ಬೆಂಗಳೂರು: ತಮ್ಮ ಆಡಳಿತದ ಅವಧಿಯಲ್ಲಿ ಪ್ರಭಾವಿ ಹುದ್ದೆಗೆ ನೇಮಕಾತಿ ಮಾಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚೆಕ್ ಮೂಲಕ ಹಣ ಪಡೆದಿದ್ದು, ಇಂತಹ ಗಂಭೀರ ಪ್ರಕರಣದ ತನಿಖೆ ನಡೆಸುವಂತೆ ಬಿಜೆಪಿ ವಕ್ತಾರ ಎನ್ ಆರ್ ರಮೇಶ್ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.
ನಗರದಲ್ಲಿಂದು ಲೋಕಾಯುಕ್ತ ಕಚೇರಿಗೆ ದಾಖಲೆ ಸಲ್ಲಿಸಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, 2014 ರಲ್ಲಿ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಕಿಂಗ್ಸ್ ಕೋರ್ಟ್ ವಿವೇಕ್ ಎಂದೇ ಖ್ಯಾತಿಯ ಎಲ್. ವಿವೇಕಾನಂದ ಎಂಬಾತನಿಂದ 1 ಕೋಟಿ 30 ಲಕ್ಷ ರೂಪಾಯಿ ಪಡೆದು ಬೆಂಗಳೂರು ಟರ್ಫ್ ಕ್ಲಬ್ ಉಸ್ತುವಾರಿ ಹುದ್ದೆಗೆ ನೇಮಕ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
3 ವರ್ಷಗಳ ಅವಧಿಗೆ ಬೆಂಗಳೂರು ಟರ್ಫ್ ಕ್ಲಬ್ ಕಾರ್ಯಕಾರಿ ಸಮಿತಿಯ ಸದಸ್ಯ ಸ್ಥಾನಕ್ಕೆ ನೇಮಕ ಮಾಡಿದ್ದರು. ಇದಕ್ಕೆ ಪುಷ್ಠಿ ನೀಡುವಂತೆ ಲೋಕಾಯುಕ್ತಕ್ಕೆ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ 2018 ರ ಏಪ್ರಿಲ್ 21 ರಂದು ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಸಾಲ ಪಡೆದುಕೊಂಡಿರುವುದಾಗಿ ಮಾಹಿತಿ ನೀಡಿದ್ದಾರೆ.