ಬೆಂಗಳೂರು: ಪಕ್ಷೇತರನಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದ ಮಲ್ಲಿಕಾರ್ಜುನ್ ಆಲಿಯಾಸ್ ಫೈಟರ್ ರವಿ ಮನೆ ಮೇಲೆ ಎರಡು ದಿನಗಳ ಹಿಂದೆಯಷ್ಟೇ ಐಟಿ ದಾಳಿ ನಡೆದಿತ್ತು. ಈ ಬೆನ್ನಲ್ಲೇ ಈಗ ಸಿಸಿಬಿ ಪೊಲೀಸರು, ಇಂದು ಆತನ ಮನೆಗೆ ತೆರಳಿ ನೊಟೀಸ್ ಜಾರಿ ಮಾಡಿದ್ದಾರೆ.
ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದಡಿ ವೈಯಾಲಿ ಕಾವಲ್ನಲ್ಲಿರುವ ಅವರ ಮನೆ ಮೇಲೆ ಐಟಿ ದಾಳಿ ನಡೆಸಿತ್ತು. ಈ ವೇಳೆ ಮಹತ್ವದ ದಾಖಲಾತಿಗಳನ್ನು ವಶಕ್ಕೆ ಪಡೆದುಕೊಂಡಿತ್ತು. ಐಟಿ ದಾಳಿಯಾದ ಎರಡು ದಿನಗಳ ಅಂತರದಲ್ಲಿ ಗೋಡಂಬಿ ವಹಿವಾಟಿನಲ್ಲಿ ಅವ್ಯವಹಾರ ನಡೆಸಿದ ಆರೋಪದಡಿ ಸಿಸಿಬಿ ಆರ್ಥಿಕ ಅಪರಾಧ ದಳ ಅಧಿಕಾರಿಗಳು ರವಿ ಮನೆಗೆ ತೆರಳಿ ನೋಟಿಸ್ ನೀಡಿದ್ದಾರೆ. ಇದೇ ತಿಂಗಳು 25ರಂದು ವಿಚಾರಣೆ ಹಾಜರಾಗಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ನೊಟೀಸ್ನಲ್ಲಿ ಉಲ್ಲೇಖವಾಗಿದೆ.
ಕಳೆದ ಒಂದೂವರೆ ವರ್ಷಗಳ ಹಿಂದೆ ದಾಖಲಾಗಿದ್ದ ಪ್ರಕರಣ ಸಂಬಂಧ ತನಿಖೆ ವೇಳೆ ರವಿಯ ಹೆಸರು ಕೇಳಿಬಂದಿತ್ತು. ಗೋಡಂಬಿ ವ್ಯವಹಾರದಲ್ಲಿ ವಂಚನೆ ಎಸಗಿರುವ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಸದ್ಯ ಆತನ ಮನೆಗೆ ತೆರಳಿ ನೋಟಿಸ್ ನೀಡಲಾಗಿದೆ.