ಬೆಂಗಳೂರು : ರಾಜ್ಯದ ಆನೆಗಳ ಸಂಖ್ಯೆಯಲ್ಲಿ 350ರಷ್ಟು ಹೆಚ್ಚಳವಾಗಿದೆ ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ.ಖಂಡ್ರೆ ತಿಳಿಸಿದ್ದಾರೆ. ವಿಕಾಸಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಆನೆಗಳ ಗಣತಿಯ ವರದಿ ಬಿಡುಗಡೆ ಮಾಡಿ ಮಾತನಾಡಿದ ಅವರು, 2017ರಲ್ಲಿ ರಾಜ್ಯದಲ್ಲಿ ಸುಮಾರು 6049 ಆನೆಗಳಿದ್ದವು. ಈ ಬಾರಿ ಗಣತಿಯ ವೇಳೆ 6,395 ಆನೆಗಳಿವೆ ಎಂದು ಅಂದಾಜು ಮಾಡಲಾಗಿದ್ದು, ಸುಮಾರು 350ರಷ್ಟು ಹೆಚ್ಚಳವಾಗಿದೆ ಎಂದರು.
ಅವಸಾನದ ಅಂಚಿನಲ್ಲಿರುವ ಆನೆಗಳನ್ನು ಸಂರಕ್ಷಿಸುವ ಸಲುವಾಗಿ, ಆನೆಗಳಿಗೂ ನೆಮ್ಮದಿಯಿಂದ ಬದುಕಲು ಅವುಗಳ ಆವಾಸಸ್ಥಾನ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು 2012 ಆಗಸ್ಟ್ 12ರಿಂದ 'ವಿಶ್ವ ಆನೆ ದಿನ' ಆಚರಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ಆನೆಗಳ ದಿನದಂದು ದೇಶದಲ್ಲಿ ಆನೆಗಳ ಸಂಖ್ಯೆ ಹೆಚ್ಚಳವಾಗಿದೆಯೇ ಅಥವಾ ಇಳಿಮುಖವಾಗಿದೆಯೇ ಎಂದು ತಿಳಿಯಲು ಆನೆಗಳ ಗಣತಿಯನ್ನು ಪ್ರತಿ 5 ವರ್ಷಗಳಿಗೊಮ್ಮೆ ಮಾಡಲಾಗುತ್ತದೆ. ಈ ಹಿಂದೆ ಆನೆ ಗಣತಿ 2017ರಲ್ಲಿ ನಡೆದಿತ್ತು. 2022ರಲ್ಲಿ ಆನೆ ಗಣತಿಯನ್ನು ಅಖಿಲ ಭಾರತ ಹುಲಿ ಗಣತಿಯ ಭಾಗವಾಗಿ ಮಾಡಲು ಪ್ರಯತ್ನಿಸಲಾಯಿತು. ಆದರೆ, ಈ ಸಮೀಕ್ಷೆಯು ಮಾದರಿ ಬ್ಲಾಕ್ ಎಣಿಕೆ (Sample Block Count) ಮತ್ತು ಆನೆಗಳ ಸಂಖ್ಯೆ ಸ್ವರೂಪದ (Population Structure) ಮೌಲ್ಯ ಮಾಪನವನ್ನು ಒಳಗೊಂಡಿರಲಿಲ್ಲ. ಈ ವಿಧಾನ ಆನೆಗಳ ಗಣತಿ ಮತ್ತು ಸಂಖ್ಯಾ ಸ್ವರೂಪ ಅಂದರೆ, ಲಿಂಗ ಮತ್ತು ವಯಸ್ಸಿನ ವರ್ಗೀಕರಣಕ್ಕೆ ಬಹಳ ಮುಖ್ಯವಾಗಿದೆ ಎಂದರು.
ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯಗಳ ಮುಂದಾಳತ್ವದೊಂದಿಗೆ 2023ರ ಮೇ 17ರಿಂದ ಮೇ 19ರವರೆಗೆ ಏಕಕಾಲದಲ್ಲಿ ಆನೆಗಳ ಗಣತಿ ನಡೆಸಲಾಯಿತು. ಅದೇ ದಿನಾಂಕದಂದು ಆಂಧ್ರ ಪ್ರದೇಶದಲ್ಲೂ ಇದೇ ರೀತಿಯ ಗಣತಿ ಕಾರ್ಯ ನಡೆಯಿತು ಎಂದು ಸಚಿವ ಖಂಡ್ರೆ ವಿವರಿಸಿದರು.
ರಾಜ್ಯದ ಆನೆ ಗಣತಿ ವರದಿ ಪ್ರಕಾರ, ಆನೆಗಳ ಸಂಖ್ಯೆಯಲ್ಲಿ 350 ಹೆಚ್ಚಳವಾಗಿದ್ದು, 2017 ರಲ್ಲಿ 6049 ಆನೆಗಳು ಇದ್ದವು. 2023 ರಲ್ಲಿ 6395 ಆನೆಗಳು ಆಗಿವೆ. ದೇಶದಲ್ಲೇ ಅನೆಗಳ ಸಂಖ್ಯೆಯಲ್ಲಿ ಕರ್ನಾಟಕ ಮೊದಲ ಸ್ಥಾನ ಪಡೆದಿದೆ. ಹುಲಿ ಸಂಖ್ಯೆಯಲ್ಲಿ ಎರಡನೇ ಸ್ಥಾನ ಗಳಿಸಿದೆ ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ. ಮಾನವನ ಜೊತೆ ಆನೆಗಳ ಅನೋನ್ಯ ಸಂಬಂಧ ಇದೆ. ನಾಡ ಹಬ್ಬ ದಸರಾಗೂ ಆನೆಗಳ ಮೂಲಕ ಚಾಲನೆ ನೀಡುತ್ತಿದ್ದೇವೆ. ಆನೆಗಳ ಪ್ರಾಮುಖ್ಯತೆ ಬಹಳಷ್ಟು ಇದೆ. 2012 ರಿಂದ ಆನೆ ಸಂತತಿ ಕಡಿಮೆ ಆಗಬಾರದು ಎಂದು ಹೇಳಿ, ಬಹಳಷ್ಟು ಪ್ರಯತ್ನ ಪಟ್ಟು ಇವತ್ತು ಹೆಚ್ಚಳ ಆಗಿರುವುದು ಖುಷಿ ತಂದಿದೆ ಎಂದು ಅವರು ಹೇಳಿದರು.