ಬೆಂಗಳೂರು:ಈಗ ಬಿಜೆಪಿಯವರು ಮಳೆ ಬಂತು ಅಂತಾ ಛತ್ರಿ ಕೆಳಗೆ ನಿಂತುಕೊಂಡು ನೋಡ್ತಾ ಇದ್ದೇನೆ ಅಂದರೆ ಏನು ಪ್ರಯೋಜನ. ಚೆನ್ನಾಗಿರುವ ರಸ್ತೆಯನ್ನೆಲ್ಲ ಕಿತ್ತು ಹಾಕ್ತಾ ಇದ್ದಾರೆ. ಕಾಮಗಾರಿಗಿಂತ ಬೆಂಗಳೂರಿನ ಗೌರವ ಉಳಿಸಿಕೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಟೀಕಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಂಡವಾಳ ಹೂಡಿಕೆಗೆ ಮೊದಲಿನಂತೆ ಆಸಕ್ತಿ ತೋರುತ್ತಿಲ್ಲ. ಅಭಿವೃದ್ಧಿ ಅಜೆಂಡಾ ಬಿಟ್ಟು ಕಮ್ಯುನಲ್ ಅಜೆಂಡಾ ಮುಂದಿಡ್ತಾ ಇದ್ದಾರೆ. ಅವರು ಮಾಡಿರುವ ಬಜೆಟ್ ಬಗ್ಗೆ ಅವರೇ ಮಾತನಾಡಲು ಆಗ್ತಾ ಇಲ್ಲ. ನಿರ್ಮಲಾ ಸೀತಾರಾಮನ್ ಇಲ್ಲಿಂದ ಆರಿಸಿ ಹೋದವರು. ಬೆಂಗಳೂರಿಗೆ ಏನು ಕೊಟ್ಟರು?. ಅವರಿಂದ ಏನಾದರು ಕೊಡುಗೆ ಇದೆಯಾ ಎಂದು ಪ್ರಶ್ನಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಏನು ಮಾಡಿಲ್ಲ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಆರೋಪ ಮಾಡುತ್ತಿದ್ದಾರೆ. ಮಾಡಿಕೊಂಡು ಹೋಗಲಿ. ನಮ್ಮ ಕೆಲಸ ನಾವು ಮಾಡುತ್ತೇವೆ. ಮುಂದೆ ನಾವು ಬೆಂಗಳೂರಿಗೆ ಪ್ರತ್ಯೇಕ ಮ್ಯಾನಿಫೆಸ್ಟೋ ಮಾಡುತ್ತೇವೆ. ನಾನು ನಗರಾಭಿವೃದ್ಧಿ ಸಚಿವ ಆಗಿದ್ದವನು. ಬೆಂಗಳೂರು ಎಷ್ಟು ಇಂಪಾರ್ಟೆಂಟ್ ಅನ್ನೋದು ನನಗೆ ಗೊತ್ತು ಎಂದು ತಿಳಿಸಿದರು.
ಇತಿಹಾಸಕಾರರ ಪಾಠ ತೆಗೆಯಬಾರದು:ಪಠ್ಯ ಪುಸ್ತಕದಲ್ಲಿ ಯಾವುದೇ ಬದಲಾವಣೆ ಮಾಡಬಾರದು. ಭಗತ್ ಸಿಂಗ್ ಸೇರಿದಂತೆ ಇತಿಹಾಸಕಾರರ ಪಾಠ ತೆಗೆಯಬಾರದು. ಈಗ ಇರೋದನ್ನು ಮುಂದುವರೆಸಲಿ ಎಂದು ಇದೇ ವೇಳೆ ಆಗ್ರಹಿಸಿದರು. ಒಂದು ಸಮುದಾಯವನ್ನು ಟಾರ್ಗೆಟ್ ಮಾಡುವ ಕೆಲಸ ಮಾಡಬೇಡಿ. ರಾಮಾಯಣ ಮಹಾಭಾರತ ಎಲ್ಲ ಇತ್ತು ಅದೆಲ್ಲಾ ಇರಬೇಕು. ಈಗ ನಾರಾಯಣ್ ಗುರು ಪಾಠ ತೆಗೆದಿಲ್ಲ ಅಂತಾರೆ. ಆದರೆ ಚಿಂತನೆ ಇತ್ತು. ಅವರ ಟ್ಯಾಬ್ಲೋ ತೆಗೆದಾಗ ಸುನೀಲ್ ಕುಮಾರ್ ದನಿ ಎಲ್ಲಿ ಹೋಗಿತ್ತು? ಎಂದು ಪ್ರಶ್ನಿಸಿದರು.
ರಾಜ್ಯಕ್ಕೆ ಪ್ರಿಯಾಂಕ ಬಂದರೆ ಸಹಾಯ ಆಗುತ್ತೆ: ರಾಜ್ಯಕ್ಕೆ ಪ್ರಿಯಾಂಕಾ ಗಾಂಧಿ ಕರೆತರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ದಕ್ಷಿಣದಲ್ಲೆಲ್ಲ ಚುನಾವಣೆ ವೇಳೆ ಕೆಲಸ ಮಾಡಿದ್ದಾರೆ. ಇಲ್ಲೂ ಬರಲಿ. ಹೀಗಾಗಿ ರಾಜ್ಯಕ್ಕೆ ಬಂದರೆ ಚುನಾವಣೆಗೆ ಸಹಾಯ ಆಗುತ್ತೆ ಎಂದರು.
ಇದನ್ನೂ ಓದಿ:ನಮಗೆ ಬೇಕಿರುವುದು ಭಾರತೀಯ ಶಿಕ್ಷಣ, ಮೆಕಾಲೆಯದ್ದಲ್ಲ: ಸಚಿವ ಸುನಿಲ್ಕುಮಾರ್
ಪರಿಷತ್ ಟಿಕೆಟ್ ವಿಚಾರವಾಗಿ ಮಾತನಾಡಿದ ಅವರು, ಎರಡು ಸ್ಥಾನಕ್ಕೆ ಹಲವರು ಬೇಡಿಕೆ ಇಟ್ಟಿದ್ದಾರೆ. ನಾನು ಹಾಗೂ ಶಾಸಕಾಂಗ ಪಕ್ಷದ ನಾಯಕರು ನಾಳೆ ಈ ಬಗ್ಗೆ ಮಾತನಾಡುತ್ತೇವೆ. ಈಗಾಗಲೇ ಒಂದು ಸುತ್ತು ಮಾತನಾಡಿದ್ದೇವೆ. ಎಲ್ಲವನ್ನು ಚರ್ಚಿಸಿ ಪಟ್ಟಿ ಅಂತಿಮಗೊಳಿಸುತ್ತೇವೆ. ರಾಜ್ಯಸಭೆ ವಿಚಾರಕ್ಕೆ ಪಕ್ಷದಲ್ಲಿ ಪದ್ಧತಿ ಇದೆ. ಸರ್ಕಾರ ಇರಲಿ, ಇಲ್ಲದೇ ಇರಲಿ, ಹೈಕಮಾಂಡ್ ಹೇಳಿಂದಂತೆ ನಿರ್ಧಾರ ಮಾಡುತ್ತೇವೆ ಎಂದರು.