ಬೆಂಗಳೂರು :ಕಬ್ಬಿನ ದರ ಏರಿಕೆ ಬಗ್ಗೆ ಡಿಸೆಂಬರ್ 23ರ ಒಳಗೆ ಸರ್ಕಾರದ ನಿರ್ಧಾರವಾಗದಿದ್ದರೆ 26 ರಂದು ಬೆಳಗಾವಿ ಸುವರ್ಣಸೌಧ ಮುತ್ತಿಗೆ ಹಾಕಲಾಗುವುದು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್ ತಿಳಿಸಿದರು.
ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ 27ನೇ ದಿನದ ಧರಣಿ ನಿರತ ರೈತರ ಉದ್ದೇಶಿಸಿ ಮಾತನಾಡಿದ ಅವರು, ಕಬ್ಬಿನ ಎಫ್ಆರ್ಪಿ ದರ ಏರಿಕೆ, ಕಟಾವು ಕೂಲಿ, ಸಾಗಾಣಿಕೆ ವೆಚ್ಚ ಕಡಿತ ಮಾಡುವ ಬಗ್ಗೆ ಮುಖ್ಯಮಂತ್ರಿ ಒಪ್ಪಿಕೊಂಡಿದ್ದಾರೆ. ಅದರಂತೆ ಡಿಸೆಂಬರ್ 23 ವಿಶ್ವ ರೈತ ದಿನದ ಆಚರಣೆಯ ಒಳಗೆ ತೀರ್ಮಾನ ಕೈಗೊಳ್ಳಬೇಕು. ನಿರ್ಲಕ್ಷ್ಯ ಮಾಡಿದರೆ 26ರಂದು ಬೆಳಗಾವಿ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ರವಾನಿಸಿದರು.
ಕಳೆದ ನಾಲ್ಕು ತಿಂಗಳಿಂದ ಕಬ್ಬು ನುರಿಸಿರುವ ಕಾರ್ಖಾನೆಗಳು ರೈತರಿಗೆ ಕಬ್ಬಿನ ಹಣವನ್ನೇ ಪಾವತಿಸಿಲ್ಲ. ಕೆಲವು ಕಾರ್ಖಾನೆಗಳು ನೆಪ ಮಾತ್ರಕ್ಕೆ ಅಲ್ಪ ಸ್ವಲ್ಪ ಪಾವತಿಸಿದ್ದಾರೆ. ಎಫ್ಆರ್ಪಿ ನಿಯಮ ಪ್ರಕಾರ 14 ದಿವಸದಲ್ಲಿ ಪಾವತಿಸಬೇಕು ಎಂದು ಇದೆ. ಆದರೆ ಕಾರ್ಖಾನೆಗಳು ಈ ನಿಯಮ ಉಲ್ಲಂಘನೆ ಮಾಡಿ, ಎರಡು ಸಾವಿರ ಕೋಟಿಗೂ ಹೆಚ್ಚು ಹಣ ಉಳಿಸಿಕೊಂಡಿದ್ದಾರೆ. ರಾಜ್ಯ ಸರ್ಕಾರ ಈ ಕುರಿತು ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.