ಕರ್ನಾಟಕ

karnataka

ETV Bharat / state

ಬಿಎಂಟಿಸಿ ಪ್ರಯಾಣಿಕರಿಗೆ ಇನ್ಮುಂದೆ ಡಿಜಿಟಲ್ ಪಾಸ್: ನಿರ್ವಾಹಕರಿಗೆ ಗೇಟ್ ಪಾಸ್? - ಬಸ್ ಪಾಸ್

ಬಿಎಂಟಿಸಿ ನಿಗಮ ಪೇಪರ್ ಲೆಸ್ ಡಿಜಿಟಲ್ ಬಸ್ ಪಾಸ್ ವ್ಯವಸ್ಥೆಯನ್ನ ಪರಿಚಯಿಸಿದೆ. ಇನ್ಮುಂದೆ ಬಸ್ ಪಾಸ್ ಪಡೆಯಲು ಪ್ರಯಾಣಿಕರು ಕ್ಯೂನಲ್ಲಿ ನಿಲ್ಲುವ ಅವಶ್ಯಕತೆ ಇರುವುದಿಲ್ಲ.‌ ಪ್ರಯಾಣಿಕರ ಅನುಕೂಲಕ್ಕಾಗಿ ನಿಗಮ ನೂತನ ತಂತ್ರಜ್ಞಾನ ಪರಿಚಯಿಸಿದ್ದು, ಪಾಸ್ ಖರೀದಿಸುವ ಬದಲಾಗಿ ಮೊಬೈಲ್​ನಲ್ಲೇ ಪಾಸ್ ಡೌನ್ ಲೋಡ್ ಮಾಡಿಕೊಳ್ಳುವ ಮೂಲಕ ಪ್ರಯಾಣಕ್ಕೆ ಅವಕಾಶ ಕಲ್ಪಿಸುತ್ತಿದೆ.‌

ಬಿಎಂಟಿಸಿ, BMTC
ಬಿಎಂಟಿಸಿ

By

Published : Apr 7, 2022, 7:15 AM IST

ಬೆಂಗಳೂರು: ಬಿಎಂಟಿಸಿ ಬೆಂಗಳೂರಿಗರ ನೆಚ್ಚಿನ ಸಾರಿಗೆ ಸಂಸ್ಥೆ. ಈ ಸಂಸ್ಥೆ ಇದೀಗ ಪ್ರಯಾಣಿಕರಿಗೆ ಗುಡ್ ನ್ಯೂಸ್​ವೊಂದನ್ನ ನೀಡಿದೆ.‌ ಬಿಎಂಟಿಸಿ ಪ್ರಯಾಣಿಕರು ಇನ್ಮುಂದೆ ತಿಂಗಳ ಹಾಗೂ ದಿನದ ಪಾಸ್ ತಗೋಬೇಕು ಅಂತ ಕ್ಯೂನಲ್ಲಿ ನಿಲ್ಲುವ ಅವಶ್ಯಕತೆ ಇಲ್ಲ.‌ ಬೇಕಾದಾಗ ಕುಳಿತಲ್ಲೇ ಬಸ್ ಪಾಸ್​ ಡೌನ್​ಲೋಡ್ ಮಾಡಿಕೊಂಡು ಪ್ರಯಾಣಿಸಬಹುದು. ಈ ವ್ಯವಸ್ಥೆ ಪ್ರಯಾಣಿಕರಿಗೆ ಖುಷಿ ಕೊಟ್ಟರೆ ನೌಕರರಿಗೆ ಟೆನ್ಷನ್ ಕೊಟ್ಟಿದೆ.

ಹೌದು, ಬಿಎಂಟಿಸಿ ನಿಗಮ ಬುಧವಾರದಿಂದ ಪೇಪರ್​ಲೆಸ್ ಡಿಜಿಟಲ್ ಬಸ್ ಪಾಸ್ ವ್ಯವಸ್ಥೆಯನ್ನ ಪರಿಚಯಿಸಿದೆ. ಇನ್ಮುಂದೆ ಬಸ್ ಪಾಸ್ ಪಡೆಯಲು ಪ್ರಯಾಣಿಕರು ಕ್ಯೂನಲ್ಲಿ ನಿಲ್ಲುವ ಅವಶ್ಯಕತೆ ಇರುವುದಿಲ್ಲ.‌ ಪ್ರಯಾಣಿಕರ ಅನುಕೂಲಕ್ಕಾಗಿ ನಿಗಮ ನೂತನ ತಂತ್ರಜ್ಞಾನ ಪರಿಚಯಿಸಿದ್ದು, ಪಾಸ್ ಖರೀದಿಸುವ ಬದಲಾಗಿ ಮೊಬೈಲ್​ನಲ್ಲೇ ಪಾಸ್ ಡೌನ್ ಲೋಡ್ ಮಾಡಿಕೊಳ್ಳುವ ಮೂಲಕ ಪ್ರಯಾಣಕ್ಕೆ ಅವಕಾಶ ಕಲ್ಪಿಸುತ್ತಿದೆ.‌ ನಿನ್ನೆ ಶಾಂತಿನಗರದ ಬಿಎಂಟಿಸಿ ಕಚೇರಿಯಲ್ಲಿ ನೂತನ‌ ಆ್ಯಪ್ ಬಿಡುಗಡೆ ಕಾರ್ಯಕ್ರಮ‌ ನಡೆದಿದ್ದು, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬು ಕುಮಾರ್ ಚಾಲನೆ ನೀಡಿದರು.‌

ಬಿಎಂಟಿಸಿ ಕಚೇರಿಯಲ್ಲಿ ಟುಮೊಕ್ ನೂತನ‌ ಆ್ಯಪ್ ಬಿಡುಗಡೆ ಕಾರ್ಯಕ್ರಮ‌

ಬಿಎಂಟಿಸಿ ಪ್ರಯಾಣಿಕರು Tummoc (ಟುಮೊಕ್ ) ಆ್ಯಪ್ ಇನ್​ಸ್ಟಾಲ್ ಮಾಡಿ ಕೆಲ ಮಾಹಿತಿ ದಾಖಲು ಮಾಡಬೇಕು.‌ ತಮಗೆ ಅವಶ್ಯಕತೆ ಇರುವ ದೈನಿಕ, ವಾರ, ಮಾಸಿಕ ಪಾಸ್​ ಆಯ್ಕೆ ಮಾಡಿ, ಆನ್ ಲೈನ್ ಪೇಮೆಂಟ್ ಮಾಡಿ ಪಾಸ್​ ಅನ್ನ ಡೌನ್ ಲೋಡ್ ಮಾಡಿಕೊಳ್ಳಬಹುದು.‌ ಪ್ರತಿ ಪಾಸ್​ಗೆ unique ID ಹಾಗೂ Dynamic QR ಕೋಡ್ ಇರಲಿದ್ದು, ಡೌನ್​ಲೋಡ್​ ಆದ ಪಾಸ್ ಬಳಸಿ‌ ಪ್ರಯಾಣ ಮಾಡಬಹುದು.‌ ಬಿಎಂಟಿಸಿ ಪ್ರಯಾಣಿಕರ ಅನುಕೂಲಕ್ಕಾಗಿ ನಿಗಮವೆನೋ ಹೊಸ ವ್ಯವಸ್ಥೆ ಜಾರಿ ಮಾಡಿದೆ.

ಆದ್ರೆ, ಈ ವ್ಯವಸ್ಥೆಯಿಂದ ಕಂಡಕ್ಟರ್​ಗಳು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.‌ ಇಷ್ಟು ದಿನ ಬಸ್ ಪಾಸ್​ ಅನ್ನು ಕಂಡಕ್ಟರ್ ಬಳಿ ಅಥವಾ ಕೌಂಟರ್​ಗಳಲ್ಲಿ ಪಡೆಯಬಹುದಿತ್ತು. ಆದ್ರೆ, ಈಗ ಡಿಜಿಟಲ್ ಆಗಿರೋದ್ರಿಂದ‌ ಕಂಡಕ್ಟರ್​ಗೆ ಹೆಚ್ಚಿನ ಕೆಲಸ ಇರೋದಿಲ್ಲ.‌ ಎಲೆಕ್ಟ್ರಿಕ್ ಬಸ್​ಗಳಿಗೆ ನಿಗಮ‌ ಈಗಾಗಲೇ ಖಾಸಗಿ ಕಂಪನಿಯ ಚಾಲಕರನ್ನ ನೇಮಕ ಮಾಡಿ ಬಿಎಂಟಿಸಿ ಚಾಲಕರ ಕೆಲಸಕ್ಕೆ‌ ಕುತ್ತು ತಂದಿದೆ.‌ ಈಗ ಪಾಸ್ ವ್ಯವಸ್ಥೆ ಮಾಡಿದ್ದು, ಮುಂದಿನ ದಿನಗಳಲ್ಲಿ ಡಿಜಿಟಲ್ ಟಿಕೆಟ್ ವ್ಯವಸ್ಥೆ ಮಾಡಿದ್ರು ಅಚ್ಚರಿ ಪಡಬೇಕಿಲ್ಲ. ‌ಹೀಗಾಗಿ, ಪ್ರಯಾಣಿಕರಿಗೆ ಡಿಜಿಟಲ್ ಪಾಸ್ ಕೊಟ್ಟು ಕಂಡಕ್ಟರ್​ಗಳಿಗೆ ಗೇಟ್ ಪಾಸ್ ಕೊಡಲು ನಿಗಮ ಪ್ಲಾನ್ ಮಾಡ್ತಿದೆ ಅಂತಾ ಸಾರಿಗೆ ನೌಕರರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಟಿಕೆಟ್ ಪಾಸ್ ವ್ಯವಸ್ಥೆ ಸಂಪೂರ್ಣ ಡಿಜಿಟಲ್ ಆದ್ರು ಅದರ ಪರಿಶೀಲನೆ, ನಿರ್ವಹಣೆ ಹಾಗೂ ಅದರ ದುರುಪಯೋಗ ತಪ್ಪಿಸಲು ಕಂಡಕ್ಟರ್ ನೇಮಕ ಇರಲೇಬೇಕು ಅಂತಾ ಒತ್ತಾಯಿಸಿದ್ದಾರೆ.

ಇದನ್ನೂ ಓದಿ:ರಣಬಿಸಿಲಿಗೆ ಬಿಎಂಟಿಸಿ ಚಾಲಕರು ತತ್ತರ: ಸಿಬ್ಬಂದಿಗೆ ಎದುರಾಗ್ತಿದೆ ಅನಾರೋಗ್ಯ ಸಮಸ್ಯೆ

ABOUT THE AUTHOR

...view details