ಬೆಂಗಳೂರು : ಇತ್ತೀಚೆಗೆ ಸರ್ಕಾರದಿಂದ ನಾಮ ನಿರ್ದೆಶನಗೊಂಡ ಐವರು ವಿಧಾನಪರಿಷತ್ ಸದಸ್ಯರು ಇಂದು ಪ್ರಮಾಣ ವಚನ ಸ್ವೀಕರಿಸಿದರು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಸಿನಿಮಾ ಕ್ಷೇತ್ರದಿಂದ ಸಿ.ಪಿ. ಯೋಗೇಶ್ವರ್, ಸಾಹಿತ್ಯ ಕ್ಷೇತ್ರದಿಂದ ಹೆಚ್. ವಿಶ್ವನಾಥ್, ಸಮಾಜ ಸೇವಾ ಕ್ಷೇತ್ರದಿಂದ ಶಾಂತಾರಾಮ್ ಸಿದ್ದಿ, ಭಾರತಿ ಶೆಟ್ಟಿ ಹಾಗೂ ಶಿಕ್ಷಣ ಕ್ಷೇತ್ರದಿಂದ ಡಾ. ತಳವಾರ್ ಸಾಬಣ್ಣ ಪ್ರಮಾಣ ವಚನ ಸ್ವೀಕರಿಸಿದರು.
ಪ್ರಮಾಣ ವಚನ ಸ್ವೀಕರಿಸಿದ ಐವರು ವಿಧಾನಪರಿಷತ್ ಸದಸ್ಯರು ವಿಧಾನ ಪರಿಷತ್ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಪ್ರತಿಜ್ಞಾ ವಿಧಿ ಬೋಧಿಸಿದರು. ನಂತರ ಹೂಗುಚ್ಛ ನೀಡಿ ಅಭಿನಂದಿಸಿದರು. ಮೊದಲು ಸಿ.ಪಿ. ಯೋಗೇಶ್ವರ್, ಎರಡನೆಯದಾಗಿ ಮಾಜಿ ಸಚಿವ ಹೆಚ್. ವಿಶ್ವನಾಥ್ ಭಗವಂತನ ಹೆಸರಲ್ಲಿ ಪ್ರಮಾಣ ಸ್ವೀಕರಿಸಿದರು. ಭಾರತಿ ಶೆಟ್ಟಿ ಭಾರತ ಮಾತೆಯ ಹೆಸರಲ್ಲಿ ಪ್ರಮಾಣ ಸ್ವೀಕರಿಸಿದರೆ, ಶಾಂತರಾಮ್ ಸಿದ್ದಿ ಭಗವಾನ್ ಬಿರ್ಶಾಮುಂಡ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದರು. ಕೊನೆಯದಾಗಿ ತಳವಾರ್ ಸಾಬಣ್ಣ ಭಗವಂತನ ಹೆಸರಲ್ಲಿ ಪ್ರಮಾಣ ಸ್ವೀಕರಿಸಿದರು.
ಪ್ರಮಾಣವಚನ ಕಾರ್ಯಕ್ರಮದಲ್ಲಿ ಯಾವುದೇ ಸಾಮಾಜಿಕ ಅಂತರ ಇರಲಿಲ್ಲ. ಸಚಿವ ಸಿ.ಟಿ ರವಿ ಹೊರತುಪಡಿಸಿದರೆ ಯಾವೊಬ್ಬ ಸಚಿವರೂ ಹಾಜರಿರಲಿಲ್ಲ. ಕಾರ್ಯಕ್ರಮದ ಕೊನೆಯಲ್ಲಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಆಗಮಿಸಿ ನೂತನ ಸದಸ್ಯರಿಗೆ ಅಭಿನಂದಿಸಿ ತೆರಳಿದರು.