ಬಿಜೆಪಿಯ ಸದಸ್ಯ ಹೆಚ್.ವಿಶ್ವನಾಥ್ ಬೆಂಗಳೂರು: 15 ದಿನಗಳ ಕಾಲ ನಡೆದ ಬಜೆಟ್ ಅಧಿವೇಶನಕ್ಕೆ ತೆರೆ ಬಿದ್ದಿದ್ದು, ಪ್ರತಿಪಕ್ಷಗಳ ಗೈರಿನಲ್ಲೇ ಧನ ವಿನಿಯೋಗ ವಿಧೇಯಕಕ್ಕೆ ವಿಧಾನ ಪರಿಷತ್ ಅಂಗೀಕಾರ ನೀಡಿದೆ. ಸದನ ನಡೆಸಲು ಸಹಕರಿಸಿದ ಸರ್ವರಿಗೂ ಧನ್ಯವಾದ ಅರ್ಪಿಸಿದ ಸಭಾಪತಿ ಬಸವರಾಜ ಹೊರಟ್ಟಿ ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿಕೆ ಮಾಡಿದರು. ಬಜೆಟ್ ಮೇಲಿನ ಚರ್ಚೆಯ ನಂತರ ಮಾತನಾಡಿದ ಸಭಾನಾಯಕ ಬೋಸರಾಜ್, ಕಲಾಪ ನಡೆಸಲು ಸಹಕರಿಸಿದ ಸದಸ್ಯರು, ಸಚಿವರು,ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದರು.
ನಂತರ ಸಭಾಪತಿ ಬಸವರಾಜ ಹೊರಟ್ಟಿ, ಸಭಾನಯಕರ ನಂತರ ಪ್ರತಿಪಕ್ಷ ನಾಯಕರು ಮಾತನಾಡಬೇಕಿತ್ತು ಆದರೆ ಅವರು ಯಾರೂ ಇಲ್ಲ ನೀವೇ ಬಿಜೆಪಿ ಪರ ಮಾತನಾಡಿ ಎಂದು ಬಿಜೆಪಿಯ ರೆಬೆಲ್ ಸದಸ್ಯ ಹೆಚ್.ವಿಶ್ವನಾಥ್ಗೆ ಸೂಚಿಸಿದರು. ನಾನೇ ವಿರೋಧ ಪಕ್ಷದ ನಾಯಕ ಈಗ ಎನ್ನುತ್ತಲೇ ಕಲಾಪ ನಡೆಸಲು ಸಹಕರಿಸಿದ ಎಲ್ಲರಿಗೂ ವಿಶ್ವನಾಥ್ ಧನ್ಯವಾದ ಅರ್ಪಣೆ ಮಾಡಿದರು.
ನಂತರ ಮಾತನಾಡಿದ ಸಭಾಪತಿ ಬಸವರಾಜ ಹೊರಟ್ಟಿ, ಬಜೆಟ್ ಮೇಲೆ 6:40 ಗಂಟೆ ಚರ್ಚೆಯಾಗಿದ್ದು ಇದಕ್ಕೆ ಸಿಎಂ ಇಂದು 2.30 ಗಂಟೆಯ ಉತ್ತರ ನೀಡಿದ್ದಾರೆ. ಈ ಬಾರಿಯ ಅಧಿವೇಶನದಲ್ಲಿ 135 ಪ್ರಶ್ನೆಗಳಲ್ಲಿ 104ಕ್ಕೆ ಸದನದಲ್ಲಿ ಉತ್ತರ ಕೊಡಲಾಗಿದ್ದು 29 ಕ್ಕೆ ಲಿಖಿತ ಉತ್ತರ ನೀಡಲಾಗಿದೆ. ಎರಡಕ್ಕೆ ಉತ್ತರಿಸಿಲ್ಲ, 804 ಲಿಖಿತ ಮೂಲಕ ಉತ್ತರಿಸುವ 804 ಪ್ರಶ್ನೆಗಳಲ್ಲಿ 529 ಕ್ಕೆ ಉತ್ತರಿಸಲಾಗಿದೆ. ಶೂನ್ಯ ವೇಳೆಯಲ್ಲಿ ಕೇಳಲಾದ 159 ಪ್ರಶ್ನೆಗಳಲ್ಲಿ 19 ಕ್ಕೆ ಉತ್ತರ ನೀಡಲಾಗಿದೆ ಎಂದರು.
ಇನ್ನು ನಿಯಮ 330ರ ಅಡಿ 85 ಪ್ರಸ್ತಾವನೆಗಳಲ್ಲಿ 10ಕ್ಕೆ ಉತ್ತರಿಸಲಾಗಿದೆ, 56 ನಿಲುವಳಿ ಸೂಚನೆಗಳಲ್ಲಿ 46 ಕ್ಕೆ ಉತ್ತರಿಸಲಾಗಿದೆ. ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿ ಬಂದಿದ್ದ 13 ವಿಧೇಯಕಗಳಿಗೆ ಸದನ ಸಹಮತ ನೀಡಿದ್ದು ಎಪಿಎಂಸಿ ತಿದ್ದುಪಡಿ ವಿಧೇಯಕವನ್ನು ಸದನ ಪರಿಶೀಲನಾ ಸಮಿತಿಗೆ ವಹಿಸಿದೆ. ನಿಯಮ 59 ರಡಿಯ 5 ಪ್ರಸ್ತಾವನೆಗಳಲ್ಲಿ ಎರಡನ್ನು ಪರಿಗಣಿಸಿದ್ದು, ಮೂರನ್ನ ನಿಯಮ 60ಕ್ಕೆ ಪರಿವರ್ತಿಸಿದ್ದು ಒಂದಕ್ಕೆ ಉತ್ತರಿಸಲಾಗಿದೆ ಎಂದು ಕಾರ್ಯಕಲಾಪದ ವಿವರಗಳನ್ನು ನೀಡಿದರು.
ಬಳಿಕ ಎಲ್ಲರಿಗೂ ಧನ್ಯವಾದ ಸಲ್ಲಿಕೆ ಮಾಡಿದ ಸಭಾಪತಿ ಬಸವರಾಜ ಹೊರಟ್ಟಿ, ಸದನವನ್ನು ಅನಿರ್ದಿಷ್ಟ ಕಾಲಕ್ಕೆ ಮುಂದೂಡಿಕೆ ಮಾಡಿದರು. ರಾಷ್ಟ್ರಗೀತೆಯೊಂದಿಗೆ ಈ ಬಾರಿಯ ಅಧಿವೇಶನಕ್ಕೆ ತೆರೆ ಎಳೆಯಲಾಯಿತು. ವಿಧಾನ ಪರಿಷತ್ ಕಲಾಪದ ಕಡೆಯ ದಿನವಾದ ಇಂದು ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿದ್ದ ಕರ್ನಾಟಕ ಅನುಸೂಚಿತ ಜಾತಿಗಳ ಮತ್ತು ಅನುಸೂಚಿ ಬುಡಕಟ್ಟುಗಳ( ಕೆಲವು ಭೂಮಿಗಳ ವರ್ಗಾವಣೆಯ ನಿಷೇಧ) ತಿದ್ದುಪಡಿ ವಿಧೇಯಕ 2023 ಅನ್ನು ಸಚಿವ ಕೃಷ್ಣ ಬೈರೇಗೌಡ ಮಂಡಿಸಿದರು.
ಬಿಜೆಪಿ, ಜೆಡಿಎಸ್ ಸದಸ್ಯರಿಂದ ಕಲಾಪ ಬಹಿಷ್ಕಾರದ ನಡುವೆ ಯಾವುದೇ ಚರ್ಚೆ ಇಲ್ಲದೆ ವಿಧೇಯಕವನ್ನು ಅಂಗೀಕಾರ ಮಾಡಲಾಯಿತು. ಕಡೆಯದಾಗಿ ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿದ್ದ ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ(ತಿದ್ದುಪಡಿ) ವಿಧೇಯಕ 2023ಅನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಂಡನೆ ಮಾಡಿದರು, ಈ ಬಿಲ್ ಕೂಡ ಯಾವುದೇ ಚರ್ಚೆ ಇಲ್ಲದೆ ಅಂಗೀಕಾರವಾಯಿತು.
ಇದನ್ನೂ ಓದಿ:ಬರಪೀಡಿತ ಪ್ರದೇಶ ಘೋಷಣೆಗೆ ಇರುವ ಮಾನದಂಡ ಬದಲಾಯಿಸುವಂತೆ ಶೀಘ್ರ ಕೇಂದ್ರಕ್ಕೆ ಪತ್ರ: ಸಚಿವ ಕೃಷ್ಣಬೈರೇಗೌಡ