ಬೆಂಗಳೂರು: ರಾಜ್ಯದಲ್ಲಿ ಕೈಗಾರಿಕೆಗಳ ಸಂಖ್ಯೆ ಹೆಚ್ಚಾಗುತ್ತಿದ್ದರೂ, ಕಾರ್ಖಾನೆಗಳ ತ್ಯಾಜ್ಯ ಸಂಸ್ಕರಣೆ ಮಾಡಲು ಸಂಸ್ಕರಣಾ ಘಟಕಗಳ ಕೊರತೆ ಇದೆ. ರಾಜ್ಯದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ 2018 -19ರ ವರದಿ ಪ್ರಕಾರ ಕೇವಲ 11 ಸಂಸ್ಕರಣಾ ಘಟಕ ಕಾರ್ಯ ನಿರ್ವಹಿಸುತ್ತಿವೆ.
ಮಾಲಿನ್ಯ ನಿಯಂತ್ರಣ ಮಂಡಳಿಯ 2018-19 ವರದಿ ಪ್ರಕಾರ, ನಿತ್ಯ ರಾಜ್ಯದಲ್ಲಿ ಸಾಮೂಹಿಕ ಕಲುಷಿತ ನೀರು ಶುದ್ಧೀಕರಣ ಘಟಕಗಳ ಸ್ಥಾವರಗಳು ನಿತ್ಯ 7,375 ಕೆಜಿ ಕಲುಷಿತ ನೀರನ್ನ ಸಂಸ್ಕರಣೆ ಮಾಡುವ ಸಾಮರ್ಥ್ಯ ಹೊಂದಿವೆ ಎಂದು ಉಲ್ಲೇಖಿಸಿತ್ತು. ಇನ್ನು ಕೆಲ ದೊಡ್ಡ ಪ್ರಮಾಣದ ಕೈಗಾರಿಕೆಗಳಲ್ಲಿ ಸಂಸ್ಕರಣಾ ಘಟಕ ಇವೆ. ಆದರೆ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಲ್ಲಿ ಸಂಸ್ಕರಣಾ ಘಟಕ ಇರುವುದಿಲ್ಲ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಗರದಲ್ಲಿ 50 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಕೈಗಾರಿಕಾ ಪ್ರದೇಶಗಳಾದ ಪೀಣ್ಯ, ರಾಜಾಜಿನಗರ, ಕುಂಬಳಗೋಡು ಪ್ರದೇಶಗಳ ಕಾರ್ಖಾನೆಗಳು ವೃಷಭಾವತಿ ನದಿಗೆ ವಿಷಕಾರಿ ಅಂಶಗಳನ್ನು ಬಿಡುತ್ತಲೇ ಬರುತ್ತಿವೆ. ಇದರಿಂದ ಪರಿಸರ ಹಾನಿ ಸಂಭವಿಸುತ್ತಿದ್ದು, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೆಟ್ಟ ವಾಸನೆ ಜೊತೆಗೆ ಆರೋಗ್ಯ ಸಮಸ್ಯೆ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ.
ಸಾಮಾನ್ಯವಾಗಿ ಲೋಹದ ಕೈಗಾರಿಕೆಗಳು, ಜವಳಿ, ಬಣ್ಣದ ಕಾರ್ಖಾನೆ, ಅಕ್ಕಿ ಮಿಲ್, ಮೀನು ಕಾರ್ಖಾನೆ ಸೇರಿದಂತೆ ಹಲವು ಕಾರ್ಖಾನೆಗಳು ವಿಷಕಾರಿ ನೀರನ್ನ ನದಿಗೆ ಬಿಡುತ್ತಿವೆ. ಆದರೆ, ತಡರಾತ್ರಿ ಅಥವಾ ಬೆಳಗಿನ ಜಾವ ವಿಷಕಾರಿ ನೀರು ನದಿಗೆ ಬಿಡುವ ಕೈಗಾರಿಕೆಗಳ ವಿರುದ್ಧ ಕ್ರಮ ಕೈಗೊಳ್ಳದೇ ಸುಮ್ಮನಿರುವ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಬಗ್ಗೆ ಪರಿಸರ ಹೋರಾಟಗಾರರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.