ಕರ್ನಾಟಕ

karnataka

ETV Bharat / state

‌ಶಾಲಾ ಶುಲ್ಕ ವಿಚಾರ : ಪ್ರೆಸಿಡೆನ್ಸಿ ಶಾಲೆಗೆ ಶಿಕ್ಷಣ ಇಲಾಖೆಯಿಂದ ನೋಟಿಸ್ - ಶಿಕ್ಷಣ ಇಲಾಖೆ

ಇದು ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ 2009ರ ಸೆಕ್ಷನ್ 17(1)ಕ್ಕೆ ವಿರುದ್ಧವಾಗಿ ಆಡಳಿತ ಮಂಡಳಿಯು ವಿದ್ಯಾರ್ಥಿ ಮತ್ತು ವಿದ್ಯಾರ್ಥಿ ಪೋಷಕರಿಗೆ ತೊಂದರೆಯನ್ನು ನೀಡುತ್ತಿರುವುದು ದೂರಿನಿಂದ ತಿಳಿದು ಬಂದಿದೆ. ಕೋವಿಡ್-19 ಸಂದಿಗ್ಧ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗೆ ಮತ್ತು ವಿದ್ಯಾರ್ಥಿ ಪೋಷಕರಿಗೆ ಈ ರೀತಿ ಮಾನಸಿಕ ಕಿರುಕುಳವನ್ನು ನೀಡಿ ಮಕ್ಕಳ ಶಿಕ್ಷಣ ಹಕ್ಕನ್ನು ಕಸಿಯುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ..

Notice from Department of Education to Presidency School
ಪ್ರೆಸಿಡೆನ್ಸಿ ಶಾಲೆಗೆ ಶಿಕ್ಷಣ ಇಲಾಖೆಯಿಂದ ನೋಟಿಸ್

By

Published : Jun 8, 2021, 7:49 PM IST

ಬೆಂಗಳೂರು :ಶೈಕ್ಷಣಿಕ ವರ್ಷ ಆರಂಭಕ್ಕೂ ಮುನ್ನವೇ ನಗರದ ನಂದಿನಿಲೇಔಟ್​ನ ಪ್ರೆಸಿಡೆನ್ಸಿ ಶಾಲೆಯಿಂದ ಫೀಸ್ ಟಾರ್ಚರ್ ಮಾಡುತ್ತಿದ್ದಾರೆ ಎಂದು ಮಕ್ಕಳ ಪೋಷಕರು ಪ್ರತಿಭಟನೆಗೆ ಮುಂದಾಗಿದ್ದರು. ಈ ಹಿನ್ನೆಲೆ ಸಾರ್ವಜನಿಕ ಶಿಕ್ಷಣ ಇಲಾಖೆ ಕಾರಣ ಕೇಳಿ ಶಾಲೆಗೆ ನೋಟಿಸ್ ಜಾರಿ ಮಾಡಿದೆ.

ಪ್ರೆಸಿಡೆನ್ಸಿ ಶಾಲೆಗೆ ಶಿಕ್ಷಣ ಇಲಾಖೆಯಿಂದ ನೋಟಿಸ್

2021-22ನೇ ಶೈಕ್ಷಣಿಕ ಸಾಲಿನ ಇಲಾಖಾ ಅನುಮತಿ ಇಲ್ಲದೇ ಆನ್‌ಲೈನ್‌ ತರಗತಿಯನ್ನು ಪ್ರಾರಂಭಿಸಿ, ಹಿಂದಿನ ಸಾಲಿನ ಶುಲ್ಕ ಪಾವತಿಸದ ಮಕ್ಕಳ ಆನ್‌ಲೈನ್‌ ತರಗತಿಯನ್ನು ತಡೆಹಿಡಿದು ವಿದ್ಯಾರ್ಥಿಗಳಿಗೆ ತೊಂದರೆ, ತಾರತಮ್ಯ ಎಸಗುತ್ತಿರುವ ಕುರಿತು ನೋಟಿಸ್ ನೀಡಲಾಗಿದೆ.

ಇಲಾಖೆಯ ಆದೇಶದ ಪ್ರಕಾರ, ಪ್ರವೇಶ ಪಟ್ಟಿಯ ಮಾಹಿತಿ ಹಾಗೂ ತರಗತಿವಾರು ಪಾವತಿಸಬೇಕಾದ ಶುಲ್ಕದ ವಿವರವನ್ನು ಶಾಲಾ ಸೂಚನಾ ಫಲಕದಲ್ಲಿ ಪ್ರಕಟಿಸಬೇಕು. ದಾಖಲಾತಿ ಪ್ರಕ್ರಿಯೆ ಜೂನ್ 15ಕ್ಕೆ ಪ್ರಾರಂಭಿಸಿ ಆಗಸ್ಟ್ 31ರೊಳಗಾಗಿ ಮುಕ್ತಾಯಗೊಳಿಸಲು ಅಗತ್ಯ ಸೂಚನೆ ಮತ್ತು ಷರತ್ತು ವಿಧಿಸಿ ತಿಳಿಸಲಾಗಿದೆ.

ಮಕ್ಕಳಿಗೆ ಆನ್‌ಲೈನ್ ತರಗತಿಯನ್ನು ನೀಡದೇ, ಆನ್‌ಲೈನ್‌ ತರಗತಿಯನ್ನು ಡಿ-ಆಕ್ಟಿವೇಟಿವ್ ಮಾಡಲಾಗಿದೆ. ಮಗುವಿನ ಶೈಕ್ಷಣಿಕ ಮೂಲಭೂತ ಹಕ್ಕನ್ನು ಕಸಿದುಕೊಂಡು ಮಗುವಿಗೆ ದೈಹಿಕ ಹಾಗೂ ಮಾನಸಿಕ ತೊಂದರೆ ನೀಡುತ್ತಿದ್ದಾರೆ.

ಮಗುವಿನ ದಾಖಲಾತಿಯನ್ನು ಕೊಡಿಸಿಕೊಡಬೇಕೆಂದು ಮತ್ತು ಈ ರೀತಿ ದಾಖಲಾತಿ ನೀಡದೇ ಆರ್​ಟಿಇ ನಿಯಮಗಳಿಗೆ ವಿರುದ್ಧವಾಗಿ ತೊಂದರೆ ನೀಡುತ್ತಿರುವ ಶಿಕ್ಷಣ ಸಂಸ್ಥೆಯ ವಿರುದ್ಧ ಶಿಕ್ಷಣ ಹಕ್ಕು ಕಾಯ್ದೆಯನ್ವಯ ಕ್ರಮಕೈಗೊಳ್ಳಲು ಸ್ಥಳೀಯ ಪೊಲೀಸರಿಗೆ ಪೋಷಕರು ದೂರು ಕೂಡ ನೀಡಿದ್ದಾರೆ.

ಇನ್ನು, ಈ ಶಾಲೆಯ ವಿರುದ್ಧ ಮಗುವಿನ ಬೋಧನಾ ಶುಲ್ಕ ವಸೂಲಾತಿಗೆ ಸಂಬಂಧಿಸಿದಂತೆ ಇಲಾಖಾ ಅಧಿಕಾರಿ ಸಮಿತಿಯಲ್ಲಿ ಪ್ರಕರಣ ಬಾಕಿ ಇದೆ. ಹೀಗಿರುವಾಗ ನೀವು ಈ ನಡುವೆ ಇಲಾಖೆಯ ಸುತ್ತೋಲೆ/ಆದೇಶಗಳಿಗೆ ವಿರುದ್ಧವಾಗಿ ಆನ್‌ಲೈನ್ ತರಗತಿಯನ್ನು ಪ್ರಾರಂಭಿಸಿದ್ದೀರಿ.

ಜೊತೆಗೆ ದೂರು ನೀಡಿರುವ ವಿದ್ಯಾರ್ಥಿ ಪೋಷಕರ ಮಕ್ಕಳ ಆನ್‌ಲೈನ್ ತರಗತಿಯನ್ನು ನಿಲ್ಲಿಸಿ ವಿದ್ಯಾರ್ಥಿಯ ಕಲಿಕೆಗೆ ಅಡಚಣೆ ಮಾಡಲಾಗಿದೆ.‌ ಶಾಲೆಯ ಕೆಲವು ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಕ್ಲಾಸ್​ಗೆ ಅವಕಾಶ ನೀಡಿ ಕೆಲವು ವಿದ್ಯಾರ್ಥಿಗಳಿಗೆ ಅವಕಾಶವನ್ನು ನೀಡದೇ ಶಾಲೆಯ ಪ್ರಾರಂಭದಲ್ಲಿಯೇ ಮಕ್ಕಳಲ್ಲಿ ತಾರತಮ್ಯ ಎಸಗುತ್ತಿರುವುದು ಕಂಡು ಬಂದಿದೆ.

ಇದು ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ 2009ರ ಸೆಕ್ಷನ್ 17(1)ಕ್ಕೆ ವಿರುದ್ಧವಾಗಿ ಆಡಳಿತ ಮಂಡಳಿಯು ವಿದ್ಯಾರ್ಥಿ ಮತ್ತು ವಿದ್ಯಾರ್ಥಿ ಪೋಷಕರಿಗೆ ತೊಂದರೆಯನ್ನು ನೀಡುತ್ತಿರುವುದು ದೂರಿನಿಂದ ತಿಳಿದು ಬಂದಿದೆ. ಕೋವಿಡ್-19 ಸಂದಿಗ್ಧ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗೆ ಮತ್ತು ವಿದ್ಯಾರ್ಥಿ ಪೋಷಕರಿಗೆ ಈ ರೀತಿ ಮಾನಸಿಕ ಕಿರುಕುಳವನ್ನು ನೀಡಿ ಮಕ್ಕಳ ಶಿಕ್ಷಣ ಹಕ್ಕನ್ನು ಕಸಿಯುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ.

ಈ ನಿಮ್ಮ ಮಕ್ಕಳ ವಿರುದ್ಧದ ಧೋರಣೆಯು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ನೀತಿಗೆ ವಿರುದ್ಧವಾಗಿದೆ. ಈ ರೀತಿ ಮಕ್ಕಳ ಹಕ್ಕುಗಳ ರಕ್ಷಣಾ ಕಾಯಿದೆ ಶಿಕ್ಷಣ ಕಾಯಿದೆ 2009ರ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ‌.‌ ಹೀಗಾಗಿ, ಆಡಳಿತ ಮಂಡಳಿ ಈ ಬಗ್ಗೆ ಪೂರಕ ದಾಖಲೆ, ವಿವರಣೆ ಅತಿ ಜರೂರಾಗಿ ಮೂರು ದಿನದೊಳಗೆ ಸಲ್ಲಿಸಲು ಸೂಚಿಸಲಾಗಿದೆ. ಒಂದು ವೇಳೆ ಪ್ರತಿಕ್ರಿಯೆ ಬರದೇ ಹೋದರೆ ಶಾಲೆಯ ಹೇಳಿಕೆಯು ಇಲ್ಲವೆಂದು ತಿಳಿದು ಶಿಸ್ತುಕ್ರಮಕ್ಕೆ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದೆಂದು ಬಿಇಒ ಅಧಿಕಾರಿ ವಿ.ರಮೇಶ್ ಎಚ್ಚರಿಕೆ ನೀಡಿದ್ದಾರೆ.

ಓದಿ:ಉದಾಸಿ ಕಳೆದುಕೊಂಡು ತಬ್ಬಲಿಯಾಗಿದ್ದೇವೆ: ರಾಜಕೀಯ ಗಣ್ಯರ ಸಂತಾಪ

ABOUT THE AUTHOR

...view details