಕಾರಿಗಳು ಮತ್ತು ಅಂಪೈರ್ಗಳನ್ನು ಪ್ರಕಟಿಸಿದೆ. ಹೀಗಾಗಿ ಪ್ರಕಟಿತ ಪಟ್ಟಿಯಲ್ಲಿ 50-50ರ ಪ್ರಮಾಣದಲ್ಲಿ ಆದ್ಯತೆ ನೀಡಲಾಗಿದೆ.