ಬೆಂಗಳೂರು: 2019ರ ಜಾನುವಾರು ಗಣತಿ ಪ್ರಕಾರ ಹಸು, ಹೋರಿ, ಎಮ್ಮೆ ಮತ್ತು ಕೋಣಗಳು ಸೇರಿ ರಾಜ್ಯದಲ್ಲಿ ಒಟ್ಟು 84,69,004 ಜಾನುವಾರುಗಳಿವೆ. ಇವುಗಳ ಸಾಕಾಣಿಕೆಗೆ ವಾರ್ಷಿಕ 2 ಕೋಟಿ 76 ಲಕ್ಷ ಟನ್ ಮೇವಿನ ಅಗತ್ಯವಿದೆ.
ಆದರೆ ನಮ್ಮಲ್ಲಿರುವ ಮೇವಿನ ಲಭ್ಯತೆ 1 ಕೋಟಿ 49 ಲಕ್ಷ ಟನ್ ಮಾತ್ರ. ಭಾರತ ಕೃಷಿ ಆಧಾರಿತ ದೇಶವಾಗಿದ್ದು, ದೇಶದ ಆರ್ಥಿಕತೆಯಲ್ಲಿ ಕೃಷಿಯ ಪಾತ್ರ ಗಣನೀಯವಾಗಿದೆ. ಅನಾದಿ ಕಾಲದಿಂದಲೂ ಕೃಷಿ ಮತ್ತು ಪಶು ಪಶುಸಂಗೋಪನೆ ಚಟುವಟಿಕೆಗಳು ಒಂದೇ ನಾಣ್ಯದ ಎರಡು ಮುಖಗಳಂತಿದ್ದು, ಗ್ರಾಮೀಣ ಜನಜೀವನಕ್ಕೆ ಆರ್ಥಿಕ ಭದ್ರತೆ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಈ ನಿಟ್ಟಿನಲ್ಲಿ ಪಶುಪಾಲನೆ ಮತ್ತು ಪಶುವೈದ್ಯ ಸೇವಾ ಇಲಾಖೆಯೂ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿ ವಿವಿಧ ದರ್ಜೆಯ ಒಟ್ಟು 4212 ಪಶುವೈದ್ಯ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ ಜಿಲ್ಲಾ ಪಾಲಿಕ್ಲಿನಿಕ್ 30, ಪಶು ಆಸ್ಪತ್ರೆ 665, ಪಶು ಚಿಕಿತ್ಸಾಲಯ 2135, ಪ್ರಾರ್ಥಮಿಕ ಪಶು ಚಿಕಿತ್ಸಾಲಯ 1206, ಸಂಚಾರಿ ಪಶು ಚಿಕಿತ್ಸಾಲಯ 176 ಒಟ್ಟು 4212 ಸಂಸ್ಥೆಗಳಿವೆ.
ಇಲಾಖೆಯ ಗುರಿ ಮತ್ತು ಸಾಧನೆ ಏನು?: ರೋಗಗ್ರಸ್ಥ ಪ್ರಾಣಿ ಮತ್ತು ಪಕ್ಷಿಗಳ ಚಿಕಿತ್ಸೆ ಹಾಗೂ ರೋಗಗಳ ತಡೆಗಟ್ಟುವಿಕೆಗಾಗಿ ವ್ಯಾಪಕ ಲಸಿಕಾ ಕಾರ್ಯಕ್ರಮ. ಪಶುಸಂಗೋಪನೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಉತ್ಪಾದನೆಯನ್ನು ಹೆಚ್ಚಿಸಿ ಉತ್ಪಾದಕರು ಮತ್ತು ಗ್ರಾಹಕರಿಗೆ ಅನುಕೂಲ ಮಾಡುವುದು. ಕೃತಕ ಗರ್ಭಧಾರಣಾ ಯೋಜನೆಯ ಅನುಷ್ಠಾನ, ವಿದೇಶಿ ಹೋರಿ ಮತ್ತು ಉತ್ತಮ ಕೋಣಗಳ ಮೂಲಕ ತಳಿ ಸಂವರ್ಧನೆ ಮಾಡಿ ಪಶು ಸಂಪತ್ತು ಹಾಗೂ ಹಾಲಿನ ಇಳುವರಿಯನ್ನು ಹೆಚ್ಚಿಸುವುದರ ಜೊತೆಗೆ ಸ್ಥಳೀಯ ತಳಿಗಳ ಸಂವರ್ಧನೆಗೂ ಕೃತಕ ಗರ್ಭಧಾರಣೆ ಸಹಾಯಕವಾಗಿದೆ. ಕೋಳಿ, ಹಂದಿ, ಕುರಿ ಉತ್ಪಾದನೆ, ಮೇವು ಉತ್ಪಾದನೆ ಮತ್ತು ಮೊಲ ಸಾಕಾಣಿಕೆ ಅಭಿವೃದ್ಧಿಪಡಿಸಲಾಗುತ್ತಿದೆ ಎನ್ನುತ್ತಾರೆ ಅಧಿಕಾರಿಗಳು. ರೈತರಿಗೆ ಮತ್ತು ಇಲಾಖಾ ಅರೆ ತಾಂತ್ರಿಕ ಸಿಬ್ಬಂದಿಗೆ ಹೈನುಗಾರಿಕೆ, ಕುರಿ, ಕೋಳಿ ಮತ್ತು ಹಂದಿ ಸಾಕಾಣಿಕೆ ವಿಷಯಗಳಲ್ಲಿ ತರಬೇತಿ ಕಾರ್ಯಕ್ರಮಗಳು.
ಇಲಾಖೆಯು ವಿಶೇಷ ಘಟಕ ಯೋಜನೆ, ಗಿರಿಜನ ಉಪಯೋಜನೆ, ಪಶುಭಾಗ್ಯ, ಭೂ ಸಮೃದ್ಧಿ, ಬರಪೀಡಿತ ಪ್ರದೇಶಗಳ ಅಭಿವೃದ್ಧಿ, ಜಾನುವಾರು ತಳಿ ಅಭಿವೃದ್ಧಿ ಯೋಜನೆಯಂತಹ ಸಾಮಾಜಿಕ ಆರ್ಥಿಕ ಕಾರ್ಯಕ್ರಮಗಳ ಸಕ್ರಿಯ ಅನುಷ್ಠಾನ ಮಾಡುತ್ತಿದೆ. ಸಮಗ್ರ ಮಾದರಿ ಸಮೀಕ್ಷೆ ಕಾರ್ಯಕ್ರಮವನ್ನು ಪ್ರತಿ ವರ್ಷವೂ ಬೇಸಿಗೆ, ಮಳೆ, ಚಳಿಗಾಲಗಳಲ್ಲಿ ಹಮ್ಮಿಕೊಂಡು ಪ್ರಾಣಿ ಉತ್ಪನ್ನಗಳಾದ ಹಾಲು, ಮೊಟ್ಟೆ, ಮಾಂಸ ಮತ್ತು ಉಣ್ಣೆಗಳ ಉತ್ಪಾದನಾ ಪ್ರಮಾಣದ ಅಂಕಿ-ಅಂಶ ಪಡೆಯುತ್ತಿದೆ. ಜೊತೆಗೆ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಜಾನುವಾರುಗಣತಿ ನಡೆಸುತ್ತಿದೆ. ರಾಜ್ಯದಲ್ಲಿರುವ ಎಲ್ಲಾ ತಾಲೂಕುಗಳಲ್ಲಿ ಮತ್ತು 30 ಜಿಲ್ಲೆಗಳ ಕೇಂದ್ರ ಸ್ಥಾನಗಳಲ್ಲಿ ಹಾಗೂ ರಾಜ್ಯ ಮಟ್ಟದಲ್ಲಿ 2 ಕೇಂದ್ರಗಳಲ್ಲಿ ಅಂತರ್ಜಾಲದಲ್ಲಿ ಮಾಹಿತಿ ನಿರ್ವಹಣಾ ಘಟಕಗಳನ್ನು ಸ್ಥಾಪಿಸಲಾಗಿದ್ದು, ರೋಗೋದ್ರೇಕಗಳ ಮಾಹಿತಿಯನ್ನು ಆನ್ಲೈನ್ ಮೂಲಕ ಒದಗಿಸಲಾಗುತ್ತಿದೆ.
ಇಲಾಖೆಯ ಪ್ರಮುಖ ಕಾರ್ಯಕ್ರಮಗಳು
ರಾಸುಗಳ ಜೀವವಿಮಾ ಯೋಜನೆ: ಕರ್ನಾಟಕ ಜಾನುವಾರು ಅಭಿವೃದ್ಧಿ ಸಂಸ್ಥೆ, ಬೆಂಗಳೂರು (ಕರ್ನಾಟಕ ಲೈವ್ ಸ್ಟಾಕ್ ಡೆವೆಲಪ್ ಮೆಂಟ್ ಏಜೆನ್ಸಿ (ಕೆ.ಎಲ್.ಡಿ.ಎ) ಬೆಂಗಳೂರು ಈ ಸಂಸ್ಥೆಯು ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಹೈನು ರಾಸುಗಳ ಜೀವ ವಿಮೆಗೆ ಸಹಾಯಧನ ನೀಡುತ್ತಿದೆ. ಔಷಧಿ ಮತ್ತು ರಾಸಾಯನಿಕಗಳ ಸರಬರಾಜು ಯೋಜನೆಯಡಿ 116.60 ಲಕ್ಷಕ್ಕೂ ಅಧಿಕ ಜಾನುವಾರುಗಳಿಗೆ ಚಿಕಿತ್ಸೆ ನೀಡಲಾಗಿದೆ. ಪಶು ಆರೋಗ್ಯ ಮತ್ತು ಸಂಸ್ಥೆಗೆ ಜೈವಿಕ ಮತ್ತು ಲಸಿಕೆಗಳ ಉತ್ಪಾದನೆ ಮಾಡಿ ಇಲಾಖೆಗೆ ಉಚಿತವಾಗಿ ಸರಬರಾಜು ಮಾಡಲು ಹಾಗೂ ಸಂಸ್ಥೆಯ ಮೂಲಭೂತ ಸೌಲಭ್ಯಗಳ ಬಲವರ್ಧನೆ, ಸಂಶೋಧನೆ, ತರಬೇತಿ, ರೋಗನಿರ್ಣಯ, ರೋಗ ತಡೆಗಟ್ಟುವಿಕೆ ಹಾಗೂ ನಿಯಂತ್ರಣಕ್ಕಾಗಿ ಕ್ರಮ ಕೈಗೊಳ್ಳಲಾಗಿದೆ. 530.55 ಲಕ್ಷಕ್ಕೂ ಹೆಚ್ಚು ಡೋಸ್ ಲಸಿಕೆ ಉತ್ಪಾದನೆ ಮಾಡಲಾಗಲಾಗಿದೆ ಎನ್ನುತ್ತಾರೆ ಅಧಿಕಾರಿಗಳು. 'ಪಶು ಭಾಗ್ಯ' ಎಂಬ ಹೊಸ ಯೋಜನೆಯನ್ನು ಜಾರಿಗೊಳಿಸಿ, ವಾಣಿಜ್ಯ ಬ್ಯಾಂಕುಗಳಿಂದ ಗರಿಷ್ಠ 1.20 ಲಕ್ಷ ರೂ.ವರೆಗೆ ಸಾಲ ಪಡೆದು ಸಣ್ಣ ಮತ್ತು ಅತಿಸಣ್ಣ ರೈತರಿಗೆ ಹಸು, ಕುರಿ, ಆಡು, ಹಂದಿ, ಕೋಳಿ ಘಟಕಗಳನ್ನು ಸ್ಥಾಪಿಸಲು ಪ.ಜಾ. ಮತ್ತು ಪ.ಪಂ.ದವರಿಗೆ ಶೇ. 33 ಹಾಗೂ ಇತರೆ ಜನಾಂಗದವರಿಗೆ ಶೇ. 25ರಷ್ಟು ಸಹಾಯಧನ ಒದಗಿಸಲಾಗುತ್ತದೆ. ಬೆಳೆ ಸಾಲದ ಮಾದರಿಯಲ್ಲಿ ಸಹಕಾರಿ ಬ್ಯಾಂಕುಗಳಿಂದ ಶೂನ್ಯ ಬಡ್ಡಿ ದರದಲ್ಲಿ ರೂ. 50.000ವರೆಗೆ ಪಶು ಆಹಾರ/ಇತರೆ ನಿರ್ವಹಣೆ ವೆಚ್ಚಕ್ಕಾಗಿ ಅಲ್ಪಾವಧಿ ಸಾಲ ಒದಗಿಸಲಾಗುತ್ತಿದೆ.
ಕಿಸಾನ್ ಸಂಪರ್ಕ ಸಭೆ: ಪಶು ಸಂಗೋಪನೆಯ ಅಭಿವೃದ್ಧಿಗಾಗಿ ಅಗತ್ಯವಿರುವ ವೈಜ್ಞಾನಿಕ ಮಾಹಿತಿಯನ್ನು ಕಿಸಾನ್ ಸಂಪರ್ಕ ಸಭೆಗಳ ಮೂಲಕ ರೈತರಿಗೆ ನೀಡಲಾಗುತ್ತದೆ.
ಆರೋಗ್ಯ ಮತ್ತು ಬರಡು ರಾಸುಗಳ ಶಿಬಿರ: ಆಯ್ದ ಹಳ್ಳಿಗಳಲ್ಲಿ ಆರೋಗ್ಯ ಮತ್ತು ಬರಡು ರಾಸುಗಳ ಶಿಬಿರಗಳನ್ನು ಏರ್ಪಡಿಸುವ ಮೂಲಕ ತಜ್ಞ ವೈದ್ಯರಿಂದ ರೋಗ ಪೀಡಿತ ರಾಸುಗಳ ತಪಾಸಣೆ ಮಾಡಲಾಗುತ್ತದೆ ಮತ್ತು ರೈತರಿಗೆ ಹಲವಾರು ವಿಷಯಗಳ ಬಗ್ಗೆ ವೈಜ್ಞಾನಿಕ ಮಾಹಿತಿ ನೀಡಲಾಗುತ್ತಿದೆ. ವಿಸ್ತರಣಾಧಿಕಾರಿಗಳು ಗ್ರಾಮಗಳನ್ನು ಸಂದರ್ಶಿಸಿ ಪಶು ಸಂಗೋಪನಾ ವಿಸ್ತರಣಾ ಚಟುವಟಿಕೆಗಳ ಬಗ್ಗೆ ರೈತರಿಗೆ ಮಾರ್ಗದರ್ಶನ ಮಾಡುತ್ತಾರೆ.
ಹೊಸ ಕಾರ್ಯಕ್ರಮಗಳು: ವಿವಿಧ ಹಳ್ಳಿಗಳ ಆಯ್ದ ರೈತರಿಗೆ ಪಶು ಸಂಗೋಪನೆಯ ವಿವಿಧ ಕ್ಷೇತ್ರಗಳಲ್ಲಿ (ಸಾಕಾಣಿಕೆ, ತಳಿ ಅಭಿವೃದ್ಧಿ, ಆರೋಗ್ಯ ರಕ್ಷಣೆ, ಆಹಾರ ಇತರೆ) ವೈಜ್ಞಾನಿಕ ತರಬೇತಿ ನೀಡಲಾಗುತ್ತದೆ.
ಅರೆತಾಂತ್ರಿಕ ಸಿಬ್ಬಂದಿಯ ತರಬೇತಿ: ಅರೆತಾಂತ್ರಿಕ ಸಿಬ್ಬಂದಿಯಾದ ಜಾನುವಾರು ಅಧಿಕಾರಿಗಳು, ಹಿರಿಯ/ಪಶುವೈದ್ಯಕೀಯ ಪರೀಕ್ಷಕರು ಮತ್ತು ಪಶುವೈದ್ಯಕೀಯ ಸಹಾಯಕರು ಜಿಲ್ಲೆಯ ಕೇಂದ್ರ ಸ್ಥಾನದಲ್ಲಿರುವ ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಒಂದು ವಾರದ ಪುನಃಶ್ಚೇತನ ತರಬೇತಿ ಪಡೆದು ಪಶು ಸಂಗೋಪನೆಯ ಬಗೆಗಿನ ಜ್ಞಾನವನ್ನು ಕಾಲಕಾಲಕ್ಕೆ ವಿಸ್ತರಿಸಿಕೊಳ್ಳುತ್ತಾರೆ.
ಕೋಳಿ ಶೀತಜ್ವರ ತರಬೇತಿ: ಕೋಳಿ ಶೀತಜ್ವರ ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿ ತಾಲೂಕಿನಲ್ಲಿ ಪಂಚಗ್ರಾಮ ಪ್ರತಿನಿಧಿಗಳಿಗೆ ರೋಗದ ಬಗ್ಗೆ ಹಾಗೂ ಮುನ್ನೆಚ್ಚರಿಕೆ ಬಗ್ಗೆ ತಾಲೂಕು ಮಟ್ಟದಲ್ಲಿ ಒಂದು ದಿನದ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.