ಬೆಂಗಳೂರು:ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್ ಕಾಲೇಜುಗಳಿಗೆ ಪರವಾನಗಿ ನೀಡಿದ ವಿಚಾರದ ಕುರಿತು ಸದನ ಸಮಿತಿ ರಚಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ಪಷ್ಟವಾಗಿ ನಿರಾಕರಿಸಿದ್ದು, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ಸಮಿತಿ ರಚಿಸಲು ಸಿದ್ಧ ಎಂದು ತಿಳಿಸಿದ್ದಾರೆ.
ವಿಧಾನಪರಿಷತ್ ಕಲಾಪದಲ್ಲಿ ಜೆಡಿಎಸ್ ಇಂದೂ ಕೂಡ ಧರಣಿ ಮುಂದುವರೆಸಿತು. ಜೆಡಿಎಸ್ ಸದಸ್ಯ ಶ್ರೀಕಂಠೇಗೌಡ ಮಾತನಾಡಿ, 60 ಬಿಎಸ್ಸಿ ನರ್ಸಿಂಗ್, 42 ಪ್ಯಾರಾ ಮೆಡಿಕಲ್ ಕಾಲೇಜು ಮಂಜೂರು ಮಾಡಲಾಗಿದೆ. ಬಹಳ ಕಡೆ ಕಾಲೇಜುಗಳು ಭೌತಿಕವಾಗಿ ನಡೆಯುತ್ತಿಲ್ಲ. ದೊಡ್ಡ ಪ್ರಮಾಣದಲ್ಲಿ ಶುಲ್ಕ ಕಟ್ಟಿ ಪ್ರಮಾಣಪತ್ರ ಪಡೆಯಲಾಗುತ್ತಿದೆ. ಹೊರ ರಾಜ್ಯದವರು ಬಂದು ಪ್ರಮಾಣಪತ್ರ ಪಡೆದು ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಸನದ ಸಮಿತಿ ರಚಿಸಿ ಈ ಬಗ್ಗೆ ಅಧ್ಯಯನ ನಡೆಸಬೇಕಿದೆ. ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಕಾರಣ ನಿರ್ಲಕ್ಷ್ಯ ಮಾಡದೇ ಸರಿದಾರಿಗೆ ತರಬೇಕಿದೆ. ಅದಕ್ಕಾಗಿ ಸದನ ಸಮಿತಿ ರಚಿಸಿ ಎಂದು ಒತ್ತಾಯಿಸಿದರು.
ಜೆಡಿಎಸ್ ಬೇಡಿಕೆಗೆ ಎಸ್.ಆರ್. ಪಾಟೀಲ್ ಸಾಥ್:
ಜೆಡಿಎಸ್ ಬೇಡಿಕೆಗೆ ಸಾಥ್ ನೀಡಿದ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್, ಇದು ಮೂರನೇ ದಿನ. ಜೆಡಿಎಸ್ ಸದಸ್ಯರು ಸದನದಲ್ಲಿದ್ದಾರೆ. ಸರ್ಕಾರ ಯಾಕೆ ಪ್ರತಿಷ್ಠೆಯಾಗಿ ಪರಿಗಣಿಸಿದೆ. ಸದನ ಸಮಿತಿ ರಚಿಸಿ ಸತ್ಯಾಸತ್ಯತೆ ಹೊರಬರಲಿದೆ. ಆಳುವ ಪಕ್ಷದ ಸದಸ್ಯರ ಅಧ್ಯಕ್ಷತೆಯಲ್ಲೇ ತಪ್ಪು ಸರಿಪಡಿಸುವ ಕೆಲಸವಾಗಬೇಕು. ಸರ್ಕಾರಕ್ಕೆ ಸದಸ್ಯರ ಬಗ್ಗೆ ನಂಬಿಕೆ ಇರಬೇಕು. ಈಗಾಗಲೇ ಮೂರು ಸದನ ಸಮಿತಿ ಮಾಡಲಾಗಿದೆ. ಇನ್ನೊಂದು ಮಾಡಿದರೆ ಏನೂ ಆಗಲ್ಲ. ಸಿಎಂ ತಮ್ಮ ಕಚೇರಿಯಲ್ಲಿ ಸಭೆ ನಡೆಸಿ ಇತ್ಯರ್ಥ ಪಡಿಸಲಿ ಎಂದು ಮನವಿ ಮಾಡಿದರು.