ಬೆಂಗಳೂರು: ಶಿವಾನಂದ ಸರ್ಕಲ್ ಮೇಲ್ಸೇತುವೆ ಕಾಮಗಾರಿಗಳು ಸೇರಿದಂತೆ ಹಿನ್ನಡೆಯಾಗಿದ್ದ ಅನೇಕ ಕಾಮಗಾರಿಗಳು ಚುರುಕು ಪಡೆಯಲಿವೆ. ವೈಟ್ ಟಾಪಿಂಗ್, ಮೇಲ್ಸೇತುವೆಗಳು, ಸಿಗ್ನಲ್ ಫ್ರೀ ಕಾರಿಡಾರ್ಗಳ ಯೋಜನೆಗೆ ಒಂದು ವರ್ಷದಿಂದ ಬಿಲ್ ಪಾವತಿ ಮಾಡಿರಲಿಲ್ಲ. ಈಗ ಬಿಲ್ ಪಾವತಿ ಮಾಡಲಾಗಿದೆ. ಜೊತೆಗೆ ನಾಲ್ಕು ತಿಂಗಳು ಗಡುವು ನೀಡಿದ್ದು, ಅಷ್ಟರೊಳಗೆ ಶಿವಾನಂದ ಸರ್ಕಲ್ ಕಾಮಗಾರಿ ಮುಕ್ತಾಯಗೊಳ್ಳಲಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.
ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಸಭೆ ಮುಖ್ಯ ರಸ್ತೆಗಳ ಗುಂಡಿ ಮುಚ್ಚಲು ನ. 15 ಡೆಡ್ ಲೈನ್
ರಸ್ತೆ ಗುಂಡಿಗಳನ್ನು ಮುಚ್ಚಲು ಪಾಲಿಕೆಯ ಹಾಟ್ ಮಿಕ್ಸ್ ಪ್ಲಾಂಟ್ನಿಂದ ಪ್ರತಿದಿನ ಹತ್ತು ಟ್ರಕ್ ಲೋಡ್ನಷ್ಟು ಮೆಟೀರಿಯಲ್ ತೆಗೆದುಕೊಂಡು ಪ್ರತಿದಿನ ವಲಯ, ಮುಖ್ಯ ರಸ್ತೆಗಳಲ್ಲಿ ಕೆಲಸ ಮಾಡಲಾಗುತ್ತಿದೆ. ಇದನ್ನು 20 ಟ್ರಕ್ ಲೋಡ್ಗೆ ಹೆಚ್ಚಳ ಮಾಡಲು ಕೆಲಸಗಾರರ ನಿಯೋಜನೆ ಮಾಡಲಾಗುತ್ತಿದೆ. ಆದರೆ ಇದನ್ನು ನಿರ್ವಹಿಸಲು ಕಾರ್ಮಿಕರ ತಂಡ ಬೇಕಾಗುತ್ತದೆ.
ಕಲಬುರಗಿ ಮೊದಲಾದ ಭಾಗಗಳಿಗೆ ಲಾಕ್ಡೌನ್ನಿಂದ ವಾಪಸ್ ಹೋಗಿದ್ದ ಕಾರ್ಮಿಕರನ್ನು ಗುತ್ತಿಗೆದಾರರಿಗೆ ಹೇಳಿ ಮತ್ತೆ ಕರೆಸಲಾಗುತ್ತಿದೆ. ನವೆಂಬರ್ 15ರ ಒಳಗೆ 1,300 ಕಿ.ಮೀ. ಉದ್ದದ ಮುಖ್ಯ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚಲಾಗುತ್ತದೆ. ವಾರ್ಡ್ ರಸ್ತೆಗಳಿಗೆ ನ. 30ರವರೆಗೆ ಎಂಜಿನಿಯರ್ಗಳಿಗೆ ಕಾಲಾವಕಾಶ ನೀಡಲಾಗಿದೆ ಎಂದರು.
ಜಲ ಮಂಡಳಿಯಿಂದ ನೀರು ಪೂರೈಕೆಗೆ, ಒಳಚರಂಡಿಗೆ 3,113 ಕಿ.ಮೀ. ರಸ್ತೆ ಅಗೆಯಲಾಗಿದೆ. ಇದನ್ನು ವಾಪಸ್ ಸರಿ ಮಾಡಲು ಜಲ ಮಂಡಳಿ ಕೊಡುವ ದುಡ್ಡನ್ನೂ ಸ್ಥಗಿತ ಮಾಡಿದೆ. ಆದರೆ ಜಲ ಮಂಡಳಿಯ ಹಣಕ್ಕೆ ಕಾಯದೆ ಬಿಬಿಎಂಪಿಯೇ ನಿರ್ವಹಿಸಲಿದೆ ಎಂದರು.
ಇಂದಿರಾ ಕ್ಯಾಂಟೀನ್ಗೆ ಕೊಡಲು ಹಣವಿಲ್ಲ
ಇಂದಿರಾ ಕ್ಯಾಂಟೀನ್ಗಳಿಗೆ ರಾಜ್ಯ ಸರ್ಕಾರ ಹಣ ನೀಡುತ್ತಿತ್ತು. ಈಗ ರಾಜ್ಯ ಸರ್ಕಾರ ನೀಡುತ್ತಿಲ್ಲ. ಇದಕ್ಕಾಗಿ ಪದೇ ಪದೆ ಪತ್ರ ಬರೆಯಲಾಗಿದೆ. ಹೀಗಾಗಿ ಆರು ತಿಂಗಳಿಂದ ಸಿಬ್ಬಂದಿಗೆ ವೇತನ ಆಗಿಲ್ಲ ಎಂದರು.