ಬೆಂಗಳೂರು:ಸೆ.21ರಿಂದ ಮಳೆಗಾಲದ ಅಧಿವೇಶನ ಆರಂಭಗೊಳ್ಳಲಿದ್ದು, ಹೀಗಾಗಿ ರಾಜ್ಯದ ಎಲ್ಲ ಶಾಸಕರಿಗೆ ಸಾಮೂಹಿಕ ಕೋವಿಡ್ ಟೆಸ್ಟ್ ಮಾಡಲು ಚಿಂತನೆ ನಡೆಸಲಾಗುತ್ತಿದೆ.
ಕೊರೊನಾ ನಡುವೆ ಅಧಿವೇಶನ ನಡೆಸಬೇಕಾಗಿದ್ದು, ಸರ್ಕಾರ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಸೋಂಕಿನ ಅಬ್ಬರ ಜೋರಾಗಿರುವುದರಿಂದ ಸಾಮಾಜಿಕ ಅಂತರ ಕಾಯ್ದುಕೊಂಡು ಅಧಿವೇಶನ ನಡೆಸಲು ವಿಧಾನಸಭೆ ಸಚಿವಾಲಯ ಅಧಿಕಾರಿಗಳು ನಿರ್ಧರಿಸಿದ್ದಾರೆ. ಎಲ್ಲ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಅಧಿವೇಶನ ನಡೆಸಲು ತಯಾರಿ ಮಾಡಿಕೊಳ್ಳಲಾಗುತ್ತಿದೆ.
ಶಾಸಕರಿಗೆ ಸಾಮೂಹಿಕ ಕೋವಿಡ್ ಟೆಸ್ಟ್:
ಅಧಿವೇಶನದಲ್ಲಿ ಪಾಲ್ಗೊಳ್ಳುವ ಎಲ್ಲ ಶಾಸಕರಿಗೆ ಕೋವಿಡ್ ಟೆಸ್ಟ್ ಮಾಡಿಸಲು ಹಾಗೂ ಕೊರೊನಾ ಪರೀಕ್ಷೆ ಬಳಿಕವೇ ಶಾಸಕರು ಅಧಿವೇಶನಕ್ಕೆ ಬರಲು ಅನುವು ಮಾಡಿಕೊಡಲಾಗುವುದು. ಹೀಗಾಗಿ ಅಧಿವೇಶನಕ್ಕೂ ಮುನ್ನ ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರಿಗೆ ಸಾಮೂಹಿಕ ಕೋವಿಡ್ ಟೆಸ್ಟ್ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಚಿವಾಲಯ ಅಧಿಕಾರಿಗಳು ತಿಳಿಸಿದ್ದಾರೆ.
ಪಂಜಾಬ್ನಲ್ಲಿ ಅಧಿವೇಶನ ಶುರುವಾಗುವುದಕ್ಕೂ ಮುಂಚಿತವಾಗಿ 23 ಶಾಸಕರಲ್ಲಿ ಸೋಂಕು ಪತ್ತೆಯಾಗಿದೆ. ಪಂಜಾಬ್ನಲ್ಲಿ ನಡೆದಿರುವ ಈ ಪ್ರಸಂಗದಿಂದ ವಿಧಾನಸಭೆ ಸಚಿವಾಲಯದ ಅಧಿಕಾರಿಗಳು ಆತಂಕಗೊಂಡಿದ್ದಾರೆ. ಹೀಗಾಗಿ ಈ ಮಹತ್ವದ ನಿರ್ಧಾರ ಕೈಗೊಳ್ಳಲು ಮುಂದಾಗಿದ್ದಾರೆ.
ಈಗಾಗಲೇ ಪಂಜಾಬ್ನ ಎಲ್ಲ ಶಾಸಕರಿಗೂ ಸಾಮೂಹಿಕ ಕೋವಿಡ್ ಟೆಸ್ಟ್ ಮಾಡಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಮುಂಜಾಗ್ರತಾ ಕ್ರಮವಾಗಿ ಈ ಚಿಂತನೆ ನಡೆಸಿದೆ.
ಆರೋಗ್ಯ ಇಲಾಖೆ ಜೊತೆ ಚರ್ಚೆ:
ಎಲ್ಲ ಶಾಸಕರಿಗೆ ಕೋವಿಡ್ ಟೆಸ್ಟ್ ಬಗ್ಗೆ ಸದ್ಯದಲ್ಲೇ ಸ್ಪೀಕರ್ ಸಭೆ ನಡೆಸಿ ನಿರ್ಧರಿಸಲಿದ್ದಾರೆ. ಈ ಬಗ್ಗೆ ಮುಂದಿನ ವಾರ ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆ ಸ್ಪೀಕರ್ ಕಾಗೇರಿ ಚರ್ಚೆ ನಡೆಸಲಿದ್ದು, ಶಾಸಕರಿಗೆ ಟೆಸ್ಟ್ ಮಾಡಿಸುವ ಬಗ್ಗೆ ಆರೋಗ್ಯಾಧಿಕಾರಿಗಳ ಸಲಹೆ ಪಡೆಯಲಿದ್ದಾರೆ.
ಸಾಮೂಹಿಕ ಟೆಸ್ಟ್ ಮಾಡಿಸುವುದಾದರೆ ಯಾವ ಮಾದರಿ ಟೆಸ್ಟ್ ಮಾಡಿಸುವುದು, ರಾಪಿಡ್ ಆಂಟಿಜೆನ್ ಟೆಸ್ಟ್ ಅಥವಾ ಆಟಿ-ಪಿಸಿಆರ್ ಟೆಸ್ಟ್ ನಡೆಸಬೇಕೋ ಎಂಬ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಲಿದ್ದಾರೆ.