ಕರ್ನಾಟಕ

karnataka

ETV Bharat / state

ರಾಜ್ಯ ಸರ್ಕಾರಕ್ಕೆ ಒಬಿಸಿ ಮೀಸಲಾತಿಗೆ ಜಾತಿಗಳನ್ನು ಸೇರಿಸುವ ಅಧಿಕಾರ.! ಯಾವ ಸಮುದಾಯದ ಬೇಡಿಕೆ ಏನು? - OBC Reservation Power to State Government

ಭಾರತದಲ್ಲಿ ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದಿರುವ ಜಾತಿಗಳನ್ನು ಒಬಿಸಿ ಪಟ್ಟಿಗೆ ಸೇರಿಸುವ ಅಧಿಕಾರವನ್ನು ರಾಜ್ಯಗಳಿಗೆ ನೀಡುವ ಸಾಂವಿಧಾನಿಕ ತಿದ್ದುಪಡಿ ಮಸೂದೆ "OBC Reservation Amendment Bill 2021" ಅನ್ನು ಕೇಂದ್ರ ಸರ್ಕಾರ ಇತ್ತೀಚೆಗೆ ಲೋಕಸಭೆಯಲ್ಲಿ ಮಂಡಿಸಿತ್ತು. ಈ ಮಸೂದೆಗೆ ರಾಷ್ಟ್ರಪತಿಗಳು ಅಂಕಿತ ಹಾಕಿದರೆ, ಮೂರು ವರ್ಷಗಳ ಹಿಂದೆ ರಾಜ್ಯ ಸರ್ಕಾರಗಳಿಂದ ಕಸಿದುಕೊಂಡಿದ್ದ ಸಾಂವಿಧಾನಿಕ ಹಕ್ಕೊಂದನ್ನು ಕೇಂದ್ರವು ರಾಜ್ಯಗಳಿಗೆ ವಾಪಸ್ ಕೊಟ್ಟಂತಾಗುತ್ತದೆ. ಯಾವ ಸಮುದಾಯದ ಬೇಡಿಕೆ ಏನು ಎಂಬ ಮಾಹಿತಿ ಇಲ್ಲಿದೆ.

ರಾಜ್ಯ ಸರ್ಕಾರಕ್ಕೆ ಒಬಿಸಿ ಮೀಸಲಾತಿಗೆ ಜಾತಿಗಳನ್ನು ಸೇರಿಸುವ ಅಧಿಕಾರ
ರಾಜ್ಯ ಸರ್ಕಾರಕ್ಕೆ ಒಬಿಸಿ ಮೀಸಲಾತಿಗೆ ಜಾತಿಗಳನ್ನು ಸೇರಿಸುವ ಅಧಿಕಾರ

By

Published : Aug 14, 2021, 4:51 PM IST

Updated : Aug 14, 2021, 4:59 PM IST

ಬೆಂಗಳೂರು: ರಾಜ್ಯದಲ್ಲಿ ಮೀಸಲಾತಿ ಕಲ್ಪಿಸುವ ಕುರಿತು ಬೇಡಿಕೆಗಳು ಹೆಚ್ಚಾಗಿ ಕೇಳಿಬರುತ್ತಿವೆ. ಪ್ರಮುಖವಾಗಿ ಪಂಚಮಸಾಲಿ, ಕುರುಬ, ವಾಲ್ಮೀಕಿ ಸಮುದಾಯದವರು ಹೋರಾಟ ನಡೆಸುವ ಮೂಲಕ ಸರ್ಕಾರಕ್ಕೆ ಒತ್ತಾಯಿಸುತ್ತಿದ್ದಾರೆ. ಇದರ ನಡುವೆ ಮತ್ತಷ್ಟು ಜಾತಿಗಳು ಹಲವು ಬೇಡಿಕೆಗಳನ್ನು ಇಟ್ಟುಕೊಂಡು ಹೋರಾಟ ಮಾಡುವ ತಯಾರಿಯಲ್ಲಿವೆ.

ರಾಜ್ಯ ಸರ್ಕಾರಕ್ಕೆ ಮೀಸಲಾತಿ ದೊಡ್ಡ ತಲೆನೋವಾಗಿ ಪರಿಣಮಿಸುವ ಸಾಧ್ಯತೆ ಇದೆ. ಇದರ ಮಧ್ಯೆ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಸಂವಿಧಾನದ 127ನೇ ತಿದ್ದುಪಡಿ ಮಸೂದೆ ಅಂಗೀಕಾರವಾಗಿದೆ. ಎರಡೂ ಸದನಗಳಲ್ಲಿ ಒಬಿಸಿ ಮೀಸಲಾತಿಗೆ ಜಾತಿಗಳನ್ನು ಸೇರಿಸುವ ಅಧಿಕಾರವನ್ನು ಆಯಾ ರಾಜ್ಯಗಳಿಗೆ ಸಂಪೂರ್ಣವಾಗಿ ನೀಡಲಾಗಿದೆ. ಭಾರತದಲ್ಲಿ ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದಿರುವ ಜಾತಿಗಳನ್ನು ಒಬಿಸಿ ಪಟ್ಟಿಗೆ ಸೇರಿಸುವ ಅಧಿಕಾರವನ್ನು ರಾಜ್ಯಗಳಿಗೆ ನೀಡುವ ಸಾಂವಿಧಾನಿಕ ತಿದ್ದುಪಡಿ ಮಸೂದೆ "OBC Reservation Amendment Bill 2021" ಅನ್ನು ಕೇಂದ್ರ ಸರ್ಕಾರ ಇತ್ತೀಚೆಗೆ ಲೋಕಸಭೆಯಲ್ಲಿ ಮಂಡಿಸಿತ್ತು.

ಈ ಮಸೂದೆಗೆ ರಾಷ್ಟ್ರಪತಿಗಳು ಅಂಕಿತ ಹಾಕಿದರೆ, ಮೂರು ವರ್ಷಗಳ ಹಿಂದೆ ರಾಜ್ಯ ಸರ್ಕಾರಗಳಿಂದ ಕಸಿದುಕೊಂಡಿದ್ದ ಸಾಂವಿಧಾನಿಕ ಹಕ್ಕೊಂದನ್ನು ಕೇಂದ್ರವು ರಾಜ್ಯಗಳಿಗೆ ವಾಪಸ್ ಕೊಟ್ಟಂತಾಗುತ್ತದೆ. ಒಬಿಸಿ ಪಟ್ಟಿಗೆ ಜಾತಿಗಳನ್ನು ಸೇರಿಸುವ ರಾಜ್ಯಗಳ ಅಧಿಕಾರವನ್ನು ಮರಳಿ ರಾಜ್ಯಗಳಿಗೆ ನೀಡುವ ಸಲುವಾಗಿ ಕೇಂದ್ರ ಸರ್ಕಾರ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ಮಂಡಿಸಿತ್ತು. ಇದೀಗ ಈ ಅಧಿಕಾರ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸಂಪೂರ್ಣ ಸಿಕ್ಕಿದಂತಾಗಿದೆ.

ಮಹಾರಾಷ್ಟ್ರ, ಗುಜರಾತ್, ಹರಿಯಾಣ, ರಾಜಸ್ಥಾನದಲ್ಲೂ ಕೆಲವು ಸಮುದಾಯಗಳು ತಮ್ಮ ಜಾತಿಯನ್ನು ಒಬಿಸಿಗೆ ಸೇರಿಸಬೇಕೆಂದು ಹಿಂದಿನಿಂದಲೂ ಹೋರಾಟ ನಡೆಸುತ್ತಿದ್ದು, ಈ ತಿದ್ದುಪಡಿ ಮಸೂದೆಯಿಂದ ಇನ್ನಷ್ಟು ಸಮುದಾಯಗಳು ಒಬಿಸಿ ಸೇರ್ಪಡೆಗೆ ಬೇಡಿಕೆ ಇಡುವ ನಿರೀಕ್ಷೆ ಇದೆ. ಅದೇ ರೀತಿ ಕರ್ನಾಟಕದಲ್ಲೂ ಕೆಲವು ಸಮುದಾಯಗಳು ತಮ್ಮನ್ನು ಒಬಿಸಿ ಪಟ್ಟಿಗೆ ಸೇರಿಸಬೇಕೆಂಬ ಆಗ್ರಹ ಮಾಡಿವೆ.

ಯಾವ ಸಮುದಾಯದ ಬೇಡಿಕೆ ಏನು?:

ಕುರುಬ:ಹಿಂದುಳಿದ ವರ್ಗಗಳಲ್ಲಿ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಸಮುದಾಯ ಎಂದರೆ ಅದು ಕುರುಬ ಜನಾಂಗ. ಈ ಸಮುದಾಯ ಪ್ರಸ್ತುತ 2ಎ ನಲ್ಲಿದೆ. ಎಸ್​ಟಿ ಸಮುದಾಯಕ್ಕೆ ಸೇರಿಸುವಂತೆ ಒತ್ತಾಯ ಕೇಳಿ ಬರುತ್ತಿದೆ. ರಾಜ್ಯ ಸರ್ಕಾರ ಈ ಬಗ್ಗೆ ಕುಲ ಶಾಸ್ತ್ರ ಅಧ್ಯಯನಕ್ಕೆ ಆದೇಶ ನೀಡಿದೆ. ಕಾಡುಕುರುಬ, ಜೇನು ಕುರುಬ, ಗೊಂಡ ಸಮುದಾಯಗಳು ಈಗಾಗಲೇ ಎಸ್​ಟಿಯಡಿ ಇವೆ.

ಪಂಚಮಸಾಲಿ: ಪಂಚಮಸಾಲಿ ಇದು ವೀರಶೈವ ಲಿಂಗಾಯತ ಸಮುದಾಯದ ಒಂದು ಒಳ ಪಂಗಡವಾಗಿದ್ದು, 3ಬಿ ಪ್ರವರ್ಗದಲ್ಲಿದೆ. ಈಗ 2ಎಗೆ ಸೇರಿಸಿ ಎಂಬುದು ಪಂಚಮಸಾಲಿ ಸಮುದಾಯದ ಒತ್ತಾಯ. ಸರ್ಕಾರವು ಈ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಲು ಹಿಂದುಳಿದ ವರ್ಗಗಳ ಆಯೋಗಕ್ಕೆ ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದಾಗಲೇ ನಿರ್ದೇಶನ ನೀಡಿದೆ.

ವಾಲ್ಮೀಕಿ: ವಾಲ್ಮೀಕಿ ಸಮುದಾಯ ಈಗಿರುವ ಮೀಸಲಾತಿಯನ್ನು ಶೇ.3 ರಿಂದ 7.5ಕ್ಕೆ ಹೆಚ್ಚಿಸುವಂತೆ ಬೇಡಿಕೆ ಇಟ್ಟಿದೆ. ಈಗಾಗಲೇ ನ್ಯಾ.ನಾಗಮೋಹನದಾಸ್‌ ನೇತೃತ್ವದ ಆಯೋಗ ವರದಿ ನೀಡಿದ್ದು, ಶೇ.7.5 ರಷ್ಟು ಮೀಸಲಾತಿ ನೀಡುವಂತೆ ಶಿಫಾರಸು ಮಾಡಿದೆ. ಶೀಘ್ರವೇ ಮೀಸಲಾತಿ ಹೆಚ್ಚಳ ಮಾಡುವುದಾಗಿ ಹಿಂದಿನ ಮುಖ್ಯಮಂತ್ರಿ ಭರವಸೆ ನೀಡಿದ್ದರು.

ಒಕ್ಕಲಿಗ: ಒಕ್ಕಲಿಗ ಸಮುದಾಯ ರಾಜ್ಯದಲ್ಲಿ ಎರಡನೇ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಸಮುದಾಯ. ಪ್ರಸಕ್ತ ಪ್ರವರ್ಗ 3ಎ ಯಲ್ಲಿ ಮೀಸಲಾತಿ ಹೊಂದಿದೆ. ಹಿಂದುಳಿದಿರುವಿಕೆ ಆಧಾರದಲ್ಲಿ ಪ್ರವರ್ಗ 2ಎಗೆ ಸೇರಿಸುವಂತೆ ಆಗ್ರಹಿಸಲಾಗುತ್ತಿದೆ.

ಗಂಗಾಮತಸ್ಥರು: ಅಂಬಿಗ, ಮೊಗವೀರ, ಕೊಲಿಕಾರ, ಬೆಸ್ತ, ಸುಣಗಾರ, ವಾಲಿಕಾರ, ಕೋಲಿ, ಕಬ್ಬಲಿಗ ಸಹಿತ 39 ಒಳ ಪಂಗಡಗಳಿವೆ. ರಾಷ್ಟ್ರ ಮಟ್ಟದಲ್ಲಿ ಕೋಲಿ ಸಮಾಜ ಎಸ್​ಟಿ ಪ್ರವರ್ಗದಲ್ಲಿದೆ. ರಾಜ್ಯ ಸರ್ಕಾರ ಈ ಸಮುದಾಯಗಳನ್ನು ಎಸ್​ಟಿಗೆ ಸೇರಿಸುವಂತೆ ಕೇಂದ್ರಕ್ಕೆ ಶಿಫಾರಸು ಮಾಡಿದೆ.

ಗಾಣಿಗ: ಗಾಣಿಗ ಸಮುದಾಯ ವೀರಶೈವ ಲಿಂಗಾಯತದ ಒಳ ಪಂಗಡಗಳಲ್ಲಿ ಒಂದಾಗಿದ್ದು, ಪ್ರಸ್ತುತ ಪ್ರವರ್ಗ 2ಎ ನಲ್ಲಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಲಿಂಗಾಯತ ಗಾಣಿಗ ಎಂದು ನಮೂದಿಸಿದರೆ, ಪ್ರವರ್ಗ 3ಬಿ ಮೀಸಲಾತಿ ದೊರೆಯುತ್ತದೆ. ಹಿಂದೂ ಗಾಣಿಗ ಎಂದು ನಮೂದಿಸಿದರೆ ಪ್ರವರ್ಗ 2ಎ ನಲ್ಲಿ ಸಿಗುತ್ತಿದೆ. ಎಸ್​ಟಿ ಗೆ ಸೇರಿಸುವಂತೆ ಒತ್ತಾಯ ಕೇಳಿ ಬರುತ್ತಿದೆ.

ಮಡಿವಾಳ:ಪ್ರಸ್ತುತ ಪ್ರವರ್ಗ 2ಎ ನಲ್ಲಿರುವ ಮಡಿವಾಳ ಸಮುದಾಯ, ಎಸ್​ಸಿ ಗೆ ಸೇರಿಸಬೇಕೆಂಬ ಬೇಡಿಕೆ ಬಂದಿದೆ.

ಸವಿತಾ ಸಮಾಜ: ಪ್ರಸ್ತುತ ಪ್ರವರ್ಗ 2ಎ ನಲ್ಲಿರುವ ಸವಿತಾ ಸಮಾಜ ಶೇ.15ರಷ್ಟು ಮೀಸಲಾತಿ ಇದ್ದು, ಸವಿತಾ ಸಮಾಜ ಸಹಿತ ವೃತ್ತಿ ಆಧಾರಿತ ಸಮುದಾಯಗಳಿಗೆ ಶೇ.8ರಷ್ಟು ಮೀಸಲಾತಿ ನೀಡಿ ಪ್ರತ್ಯೇಕ ಪ್ರವರ್ಗ ರಚಿಸಬೇಕು ಎಂಬ ಬೇಡಿಕೆ ಬಂದಿದೆ.

ಮರಾಠ:ಮರಾಠ ಸಮುದಾಯ ಪ್ರಸಕ್ತ ಪ್ರವರ್ಗ 3ಬಿ ನಲ್ಲಿದೆ. ಪ್ರವರ್ಗ 2ಎಗೆ ಸೇರಿಸುವಂತೆ ಬೇಡಿಕೆ ಇದೆ. ಹಿಂದುಳಿದ ವರ್ಗಗಳ ಆಯೋಗ ಈಗಾಗಲೇ ಈ ಬಗ್ಗೆ ಶಿಫಾರಸು ಮಾಡಿದೆ. ಕರಾವಳಿ, ಕೊಡಗು ಜಿಲ್ಲೆಗಳಲ್ಲಿ ಮರಾಠ ಮತ್ತು ಮರಾಠಿ ಹೆಸರಿನಲ್ಲಿರುವ ಸಮುದಾಯವನ್ನು ಎಸ್​ಟಿ ಗೆ ಸೇರಿಸಲಾಗಿದೆ.

ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಜಾತಿಗಳನ್ನು ಒಬಿಸಿ ಪಟ್ಟಿಗೆ ಸೇರಿಸುವ ಅಧಿಕಾರವನ್ನು ರಾಜ್ಯಗಳಿಗೆ ನೀಡುವ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ಕೇಂದ್ರ ಸರ್ಕಾರ ಮಂಡಿಸಿದ್ದು, ರಾಷ್ಟ್ರಪತಿಗಳು ಅದಕ್ಕೆ ಅಂಕಿತ ಹಾಕಿದರೆ ಬೇಡಿಕೆ ಇಟ್ಟಿರುವ ಸಮುದಾಯಗಳಿಗೆ ಅನುಕೂಲವಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕು.

ಓದಿ:ಪ್ರಾಥಮಿಕ - ಪ್ರೌಢ ಶಾಲೆಗಳಲ್ಲಿ ದೈಹಿಕ ಶಿಕ್ಷಕರ ನೇಮಕ ಮಾಡಿ: ಶಿಕ್ಷಣ ಸಚಿವರಿಗೆ ಕ್ರೀಡಾ ಸಚಿವ ನಾರಾಯಣಗೌಡ ಪತ್ರ

Last Updated : Aug 14, 2021, 4:59 PM IST

For All Latest Updates

ABOUT THE AUTHOR

...view details