ಬೆಂಗಳೂರು:ಮಾಸ್ಕ್ ಧರಿಸದೆ ಇರುವವರ ವಿರುದ್ಧ ಕೇಸ್ ಹಾಕುತ್ತಿದ್ದ ಪೊಲೀಸರ ಮೇಲೆ ಹಲ್ಲೆ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಮೂವರನ್ನು ಜಾಲಹಳ್ಳಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ: ಮೂವರನ್ನು ಬಂಧಿಸಿದ ಜಾಲಹಳ್ಳಿ ಪೊಲೀಸರು - Attack On Police News
ಮಾಸ್ಕ್ ಧರಿಸದೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಇದ್ದುದ್ದರ ಕುರಿತಾಗಿ ಪ್ರಶ್ನಿಸಿದ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ ಮೂವರು ಖದೀಮರನ್ನು ಬಂಧಿಸಲಾಗಿದೆ.
ಕಾರ್ಲ್ ಮಾರ್ಕ್ಸ್, ಶಿವಕುಮಾರ್, ಎಸ್ ಬಾಬು ಬಂಧಿತ ಆರೋಪಿಗಳು. ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಿಬಿಎಂಪಿ ಮಾರ್ಷಲ್ ಮುನಿರಾಜು ಅವರು ಮಾಸ್ಕ್ ಧರಿಸದೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಇದ್ದುದ್ದರ ಕುರಿತಾಗಿ ವಿಚಾರಿಸಿದ್ದಾರೆ. ಆದರೆ ಈ ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು. ಇನ್ನು ಇವರ ಮೇಲೆ ಸರ್ಕಾರದ ಆದೇಶದಂತೆ ಪ್ರಕರಣ ದಾಖಲಿಸಿಕೊಳ್ಳಲು ಜಾಲಹಳ್ಳಿ ಠಾಣೆಯ ಸಿಬ್ಬಂದಿಗಳು ಹಾಜರಾಗಿದ್ದರು.
ಗೋಕುಲ ಬ್ರಿಡ್ಜ್ ಬಳಿಯ ಮೋಟಾರ್ಸ್ ಗ್ಯಾರೇಜ್ನಲ್ಲಿ ಮಾಸ್ಕ್ ಹಾಕದೆ ಕೆಲಸ ಮಾಡತ್ತಿದ್ದ ಬಾಬು ಎಂಬಾತನನ್ನು ಪೊಲೀಸರು ಪ್ರಶ್ನಿಸಿದ್ದಾರೆ. ಈ ವೇಳೆ ಮೂವರು ಆರೋಪಿಗಳು ಸೇರಿಕೊಂಡು ನಮಗೇನು ಕೊರೊನಾ ಇದೆಯೇ? ನಾವ್ಯಾಕೆ ಮಾಸ್ಕ್ ಹಾಕಬೇಕು. ಯಾವುದೇ ಕಾರಣಕ್ಕೂ ಮಾಸ್ಕ್ ಹಾಕಲ್ಲವೆಂದು ಹಲ್ಲೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಕಾರಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಮೂವರನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.