ಬೆಂಗಳೂರು: ಸ್ಯಾಂಡಲ್ವುಡ್ ನಿರ್ಮಾಪಕ ಉಮಾಪತಿ ಕೊಲೆಗೆ ಸಂಚು ಸೇರಿದಂತೆ ಹತ್ತಾರು ಪ್ರಕರಣಗಳಲ್ಲಿ ಭಾಗಿಯಾಗಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ರೌಡಿ ರಾಜೇಶ್ ಅಲಿಯಾಸ್ ಕರಿಯಾ ರಾಜೇಶ್ನನ್ನು ಕೆಂಪೇಗೌಡ ನಗರ ಪೊಲೀಸ್ ಠಾಣೆ ಸಿಬ್ಬಂದಿ ಹೆಡೆಮುರಿ ಕಟ್ಟಿದ್ದಾರೆ.
ಕೊಲೆ ಯತ್ನ, ದರೋಡೆಗೆ ಸಂಚು, ಗಲಾಟೆ, ಮಾದಕ ವಸ್ತು ಮಾರಾಟ ಸೇರಿದಂತೆ ಏಳೆಂಟು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ರೌಡಿಶೀಟರ್ ಬಾಂಬೆ ರವಿ ಸಹಚರನಾಗಿರುವ ರಾಜೇಶ್ ವಿರುದ್ಧ ಐದಕ್ಕೂ ಹೆಚ್ಚು ಜಾಮೀನು ರಹಿತ ವಾರೆಂಟ್ ಇದ್ದರೂ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಹೀಗಾಗಿ ಆರೋಪಿಯನ್ನು ಬಂಧಿಸುವಂತೆ ಕೋರ್ಟ್ ಆದೇಶಿಸಿತ್ತು.
ಹೆಬ್ಬುಲಿ, ರಾಬರ್ಟ್, ಮದಗಜ ಸೇರಿದಂತೆ ಹಲವು ಚಿತ್ರಗಳ ನಿರ್ಮಾಪಕರಾದ ಉಮಾಪತಿ ಕೊಲೆಗೆ ಸಂಚು ರೂಪಿಸಿದ ಆರೋಪದಡಿ ಕಳೆದ ಎರಡು ವರ್ಷಗಳ ಹಿಂದೆ ಜಯನಗರ ಪೊಲೀಸರು 11 ಮಂದಿ ಆರೋಪಿಗಳ ಪೈಕಿ ರಾಜೇಶ್ ಸಹ ಒಬ್ಬನಾಗಿದ್ದ. ಮಾದಕವಸ್ತು ಮಾರಾಟ, ಉದ್ಯಮಿಗಳಿಗೆ ಬೆದರಿಕೆ ಹಾಕಿ ಹಣ ವಸೂಲಿ ಸೇರಿದಂತೆ ವಿವಿಧ ಅಪರಾಧ ಕೃತ್ಯಗಳಲ್ಲಿ ರೌಡಿ ರಾಜೇಶ್ ಸಕ್ರಿಯನಾಗಿದ್ದ. ಸದ್ಯ ಆರೋಪಿಯನ್ನ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ದಕ್ಷಿಣ ವಿಭಾಗದ ಡಿಸಿಪಿ ಕೃಷ್ಣಕಾಂತ್ ತಿಳಿಸಿದ್ದಾರೆ.
ನೇಪಾಳದಲ್ಲಿ ರೌಡಿಶೀಟರ್ ರಾಜೇಶ್ ಬಂಧನ: ರಾಬರ್ಟ್ ಚಿತ್ರದ ನಿರ್ಮಾಪಕ ಉಮಾಪತಿ ಹಾಗೂ ರೌಡಿಶೀಟರ್ ಸೈಕಲ್ ರವಿ ಹತ್ಯೆಗೆ ಸಂಚು ರೂಪಿಸಿದ ಆರೋಪದಡಿ ರೌಡಿಶೀಟರ್ ರಾಜೇಶ್ ಅಲಿಯಾಸ್ ಕರಿಯಾ ರಾಜೇಶ್ನನ್ನು ಕೆಂಪೇಗೌಡ ನಗರ ಪೊಲೀಸರು (ಜೂನ್ 15, 2021ರಂದು) ಬಂಧಿಸಿದ್ದರು. ಬಳಿಕ ಜಾಮೀನು ಪಡೆದು ಹೊರಬಂದಿದ್ದ.
ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಬಾಂಬೆ ರವಿಯ ಸೂಚನೆಯ ಮೇರೆಗೆ ಕಳೆದ ವರ್ಷ (2020) ಡಿ. 20 ರಂದು ನಿರ್ಮಾಪಕ ಉಮಾಪತಿ, ಸಹೋದರ ದೀಪಕ್, ರೌಡಿಶೀಟರ್ಗಳಾದ ಸೈಕಲ್ ರವಿ, ಬೇಕರಿ ರಘು ಸೇರಿದಂತೆ ಇನ್ನಿತರರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು.