ಬೆಂಗಳೂರು:ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಅತ್ಯಂತ ಮಹತ್ವದ ಪ್ರಶಸ್ತಿ ಎಂದು ಗುರುತಿಸಿಕೊಂಡಿರುವ ʻನೃಪತುಂಗʼ ಪ್ರಶಸ್ತಿಯು ಜ್ಞಾನಪೀಠಕ್ಕೆ ಸರಿಸಮಾನವಾದ ಪ್ರಶಸ್ತಿಯಾಗಿದ್ದು, ಕನ್ನಡದ ಜ್ಞಾನಪೀಠ ಎಂದು ಗುರುತಿಸಿಕೊಂಡ ಈ ಪ್ರಶಸ್ತಿಯನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ದತ್ತಿ ಇಡುವ ಮೂಲಕ ನೀಡುತ್ತಿದೆ. ಏಳು ಲಕ್ಷದ ಒಂದು ರೂಪಾಯಿ ಮೌಲ್ಯದ ಇಂತಹ ಮಹತ್ವದ ಪ್ರಶಸ್ತಿಗೆ ವೈದೇಹಿ ಪಾತ್ರರಾಗಿರುವುದು ಪ್ರಶಸ್ತಿಯ ಗೌರವವನ್ನು ಹೆಚ್ಚಿಸಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಸಹಯೋಗದಲ್ಲಿ ನೀಡುವ ನೃಪತುಂಗ ಸಾಹಿತ್ಯ ಪ್ರಶಸ್ತಿಯನ್ನು ಹಿರಿಯ ಬರಹಗಾರ್ತಿ ವೈದೇಹಿ ಅವರಿಗೆ ಪ್ರದಾನ ಮಾಡಲಾಯಿತು. ಅದರೊಂದಿಗೆ 2022ನೆಯ ಸಾಲಿನ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಮಯೂರ ವರ್ಮ ಸಾಹಿತ್ಯ ಪ್ರಶಸ್ತಿಯನ್ನು ಗದಗ ಜಿಲ್ಲೆಯ ಗಜೇಂದ್ರಗಡದ ಹನುಮಂತ ಸೋಮನಕಟ್ಟಿ, ವಿಜಯನಗರ ಜಿಲ್ಲೆಯ ಕೊಟ್ಟೂರಿನ ಗುಡ್ಡಪ್ಪ ಬೆಟಗೇರಿ, ತುಮಕೂರು ಜಿಲ್ಲೆಯ ಡಾ. ಸತ್ಯಮಂಗಲ ಮಹಾದೇವ, ಗಡಿಭಾಗ ಕಾಸರಗೋಡಿನ ವಿದ್ಯಾರಶ್ಮಿ ಪೆಲತ್ತಡ್ಕ ಹಾಗೂ ಹಾಸನದ ಬೇಲೂರು ರಘುನಂದನರಿಗೆ ಪ್ರದಾನ ಮಾಡಲಾಯಿತು.
ಕನ್ನಡ ಸಾರಸ್ವತ ಲೋಕಕ್ಕೆ ಮಹತ್ವದ ಕೃತಿಗಳನ್ನು ನೀಡಿರುವ ಹೆಮ್ಮೆ ವೈದೇಹಿಯವರದ್ದು- ಮಹೇಶ ಜೋಶಿ:ಬುಧವಾರ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಹಮ್ಮಿಕೊಂಡ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನೃಪತುಂಗ ಸಾಹಿತ್ಯ ಪ್ರಶಸ್ತಿಯನ್ನು ಹಾಗೂ 2022ನೆಯ ಸಾಲಿನ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಮಯೂರ ವರ್ಮ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಡಾ.ಮಹೇಶ ಜೋಶಿ, ಕನ್ನಡ ಸಾರಸ್ವತ ಲೋಕದಲ್ಲಿ ಸದ್ದಿಲ್ಲದೇ ಮಹತ್ವದ ಕೃತಿಗಳನ್ನು ನೀಡಿರುವ ಹೆಮ್ಮೆ ವೈದೇಹಿಯವರದ್ದು, ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿಯೂ ಮೌಲಿಕವಾದ ಬರವಣಿಗೆಯನ್ನು ಮಾಡಿದವರು. ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಅವರ ಸ್ಥಾನ ಮಹತ್ವವಾದದ್ದು. ನಿರಂತರ ಬರವಣಿಗೆಯ ಮೂಲಕ ಕನ್ನಡದ ಜೀವಂತಿಕೆಯನ್ನು ಕಾಪಾಡಿ ವಾದ ವಿವಾದಗಳಿಗೆ ಒಳಗಾಗದಂತೆ ಧ್ಯಾನಸ್ಥ ಸ್ಥಿತಿಯಲ್ಲಿ ಸಾಹಿತ್ಯ ಕೃಷಿ ಮಾಡಿಕೊಂಡು ಬಂದಿರುವುದು ಮಹತ್ವದ ಸಂಗತಿ ಎಂದು ಡಾ.ಮಹೇಶ ಜೋಶಿ ಬಣ್ಣಿಸಿದರು.