ಬೆಂಗಳೂರು:ರಾಜ್ಯದಲ್ಲಿ ಕೋವಿಡ್ ಅಬ್ಬರದ ಹಿನ್ನೆಲೆ ದ್ವಿತೀಯ ಪಿಯುಸಿ ಪರೀಕ್ಷೆ ರದ್ದು ಮಾಡಲಾಗಿದೆ. ಇತ್ತ ವಿದ್ಯಾರ್ಥಿಗಳ ಕಲಿಕಾ ಮಟ್ಟ ನಿರ್ಧರಿಸಲು ಗ್ರೇಡಿಂಗ್ ವ್ಯವಸ್ಥೆ ಮಾಡಲಾಗಿದೆ. ಈ ಹಿನ್ನೆಲೆ ವಿದ್ಯಾರ್ಥಿಗಳ ಎಸ್ಎಸ್ಎಲ್ಸಿ ಅಂಕ, ಪ್ರಥಮ ಪಿಯುಸಿ ಅಂಕ ಪರಿಗಣಿಸಿ ಫಲಿತಾಂಶ ಪ್ರಕಟಿಸಲು ನಿರ್ಧರಿಸಲಾಗಿದೆ. ಹಾಗಾಗಿ 2020-2021ರ ಸಾಲಿನಲ್ಲಿ ದ್ವಿತೀಯ ಪಿಯುಸಿಗೆ ದಾಖಲಾಗಿರುವ ವಿದ್ಯಾರ್ಥಿಗಳ ಸಂಪೂರ್ಣ ಮಾಹಿತಿಯನ್ನು SATS PORTALನಲ್ಲಿ ನಮೂದಿಸಲು ಆದೇಶಿಸಲಾಗಿದೆ.
ವಿದ್ಯಾರ್ಥಿಗಳ ವಿವರ ಕ್ರೋಢೀಕರಿಸಲು SATS ತಂತ್ರಾಂಶವನ್ನು ಅಳವಡಿಸಲಾಗಿದೆ. ಪ್ರಸ್ತುತ ವರ್ಷ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸಂಪೂರ್ಣ ಮಾಹಿತಿಯನ್ನು ಪಡೆಯಲಾಗಿದೆ. ದ್ವಿತೀಯ ವರ್ಷದ ಪಿಯುಸಿಗೆ ದಾಖಲಾಗಿ ಅರ್ಹತೆ ಪಡೆದ ವಿದ್ಯಾರ್ಥಿಗಳ ಮಾಹಿತಿಯನ್ನು ಪಡೆಯಲಾಗಿದೆ. ಎಲ್ಲಾ ಕಾಲೇಜುಗಳ ಮುಖ್ಯಸ್ಥರು, ಈಗಾಗಲೇ ದ್ವಿತೀಯ ಪಿಯುಸಿಗೆ ದಾಖಲಾದ ವಿದ್ಯಾರ್ಥಿಗಳ ಶುಲ್ಕ ಸಂಗ್ರಹಣೆ ವಿವರ ಹಾಗೂ ಅವರು ಪ್ರಥಮ ಪಿಯುಸಿಯಲ್ಲಿ ಗಳಿಸಿದ ಒಟ್ಟು ಅಂಕಗಳ ಮಾಹಿತಿ ಪಡೆದಿದ್ದಾರೆ. ಈಗ ವಿದ್ಯಾರ್ಥಿಗಳು ಪ್ರಥಮ ಪಿಯುಸಿಯಲ್ಲಿ ವಿಷಯವಾರು ಪಡೆದ ಅಂಕಗಳನ್ನು ಹಾಗೂ 10ನೇ ತರಗತಿಯಲ್ಲಿ ಪಡೆದ ಅಂಕಗಳನ್ನು SATS PORTALನಲ್ಲಿ ನಮೂದು ಮಾಡುವುದನ್ನು ಕಡ್ಡಾಯ ಮಾಡಿ ಆದೇಶಿಸಲಾಗಿದೆ.
ರಾಜ್ಯದ ಪಿಯುಸಿ ಮುಖ್ಯಸ್ಥರು ಏನು ಮಾಡಬೇಕು?
-SATS PORTALನಲ್ಲಿ ಈಗಾಗಲೇ ದ್ವಿತೀಯ ಪಿಯುಸಿಗೆ ದಾಖಲಾದ ವಿದ್ಯಾರ್ಥಿಗಳ, ಪ್ರಥಮ ಪಿಯುಸಿ ವಿಷಯವಾರು ಅಂಕಗಳನ್ನು ದಾಖಲಿಸಲು ಅವಕಾಶ ನೀಡಲಾಗಿದೆ. ಈಗಾಗಲೇ ಪ್ರಥಮ ಪಿಯುಸಿಯಲ್ಲಿ ವಿದ್ಯಾರ್ಥಿ ಪಡೆದ ಒಟ್ಟು ಅಂಕಗಳನ್ನು ದಾಖಲಿಸಲಾಗಿದ್ದು, ಅದನ್ನು ಸಂಗ್ರಹ ಮಾಡಲಾಗಿದೆ. ಸದ್ಯ ಒಟ್ಟು ಅಂಕಗಳಿಗೆ ಅನುಗುಣವಾಗಿ ವಿದ್ಯಾರ್ಥಿ ಪಡೆದ ವಿಷಯವಾರು ಅಂಕಗಳನ್ನು ನಮೂದಿಸುವುದು, ಸದರಿ ಅಂಕಗಳನ್ನು ಉಪನಿರ್ದೇಶಕರುಗಳಿಂದ ಈಗಾಗಲೇ ದೃಢೀಕರಿಸಿಕೊಂಡ ಪಟ್ಟಿಯನ್ನಾಧರಿಸಿ ನಮೂದಿಸಬೇಕು..
- ಒಂದು ವೇಳೆ ವಿಷಯವಾರು ಅಂಕಗಳಲ್ಲಿ ವ್ಯತ್ಯಾಸವಾದಲ್ಲಿ ಸಂಬಂಧಿಸಿದ ಪ್ರಾಚಾರ್ಯರ ಮೇಲೆ ಶಿಸ್ತು ಕ್ರಮ ಜರುಗಿಸಲಾಗುತ್ತದೆ.
- ಅನುದಾನಿತ ಹಾಗೂ ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರು ಅಂಕಗಳನ್ನು ನಮೂದಿಸುವ ಸಂದರ್ಭದಲ್ಲಿ ಲೋಪವಸಗಿದ್ದರೆ, ಶಿಸ್ತು ಕ್ರಮದ ಜತೆಗೆ ಕಾಲೇಜಿನ ಮಾನ್ಯತೆ ರದ್ದುಪಡಿಸಲು ಸರ್ಕಾರಕ್ಕೆ ಶಿಫಾರಸು ಮಾಡಲಾಗುತ್ತದೆ.