ಬೆಂಗಳೂರು :ಕರ್ನಾಟಕ ವಿಧಾನ ಪರಿಷತ್ಗೆ ಸಂಬಂಧಪಟ್ಟಂತೆ ಬೆಂಗಳೂರು ಪದವೀಧರರ ಕ್ಷೇತ್ರ ಮತ್ತು ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಯನ್ನು ನೂತನವಾಗಿ ಸಿದ್ಧಪಡಿಸುವ ಕಾರ್ಯವು ಈಗಾಗಲೇ ಪ್ರಾರಂಭವಾಗಿದ್ದು, ನಮೂನೆ-19ರಲ್ಲಿ ಅರ್ಜಿ ಸ್ವೀಕರಿಸಲು ನವೆಂಬರ್ 6 ಕೊನೆಯ ದಿನಾಂಕವಾಗಿರುತ್ತದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕೆ ಎ ದಯಾನಂದ ತಿಳಿಸಿದರು.
ಬೆಂಗಳೂರು ಪದವೀಧರ ಕ್ಷೇತ್ರ ಮತ್ತು ಶಿಕ್ಷಕರ ಕ್ಷೇತ್ರದ ಮತದಾರರ ನೋಂದಣಿಯ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಕರ್ನಾಟಕ ಪದವೀಧರ ಕ್ಷೇತ್ರ ಮತ್ತು ಶಿಕ್ಷಕರ ಕ್ಷೇತ್ರಗಳ ಮತದಾರರ ಪಟ್ಟಿಯನ್ನು ಹೊಸದಾಗಿ ಸಿದ್ಧಪಡಿಸುತ್ತಿರುವುದರಿಂದ ಈ ಹಿಂದಿನ ಮತದಾರರ ಪಟ್ಟಿಯಲ್ಲಿ ಹೆಸರು ಇರುವ ಮತದಾರರು ಕೂಡ ನಮೂನೆ-19ರಲ್ಲಿ ಹೊಸದಾಗಿ ಅರ್ಜಿ ಸಲ್ಲಿಸಬೇಕಾಗಿರುತ್ತದೆ ಎಂದು ತಿಳಿಸಿದರು.
ಅರ್ಜಿ ನಮೂನೆ-19ರಲ್ಲಿ ಅರ್ಜಿಯನ್ನು ಸಲ್ಲಿಸಲು ನವೆಂಬರ್ 6 ಕೊನೆ ದಿನಾಂಕವಾಗಿರುತ್ತದೆ. ಕರಡು ಮತದಾರರ ಪಟ್ಟಿಯು ನವೆಂಬರ್ 23ರಂದು ಪ್ರಕಟಿಸಲಾಗುವುದು. ಹಕ್ಕು ಮತ್ತು ಆಕ್ಷೇಪಣೆಗಳಿಗಾಗಿ ನವೆಂಬರ್ 23ರಿಂದ ಡಿಸೆಂಬರ್ 25ರೊಳಗೆ ಅರ್ಜಿ ಸಲ್ಲಿಸಬೇಕು. ಅಂತಿಮ ಮತದಾರರ ಪಟ್ಟಿಯು ಡಿಸೆಂಬರ್ 30ರಂದು ಪ್ರಕಟಿಸಲಾಗುತ್ತದೆ ಎಂದು ಹೇಳಿದರು. ಭಾರತ ಚುನಾವಣಾ ಆಯೋಗವು ಬೆಂಗಳೂರು ಪದವೀಧರ ಕ್ಷೇತ್ರ ಮತ್ತು ಬೆಂಗಳೂರು ಶಿಕ್ಷಕರ ಕ್ಷೇತ್ರಗಳ ಮತದಾರರ ಪಟ್ಟಿಗೆ ಸಂಬಂಧಪಟ್ಟಂತೆ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರನ್ನು ಮತದಾರರ ನೋಂದಣಾಧಿಕಾರಿಯಾಗಿ ನೇಮಿಸಿರುತ್ತದೆ ಎಂದರು.
ಪದವೀಧರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಮೂನೆ-18ರಲ್ಲಿ ಹಾಗೂ ಶಿಕ್ಷಕರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಮೂನೆ-19ರಲ್ಲಿ ಅರ್ಜಿಗಳನ್ನು ದಾಖಲೆಗಳೊಂದಿಗೆ ಅರ್ಹ ಪದವೀಧರರು ಮತ್ತು ಶಿಕ್ಷಕರು ನಿರ್ದಿಷ್ಟಪಡಿಸಿದ ಅಧಿಕಾರಿಗಳಿಗೆ ನೇರವಾಗಿ ಅಥವಾ ಅಂಚೆ ಮೂಲಕ ಸಲ್ಲಿಸಬೇಕು. ಈ ಅರ್ಜಿ ನಮೂನೆಗಳನ್ನು ಅರ್ಹ ಪದವೀಧರರು ಮತ್ತು ಶಿಕ್ಷಕರು ಸಂಬಂಧಪಟ್ಟ ಸಹಾಯಕ ಮತದಾರರ ನೋಂದಣಾಧಿಕಾರಿಗಳು /ತಹಶೀಲ್ದಾರ್/ನಿಯೋಜಿತ ಅಧಿಕಾರಿಗಳ ಕಚೇರಿಗಳಿಂದ ಮತ್ತು ಶಿಕ್ಷಣ ಸಂಸ್ಥೆಗಳಿಂದ ಪಡೆಯಬಹುದಾಗಿದೆ. ಅಥವಾ ವೆಬ್ಸೈಟ್ https://ceo.karnataka.gov.in/341/teachers-and-graduates-constituencies-2024/en ನಿಂದ ಕೂಡ ಡೌನ್ ಲೋಡ್ ಮಾಡಿಕೊಳ್ಳಬಹುದು ಎಂದು ತಿಳಿಸಿದರು.