ಬೆಂಗಳೂರು: ಚಾಮರಾಜಪೇಟೆ ಆಟದ ಮೈದಾನದಲ್ಲಿ ಗಣರಾಜ್ಯೋತ್ಸವ ಆಚರಿಸಲು ಕೊನೆಗೂ ಅಧಿಕೃತ ಗ್ರೀನ್ ಸಿಗ್ನಲ್ ದೊರೆತಿದ್ದು, ನಾಳೆ ಬೆಳಗ್ಗೆ 8 ಗಂಟೆಗೆ ಬೆಂಗಳೂರು ಉತ್ತರ ವಿಭಾಗದ ಎ. ಸಿ ಡಾ. ಎಂ. ಜಿ ಶಿವಣ್ಣ ಧ್ವಜಾರೋಹಣ ನೆರವೇರಿಸಲಿದ್ದಾರೆ ಎಂದು ಕಂದಾಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಳೆದ ವರ್ಷ ಚಾಮರಾಜಪೇಟೆ ನಾಗರೀಕ ಒಕ್ಕೂಟದಿಂದ ಸ್ವಾತಂತ್ರ್ಯ ದಿನ ಆಚರಣೆಗೆ ಅನುಮತಿ ನೀಡುವಂತೆ ಕೋರಲಾಗಿತ್ತು. ಆದರೆ, ಒಕ್ಕೂಟಕ್ಕೆ ಅನುಮತಿ ನೀಡದೆ ಕಂದಾಯ ಇಲಾಖೆಯಿಂದಲೇ ಆಚರಿಸಲಾಗಿತ್ತು. ಇದೀಗ ಮತ್ತೆ ಕಂದಾಯ ಇಲಾಖೆಯಿಂದ ಗಣರಾಜ್ಯೋತ್ಸವ ಆಚರಿಸಲಾಗುತ್ತಿದೆ ಎಂದಿದ್ದಾರೆ.
ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳಿಲ್ಲದೆ 1 ಗಂಟೆಯ ಸಮಾರಂಭ ನಡೆಸಲು ನಿರ್ಧರಿಸಲಾಗಿದೆ. ಇಂದು ಬೆಳಗ್ಗೆಯಿಂದ ಮೈದಾನವನ್ನು ಸ್ವಚ್ಛಗೊಳಿಸಿ, ವಿದ್ಯುತ್ ದೀಪಗಳ ಮೂಲಕ ಸಿಂಗರಿಸುವ ಕೆಲಸ ಮಾಡಲಾಗಿದೆ. ಮೈದಾನದ ಸುತ್ತಮುತ್ತ ಬ್ಯಾರಿಕೇಡ್ ಅಳವಡಿಸಲಾಗಿದೆ. ಕಾರ್ಯಕ್ರಮದಲ್ಲಿ ಸಾರ್ವಜನಿಕರು ಮುಕ್ತವಾಗಿ ಭಾಗವಹಿಸಲು ಅವಕಾಶ ನೀಡಲಾಗಿದೆ. ಸ್ಥಳೀಯ ಸಂಸದರು, ಶಾಸಕರು ಸೇರಿದಂತೆ ಗಣ್ಯರಿಗೆ ಆಹ್ವಾನ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಪೊಲೀಸ್ ಭದ್ರತೆ:ಕಾರ್ಯಕ್ರಮದ ಸಂದರ್ಭದಲ್ಲಿ ಅಹಿತಕರ ಘಟನೆ ನಡೆಯದಂತೆ ಪೂರ್ವ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಿಗಿ ನೇತೃತ್ವದಲ್ಲಿ 3 ಜನ ಇನ್ಸ್ಪೆಕ್ಟರ್ ಮತ್ತು 50 ಜನ ಕಾನ್ಸ್ಟೇಬಲ್ಗಳನ್ನು ಸ್ಥಳದಲ್ಲಿ ಭದ್ರತೆಗೆ ನಿಯೋಜಿಸಲಾಗಿದೆ. ಮೈದಾನದ ಸುತ್ತ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಸುಮಾರು 50 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.
ಸರ್ಕಾರಕ್ಕೆ ಪತ್ರ ಬರೆದಿದ್ದ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್
ಗಣರಾಜ್ಯೋತ್ಸವವನ್ನು ಬೆಂಗಳೂರಿನ ಮೈಸೂರು ವೃತ್ತದ ಸಮೀಪವಿರುವ ಈದ್ಗಾ ಮೈದಾನದಲ್ಲಿ ಆಚರಿಸುವಂತೆ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಸರ್ಕಾರಕ್ಕೆ ನಿನ್ನೆ (ಮಂಗಳವಾರ) ಮನವಿ ಮಾಡಿದ್ದರು. ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಸಚಿವರಿಗೆ ಪತ್ರ ಬರೆದಿದ್ದ ಅವರು, ಗಣರಾಜ್ಯೋತ್ಸವವನ್ನು ಈ ವರ್ಷ ಇದೇ ಮೈದಾನದಲ್ಲಿ ಅದ್ಧೂರಿಯಾಗಿ ಆಚರಿಸಬೇಕು. ಕೂಡಲೇ ಸರ್ಕಾರ ಇದಕ್ಕೆ ನಿರ್ದೇಶನ ನೀಡಿ ಸರ್ಕಾರದ ವತಿಯಿಂದಲೇ ಕಾರ್ಯಕ್ರಮ ನಡೆಸಬೇಕು ಎಂದು ಕೋರಿದ್ದರು.