ದೊಡ್ಡಬಳ್ಳಾಪುರ :ಅರ್ಕಾವತಿ ನದಿ ಪಾತ್ರದ ಚಿಕ್ಕತುಮಕೂರು ಮತ್ತು ದೊಡ್ಡತುಮಕೂರು ಕೆರೆಗಳಿಗೆ ವಿಷಯುಕ್ತ ನೀರು ಬಿಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆ ದೊಡ್ಡಬಳ್ಳಾಪುರ ನಗರಸಭೆಯ ಇಂಜಿನಿಯರ್ಗಳ ತಂಡ ಭೇಟಿ ನೀಡಿ ನಮ್ಮಿಂದ ಯಾವುದೇ ಲೋಪವಾಗಿಲ್ಲವೆಂದು ತಿಳಿಸಿದ್ದಾರೆ. ಅಲ್ಲದೇ ಕೆರೆ ನೀರು ವಿಷವಾಗಲು ಬಾಶೆಟ್ಟಿಹಳ್ಳಿ ಕೈಗಾರಿಕಾಗಳಿಂದ ಬರುವ ತ್ಯಾಜ್ಯ ನೀರು ಕಾರಣ ಎಂದು ಹೇಳಿದ್ದಾರೆ.
ದೊಡ್ಡಬಳ್ಳಾಪುರ ನಗರಸಭೆಯ ಎಸ್ಟಿಪಿ ಘಟಕಕ್ಕೆ ಅಧಿಕಾರಿಗಳ ತಂಡ ಭೇಟಿ ಚಿಕ್ಕತುಮಕೂರು ಮತ್ತು ದೊಡ್ಡತುಮಕೂರು ಕೆರೆಗಳಿಗೆ ದೊಡ್ಡಬಳ್ಳಾಪುರ ನಗರಸಭೆಯ ಒಳಚರಂಡಿ ನೀರು ಮತ್ತು ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ತ್ಯಾಜ್ಯ ನೀರು ಹರಿದು ಬರುತ್ತಿದೆ. ವೈಜ್ಞಾನಿಕವಾಗಿ ಶುದ್ದೀಕರಣವಾಗದೇ ತ್ಯಾಜ್ಯ ನೀರು ಕೆರೆಗೆ ಸೇರಿದ ಪರಿಣಾಮ ಕೆರೆಗಳಲ್ಲಿ ಹಾನಿಕಾರಕ ಪ್ಲೋರೈಡ್, ಮೆಗ್ನಿಶಿಯಂ ಮತ್ತು ಯೂರಿಯಾ ಪತ್ತೆಯಾಗಿದೆ.
ಬಳಸಲು ಯೋಗ್ಯವಲ್ಲದ ನೀರು ನಮಗೆ ಬೇಡವೆಂದು ಹೋರಾಟಕ್ಕೆ ಮುಂದಾಗಿರುವ ದೊಡ್ಡತುಮಕೂರು ಗ್ರಾಮಸ್ದರು ದೊಡ್ಡಬಳ್ಳಾಪುರ ನಗರಸಭೆಗೆ ಪಾದಯಾತ್ರೆ ನಡೆಸುವ ಎಚ್ಚರಿಕೆ ನೀಡಿದ್ದರು.
ದೊಡ್ಡತುಮಕೂರು ಗ್ರಾಮಸ್ಥರ ಹೋರಾಟಕ್ಕೆ ಹೆದರಿದ ದೊಡ್ಡಬಳ್ಳಾಪುರ ನಗರಸಭೆಯ ಇಂಜಿನಿಯರ್ಗಳ ತಂಡ ಚಿಕ್ಕತುಮಕೂರು ಕೆರೆಯ ಅಂಗಳದಲ್ಲಿರುವ ನಗರಸಭೆಯ ತ್ಯಾಜ್ಯ ನೀರು ಶುದ್ಧೀಕರಣ (ಎಸ್ಟಿಪಿ) ಘಟಕಕ್ಕೆ ಭೇಟಿ ನೀಡಿದರು. ದೊಡ್ಡಬಳ್ಳಾಪುರ ನಗರದ ಒಳಚರಂಡಿ ನೀರು ವೈಜ್ಞಾನಿಕ ಸಂಸ್ಕರಣೆಯಾಗದೆ ನೇರವಾಗಿ ಕೆರೆಗೆ ಸೇರಿದ ಪರಿಣಾಮ ಕೆರೆ ನೀರು ವಿಷವಾಗಿದೆ ಎಂಬ ಆರೋಪವನ್ನ ಇಂಜಿನಿಯರ್ಗಳು ತಳ್ಳಿ ಹಾಕಿದರು.
ನಗರ ಸಭೆಯ ಎಸ್ಟಿಪಿ ಘಟಕದಲ್ಲಿ ನದಿ ಮತ್ತು ಕೆರೆಗಳು ನೈಸರ್ಗಿಕವಾಗಿ ಶುದ್ದೀಕರಣವಾಗುವ ರೀತಿ ತ್ಯಾಜ್ಯ ನೀರು ಸಂಸ್ಕರಣೆಯಾಗಿ ಕೆರೆಗೆ ಸೇರುತ್ತದೆ. ಕೆರೆ ನೀರು ವಿಷವಾಗಲು ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಿಂದ ಬರುವ ತ್ಯಾಜ್ಯ ನೀರನ್ನು ಸಂಸ್ಕರಣೆ ಮಾಡುವ ಎಸ್ಟಿಪಿ ಘಟಕ ಇಲ್ಲದಿರುವುದೇ ಕಾರಣ ಎಂದರು.
ಜತೆಗೆ ಎಸ್ಟಿಪಿ ಘಟಕದಲ್ಲಿನ ಹೊಂಡದಲ್ಲಿರುವ ನೀರನ್ನು ಪರೀಕ್ಷೆಗೆ ತೆಗೆದುಕೊಂಡಿದ್ದು, ಲ್ಯಾಬ್‌ನಿಂದ ಬರುವ ವರದಿಯನ್ನ ನೋಡಿ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ದೊಡ್ಡಬಳ್ಳಾಪುರ ನಗರಸಭೆ ಇಂಜಿನಿಯರ್ಗಳ ಮಾತಿಗೆ ಒಪ್ಪದ ಗ್ರಾಮಸ್ಥರು ನಮ್ಮ ಕೆರೆಗಳಿಗೆ ವೈಜ್ಞಾನಿಕವಾಗಿ ಸಂಸ್ಕರಿಸಿ ನೀರನ್ನು ಬೀಡಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಇದನ್ನೂ ಓದಿ:ಬೆಳ್ಳಂಬೆಳಗ್ಗೆ ವಾಹನ ಸವಾರರರಿಗೆ ಬಿಸಿ ಮುಟ್ಟಿಸುತ್ತಿರುವ ಪೊಲೀಸರು : 200 ವಾಹನಗಳು ಸೀಜ್....