ಬೆಂಗಳೂರು: ನಗರದ ವಿವಿಧೆಡೆಯಿರುವ ಓಲಾ ಮತ್ತು ಉಬರ್ ಕಚೇರಿಗಳ ಮೇಲೆ ಆರ್ಟಿಓ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಲೈಸೆನ್ಸ್ ಪಡೆಯುವ ವಿಚಾರದಲ್ಲಿ ಲೋಪಗಳಾಗಿರುವುದು ಮತ್ತು ಪ್ರಯಾಣಿಕರಿಗೆ ಸೇವೆ ಒದಗಿಸುವ ವಿಚಾರದಲ್ಲಿ ತಪ್ಪುಗಳಾಗಿರುವ ಬಗ್ಗೆ ಆರೋಪಗಳು ಕೇಳಿಬಂದ ಹಿನ್ನೆಲೆ ನಿನ್ನೆ ದಾಳಿ ನಡೆದಿತ್ತು.
ಓಲಾ, ಉಬರ್ ಕಂಪನಿಗಳ ಹಠಮಾರಿ ಧೋರಣೆ.. RTO ಅಧಿಕಾರಿಗಳಿಂದ ನೋಟಿಸ್! ನಿಗದಿತ ದರಕ್ಕಿಂತ ಹೆಚ್ಚು ಹಣ ವಸೂಲಿ, ಡ್ರೈವಿಂಗ್ ಲೈಸೆನ್ಸ್ ಇಲ್ಲದವರು ವಾಹನ ಚಾಲನೆ, ಮೋಟಾರು ವಾಹನ ಕಾಯ್ದೆ ಉಲ್ಲಂಘನೆ ಬಗ್ಗೆ ಪ್ರಯಾಣಿಕರಿಂದ ದೂರುಗಳು ಕೇಳಿ ಬಂದಿದ್ದವು. ಅಲ್ಲದೆ, ಕೆಲ ಮಾಲೀಕರು ಚಾಲಕರಿಗೂ ಸರಿಯಾಗಿ ಹಣ ಕೊಡುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆ ದಾಳಿ ನೆಡೆದಿದೆ ಎಂದು ಹಿರಿಯ ಅಧಿಕಾರಿಗಳು 'ಈಟಿವಿ ಭಾರತ'ಕ್ಕೆ ತಿಳಿಸಿದ್ದಾರೆ.
100 ರಿಂದ 200 ವಾಹನಗಳಿಗೆ ಲೈಸೆನ್ಸ್ ಪಡೆದು, 10 ಸಾವಿರದಿಂದ 15 ಸಾವಿರ ವಾಹನಗಳ ಓಡಾಟ ನಡೆಸುತ್ತಿರುವ ಆರೋಪವೂ ಕೇಳಿಬಂದಿದೆ. ಲಾಕ್ಡೌನ್ಗೂ ಮೊದಲು 5 ಸಾವಿರ ವಾಹನಗಳು ಓಡಾಡುತ್ತಿದ್ದವು. ಆದರೆ, ಜಾಸ್ತಿ ವಾಹನಗಳು ರಸ್ತೆಗಿಳಿದಿರುವ ಲೆಕ್ಕವನ್ನೇ ಓಲಾ, ಉಬರ್ ಕಂಪನಿಗಳು ನೀಡಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ:ಪರಿಹಾರ ಪಡೆಯಲು ದುರ್ಮಾರ್ಗ: ಬಾಗಲಕೋಟೆಯಲ್ಲಿ ಬೆಳಕಿಗೆ ಬಂತು RTPCR ವರದಿ ಕರ್ಮಕಾಂಡ!
ಪ್ರತಿ ಮೂರು ತಿಂಗಳಿಗೊಮ್ಮೆ ಚಾಲಕರ ವಿವರ, ವಾಹನಗಳ ವಿವರ, ವಿಮೆ, ಫಿಟ್ನೆಸ್, ಎಮಿಷನ್ ಪ್ರಮಾಣಪತ್ರಗಳನ್ನು ಸಲ್ಲಿಸಬೇಕು. ಮುಖ್ಯವಾಗಿ ಸಾರಿಗೆ ಇಲಾಖೆಗೆ ಆಫೀಸ್ ವಿಳಾಸವನ್ನೇ ತಪ್ಪಾಗಿ ನೀಡಿದ್ದಾರೆ. ಈ ಎಲ್ಲಾ ನಿಯಮಗಳ ಪಾಲನೆಯಾಗಿಲ್ಲ ಎನ್ನುವ ದೂರಿನ ಹಿನ್ನೆಲೆ ದಾಳಿ ನೆಡೆಸಿದ್ದೇವೆ. ನೋಟೀಸ್ ನೀಡಿದ್ದು, ಸೂಕ್ತ ದಾಖಲಾತಿಗಳನ್ನು ನೀಡದೆ ಮತ್ತು ಕಾರ್ಯವೈಖರಿಯನ್ನು ಸರಿಪಡಿಸಿಕೊಳ್ಳದೆ ಹೋದರೆ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳುವುದಾಗಿ ಆರ್ಟಿಓ ಅಧಿಕಾರಿಗಳು ತಿಳಿಸಿದ್ದಾರೆ.