ಬೆಂಗಳೂರು:ಮಾಜಿ ಮುಖ್ಯಮಂತ್ರಿಸಿದ್ದರಾಮಯ್ಯ, ಸರ್ಕಾರಿ ಜಾಗ ಕಬಳಿಸಿ ಭ್ರಷ್ಟಾಚಾರವೆಸಗಿ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ಅಧ್ಯಕ್ಷ ಎನ್.ಆರ್.ರಮೇಶ್, ಸಿದ್ದರಾಮಯ್ಯ ಹಾಗೂ ನಿವೃತ್ತ ಹಿರಿಯ ಐಎಎಸ್ ಅಧಿಕಾರಿ ಶ್ಯಾಮ್ ಭಟ್ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
ದೂರಿನಲ್ಲಿ, ಪ್ರಭಾವಿ ಬಿಲ್ಡರ್ ಒಬ್ಬರ ಹಣದ ಪ್ರಭಾವಕ್ಕೆ ಒಳಗಾಗಿ ಕಾನೂನು ಬಾಹಿರವಾಗಿ ಸರ್ಕಾರಿ ಸ್ವತ್ತನ್ನು Re-Do ಎಂಬ ಹೆಸರಿನಲ್ಲಿ ಸಿದ್ದರಾಮಯ್ಯ ಡಿನೊಟಿಫಿಕೇಷನ್ ಮಾಡಿರುವ ಆರೋಪ ಕೇಳಿ ಬಂದಿದೆ. ಬೆಂಗಳೂರು ದಕ್ಷಿಣ ತಾಲೂಕು, ಕಸಬಾ ಹೋಬಳಿಯ ಲಾಲ್ ಬಾಗ್ ಸಿದ್ಧಾಪುರ ಗ್ರಾಮದ (ಈಗಿನ ಜಯನಗರ 1ನೇ ಬ್ಲಾಕ್) ಸರ್ವೆ ನಂಬರ್ - 27/1, 28/4, 28/5 ಮತ್ತು 28/6 ರ 02 ಎಕರೆ 39 ½ ಗುಂಟೆಯಷ್ಟು ವಿಸ್ತೀರ್ಣದ ಸುಮಾರು 200 ಕೋಟಿ ರೂ. ಗಳಿಗೂ. ಹೆಚ್ಚು ಮೌಲ್ಯದ ಸರ್ಕಾರಿ ಸ್ವತ್ತು ಬಿಡಿಎ ಮಾಸ್ಟರ್ ಪ್ಲ್ಯಾನ್ ನಂತೆ ಉದ್ಯಾನವನ ಮತ್ತು ಸಾರ್ವಜನಿಕ ಬಳಕೆಯ ಜಾಗವೆಂದು ಮೀಸಲಿಟ್ಟಿದ್ದರೂ ಬಿಲ್ಡರ್ ಆಗಿರುವ ಅಶೋಕ್ ಧಾರಿವಾಲ್ ಎಂಬ ಖಾಸಗಿ ಬಿಲ್ಡರ್ ಒಬ್ಬರು ಕಾನೂನುಬಾಹಿರವಾಗಿ ಕ್ರಯಕ್ಕೆ ಪಡೆದಿದ್ದಾರೆ.
ನಂತರ ಈ ಸ್ವತ್ತುಗಳಲ್ಲಿ ವಸತಿ ಸಂಕೀರ್ಣ ನಿರ್ಮಿಸುವ ಬಳಕೆಗೆ ಪರಿವರ್ತಿಸಿಕೊಡಬೇಕು ಎಂಬ ಮನವಿಯನ್ನು ರಾಜ್ಯ ಸರ್ಕಾರದ ಸಮಿತಿಗೆ ಅಶೋಕ್ ಧಾರಿವಾಲ್ ಅವರು ಸಲ್ಲಿಸಿದ್ದರು. ನಿಯಮನುಸಾರ ಈ ಮೀಸಲು ಪ್ರದೇಶದಲ್ಲಿ ಯಾವುದೇ ನಿರ್ಮಾಣ ಕಾರ್ಯಗಳು ನಡೆಯುವುದು ಕಾನೂನು ಬಾಹಿರವಾಗಿರಲಿದೆ.