ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕ್ಷಣಗಣನೆ ಆರಂಭವಾಗಿದ್ದು ಎಂಟು ಮಂದಿ ಶಾಸಕರು ಇದೇ ಮೊದಲ ಬಾರಿಗೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಇಂದು ಪೂರ್ಣ ಪ್ರಮಾಣದಲ್ಲಿ ರಚನೆಗೊಳ್ಳಲಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಎಂಟು ಸಚಿವರು ಕಳೆದ ವಾರ ಪ್ರಮಾಣವಚನ ಸ್ವೀಕರಿಸಿದ್ದರು.
ಇದೀಗ ಬಾಕಿ ಉಳಿದಿರುವ 24 ಸಚಿವ ಸ್ಥಾನಗಳನ್ನು ಪೂರ್ತಿ ಮಾಡಲಾಗುತ್ತಿದೆ. ರಾಜ್ಯಪಾಲ ಥಾವರ್ ಚಂದ ಗೆಹ್ಲೋಟ್ ನೂತನ ಸಚಿವರಿಗೆ ಪ್ರಮಾಣವಚನ ಬೋಧಿಸಲಿದ್ದಾರೆ. ಬೆಳಗ್ಗೆ 11.45 ಕ್ಕೆ ಸಮಾರಂಭ ಹಮ್ಮಿಕೊಳ್ಳಲಾಗಿದೆ. ರಾಜಭವನದ ಒಳಗಿನ ಗಾಜಿನ ಮನೆಯಲ್ಲಿ ಸಮಾರಂಭಕ್ಕೆ ವೇದಿಕೆ ಸಿದ್ಧಪಡಿಸಲಾಗಿದೆ.
ನೂತನ ಸಚಿವರಿಗೆ ಹಾಗೂ ಅವರ ಕುಟುಂಬ ಸದಸ್ಯರಿಗೆ ಮತ್ತು ಪಾಸ್ ಇದ್ದವರಿಗೆ ಮಾತ್ರ ರಾಜಭವನದ ಒಳಗೆ ಪ್ರವೇಶ ಅವಕಾಶ ಇದೆ. ಅಗತ್ಯ ಪ್ರಮಾಣದ ಪಾಸುಗಳನ್ನು ಈಗಾಗಲೇ ವಿತರಿಸಲಾಗಿದ್ದು ಪಾಸ್ ನೊಂದಿಗೆ ಬಂದವರಿಗೆ ಮಾತ್ರ ಪ್ರವೇಶ ನೀಡಲಾಗುತ್ತಿದೆ. ಹೊರ ಭಾಗದಲ್ಲಿ ಸಹ ಅಭಿಮಾನಿಗಳಿಗೆ ಪ್ರಮಾಣವಚನ ಸ್ವೀಕಾರವನ್ನು ವೀಕ್ಷಿಸುವ ಅವಕಾಶ ಕಲ್ಪಿಸಲಾಗುತ್ತಿದೆ. ಬೃಹತ್ ಡಿಜಿಟಲ್ ಡಿಸ್ಪ್ಲೇಗಳನ್ನು ಅಳವಡಿಸಿ ವೀಕ್ಷಕರಿಗೆ ಅವಕಾಶ ಮಾಡಿಕೊಡಲಾಗುತ್ತಿದೆ.
ಮೊದಲ ಬಾರಿ ಸಚಿವರಾಗುತ್ತಿರುವವರು:ನೂತನ ಸಚಿವರಾಗಿ ಇಂದು ಪ್ರಮಾಣವಚನ ಸ್ವೀಕರಿಸುತ್ತಿರುವವರಲ್ಲಿ ಎಂಟು ಮಂದಿ ಇದೇ ಮೊದಲ ಬಾರಿಗೆ ಸಚಿವರಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಾರೆ. ಪಿರಿಯಾಪಟ್ಟಣ ವೆಂಕಟೇಶ್, ಲಕ್ಷ್ಮೀ ಹೆಬ್ಬಾಳ್ಕರ್, ಮಂಕಾಳು ವೈದ್ಯ, ಬೈರತಿ ಸುರೇಶ್, ಡಾ.ಎಂ ಸಿ ಸುಧಾಕರ್, ಬೋಸರಾಜು, ಮಧು ಬಂಗಾರಪ್ಪ ಹಾಗೂ ಬಿ ನಾಗೇಂದ್ರ ಸಚಿವರಾಗಿ ಮೊದಲ ಬಾರಿಗೆ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ.