ಕರ್ನಾಟಕ

karnataka

ETV Bharat / state

ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಎನ್‌ಪಿಎಸ್‌ ಜಾರಿ: ಸಚಿವ ಸುಧಾಕರ್‌ ಅಧಿಕೃತ ಪ್ರಕಟಣೆ

ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಎನ್​ಪಿಎಸ್​ ಜಾರಿ ಬೇಡಿಕೆಗೆ ಅನುಮೋದನೆ ನೀಡುವಂತೆ ಸಚಿವ ಸುಧಾಕರ್‌ ಸಿಎಂ ಯಡಿಯೂರಪ್ಪರನ್ನು ಭೇಟಿಯಾಗಿ ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತು ವೈದ್ಯಕೀಯ ಶಿಕ್ಷಣ ಇಲಾಖೆ ಸಲ್ಲಿಸಿದ್ದ ಪ್ರಸ್ತಾವನೆಗೆ ಹಣಕಾಸು ಇಲಾಖೆ ಅನುಮೋದನೆ ನೀಡಿದ್ದು ಅಧಿಕೃತ ಆದೇಶ ಹೊರಬಿದ್ದಿದೆ.

NPS Implementation in Medical Education Department
ಸಚಿವರ ಸುಧಾಕರ್‌

By

Published : Aug 28, 2020, 4:57 PM IST

ಬೆಂಗಳೂರು: ವೈದ್ಯಕೀಯ ಶಿಕ್ಷಣ ಇಲಾಖೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಬಹು ದಿನಗಳ ಬೇಡಿಕೆಯಾಗಿದ್ದ ಪಿಂಚಣಿ ಯೋಜನೆಗೆ (ಎನ್‌ಪಿಎಸ್) ಸಚಿವ ಡಾ. ಕೆ. ಸುಧಾಕರ್‌ ಹಸಿರು ನಿಶಾನೆ ತೋರಿಸಿದ್ದಾರೆ.

ಸರ್ಕಾರಿ ವೈದ್ಯ, ದಂತ ವೈದ್ಯಕೀಯ ಕಾಲೇಜುಗಳಿಗೆ ಹೊಂದಿಕೊಂಡಿರುವ ಬೋಧಕ ಆಸ್ಪತ್ರೆಗಳು ಮತ್ತು ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಕಾಯಂ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಈ ಯೋಜನೆಯ ಲಾಭ ಪಡೆಯಲಿದ್ದಾರೆ.

ಸಚಿವ ಸುಧಾಕರ್‌ ಅವರು ಅಧಿಕಾರ ವಹಿಸಿಕೊಂಡ ಬಳಿಕ ನಿಯೋಗದಲ್ಲಿ ಭೇಟಿ ಮಾಡಿದ್ದ ಇಲಾಖೆಯ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು, ಪಿಂಚಣಿ ಯೋಜನೆ ಜಾರಿಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮನವಿ ಸಲ್ಲಿಸಿದ್ದರು. ಮನವಿ ಸ್ವೀಕರಿಸಿದ್ದ ಸಚಿವರು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ‌

ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಈ ಬೇಡಿಕೆಗೆ ಅನುಮೋದನೆ ನೀಡುವಂತೆ ಸಚಿವ ಸುಧಾಕರ್‌ ಅವರು ಮುಖ್ಯಮಂತ್ರಿ ಯಡಿಯೂರಪ್ಪರನ್ನು ಭೇಟಿಯಾಗಿ ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತು ವೈದ್ಯಕೀಯ ಶಿಕ್ಷಣ ಇಲಾಖೆ ಸಲ್ಲಿಸಿದ್ದ ಪ್ರಸ್ತಾವನೆಗೆ ಹಣಕಾಸು ಇಲಾಖೆ ಅನುಮೋದನೆ ನೀಡಿದ್ದು ಅಧಿಕೃತ ಆದೇಶ ಹೊರಬಿದ್ದಿದೆ.

ಕೊರೋನಾದಿಂದಾಗಿ ಸರ್ಕಾರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದ್ದರೂ ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಮುಂಚೂಣಿ ಯೋಧರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮೆಡಿಕಲ್‌ ಕಾಲೇಜು ಆಸ್ಪತ್ರೆಗಳ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಎನ್‌ಪಿಎಸ್‌ ಯೋಜನೆ ಜಾರಿಗೊಳಿಸುವುದು ಸೂಕ್ತ ಎಂಬ ಸಚಿವ ಸುಧಾಕರ್‌ ಅವರ ಅಗ್ರಹಕ್ಕೆ ಮುಖ್ಯಮಂತ್ರಿಯವರು ಸಹಮತ ವ್ಯಕ್ತಪಡಿಸಿ, ತಕ್ಷಣ ಕ್ರಮ ಜರುಗಿಸುವಂತೆ ಹಣಕಾಸು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಅಂತಿಮವಾಗಿ ಹಣಕಾಸು ಇಲಾಖೆ ಸಮ್ಮತಿ ದೊರಕಿದ್ದು ಆದೇಶ ಹೊರಡಿಸಿದೆ.

ಒಟ್ಟು 27 ಸಂಸ್ಥೆಗಳಲ್ಲಿ ಕಾಯಂ ಆಗಿ ಕರ್ತವ್ಯ ನಿರ್ವಹಿಸುತ್ತಿರುವ 5, 949ಅಧಿಕಾರಿ ಮತ್ತು ಸಿಬ್ಬಂದಿಗೆ ಯೋಜನೆಯ ಪ್ರಯೋಜನ ದೊರಕಲಿದೆ. ಇದರಲ್ಲಿ 2,061 ಮಂದಿ ಎಐಸಿಟಿಇ ಅನುಮೋದನೆ ಪಡೆದ ಹುದ್ದೆಗಳಾಗಿದ್ದರೆ 3,888 ಎಐಸಿಟಿಇಯೇತರ ಹುದ್ದೆಗಳಾಗಿವೆ. ಈ ನೂತನ ಯೋಜನೆಯಿಂದ ಸರ್ಕಾರಕ್ಕೆ ಪ್ರತಿ ವಷ೯ 77.27 ಕೋಟಿ ರೂ. ಹೆಚ್ಚುವರಿ ಹೊರೆ ಬೀಳಲಿದೆ. 2006 ರ ಏಪ್ರಿಲ್‌ 1 ರ ನಂತರ ಖಾಯಂ ಆಗಿ ನೇಮಕಗೊಂಡು ಕರ್ತವ್ಯ ನಿರ್ವಹಿಸುತ್ತಿರುವ ಬೋಧಕ ಮತ್ತು ಬೋಧಕೇತರ ವೃಂದದ ಅಧಿಕಾರಿ ಮತ್ತು ಸಿಬ್ಬಂದಿಗೆ ತಕ್ಷಣದಿಂದಲೇ ನೂತನ ಪಿಂಚಣಿ ಯೋಜನೆ ಜಾರಿಯಾಗಲಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿಂದೆ ಬೋಧಕ ಸಿಬ್ಬಂದಿಯ ಬೇಡಿಕೆಯಾಗಿದ್ದ ಏಳನೇ ವೇತನ ಆಯೋಗದ ಶಿಫಾರಸುಗಳಿಗೆ ಅನುಗುಣವಾಗಿ ವೇತನ ಮತ್ತು ಭತ್ಯೆ ನೀಡುವ ಪ್ರಸ್ತಾವನೆಗೂ ಸಚಿವರು ಅನುಮೋದನೆ ದೊರಕಿಸಿಕೊಟ್ಟಿದ್ದರು. ಹಾಗೆಯೇ ಐದಾರು ವಷ೯ಗಳಿಂದ ನೆನೆಗುದಿಗೆ ಬಿದ್ದಿದ್ದ ವೈದ್ಯ ವಿದ್ಯಾಥಿ೯ಗಳ ಶಿಷ್ಯ ವೇತನ ಪ್ರಸ್ತಾವನೆಗೂ ಅನುಮತಿ ದೊರಕಿಸಿ ಈಗಾಗಲೇ ಪರಿಷ್ಕೃತ ಶಿಷ್ಯ ವೇತನ ಆದೇಶ ಜಾರಿಯಾಗಿದೆ. ಇದೀಗ ಅನೇಕ ದಿನಗಳಿಂದ ಅನುಮತಿಗೆ ಕಾಯುತ್ತಿದ್ದ ಎನ್‌ಪಿಎಸ್‌ ಯೋಜನೆಗೂ ಮುಕ್ತಿ ದೊರಕಿದಂತಾಗಿದೆ.

ಕೊರೊನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿ ಯೋಧರಾಗಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರು ಮತ್ತು ಸಿಬ್ಬಂದಿಗೆ ಅನೇಕ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಎನ್‌ಪಿಎಸ್‌ ಯೋಜನೆ ಜಾರಿಗೊಳಿಸಿರುವ ಈ ತೀರ್ಮಾನ ಸಾರ್ಥಕಭಾವ ಮೂಡಿಸಿದೆ. ನಮ್ಮ ಮನವಿಗೆ ಸ್ಪಂದಿಸಿ ಅನುಮತಿ ನೀಡಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಇಲಾಖೆ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಸಚಿವ ಡಾ. ಕೆ. ಸುಧಾಕರ್‌ ತಿಳಿಸಿದ್ದಾರೆ.

ABOUT THE AUTHOR

...view details