ಬೆಂಗಳೂರು: ಕಾಂಗ್ರೆಸ್ನ ಬಸ್ ಯಾತ್ರೆ ಬ್ರೇಕ್ ಫೇಲ್ ಆಗುತ್ತಿದ್ದರೆ, ಪಂಚರತ್ನ ಯಾತ್ರೆಗೆ ಹಾಸನದಲ್ಲಿ ಪಂಕ್ಚರ್ ಹಾಕುವ ಪ್ರಯತ್ನಗಳು ಆರಂಭಗೊಂಡಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ. ಮುಂದಿನ ದಿನಗಳಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪುತ್ರ ಮಾತ್ರವಲ್ಲ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮನೆಯಿಂದಲೂ ಜನರು ಬಿಜೆಪಿ ಕಡೆ ಬರಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಕಾಂಗ್ರೆಸ್ ಯುವ ಮುಖಂಡ ಕವೀಶ್‍ಗೌಡ ವಾಸು, ಜೆಡಿಎಸ್ ತಾಲೂಕು ಘಟಕದ ಮಾಜಿ ಅಧ್ಯಕ್ಷ ಸೋಮಶೇಖರ್, ಕಾಂಗ್ರೆಸ್ ಮಾಜಿ ಪದಾಧಿಕಾರಿ ವೆಂಕಟೇಶ್, ರೈತ ಸಂಘಟನೆ ಜಿಲ್ಲಾಧ್ಯಕ್ಷ ದಿವಾಕರ್ ಗೌಡ, ಕಾಂಗ್ರೆಸ್ ಮಾಜಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ವಿ. ರಾಜಪ್ಪ, ಜೆಡಿಎಸ್ ಪರಾಜಿತ ಅಭ್ಯರ್ಥಿ ಗಿರೀಶ್ ನಾಶಿ, ಪುಣ್ಯ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕಿ ಡಾ ಪುಣ್ಯವತಿ ನಾಗರಾಜ್ ಇಂದು ಬಿಜೆಪಿ ಸೇರಿದರು. ಕಾಂಗ್ರೆಸ್ ಮತ್ತು ಜೆಡಿಎಸ್ನಿಂದ ಬಂದ ಮುಖಂಡರು ಮತ್ತು ಬೆಂಬಲಿಗರನ್ನು ಪಕ್ಷದ ಶಾಲು ಹೊದಿಸಿ ಧ್ವಜ ನೀಡಿ ಬಿಜೆಪಿಗೆ ಬರಮಾಡಿಕೊಳ್ಳಲಾಯಿತು.
ನಂತರ ಮಾತನಾಡಿದ ಕಟೀಲ್, ಕಾಂಗ್ರೆಸ್ನ ಬಸ್ ಯಾತ್ರೆ, ಜೆಡಿಎಸ್ನ ಪಂಚರತ್ನ ಎರಡೂ ಯಾತ್ರೆಗಳು ಮುಂದಿನ ಚುನಾವಣೆವರೆಗೆ ಪೂರ್ತಿ ಆಗುವುದಿಲ್ಲ. ಆದರೆ, ಬಿಜೆಪಿ ಸಂಕಲ್ಪ ಯಾತ್ರೆ ವಿಜಯಿ ಯಾತ್ರೆಯಾಗಿ ಪರಿವರ್ತನೆ ಹೊಂದುತ್ತಿದೆ. ಬಿಜೆಪಿ ಮುಂದಿನ ಚುನಾವಣೆಯಲ್ಲಿ 150 ಸ್ಥಾನ ಗೆದ್ದೇಗೆಲ್ಲಲಿದೆ. ಈ ಬದಲಾವಣೆ ಕೇವಲ ವಾಸು ಅವರ ಮನೆಯಲ್ಲಿ ಆಗಿಲ್ಲ. ಒಬ್ಬ ಕಾಂಗ್ರೆಸ್ ಶಾಸಕನ ಮನೆಯಲ್ಲಿ ಅವರ ಮಗ ಬಿಜೆಪಿ ಸೇರಿದಂತೆ, ಮುಂದಿನ ದಿನದಲ್ಲಿ ಸಿದ್ರಾಮಣ್ಣನ ಮಗನೂ, ಡಿಕೆಶಿ ಮನೆಯಿಂದಲೂ ಬಿಜೆಪಿಗೆ ಬರುತ್ತಾರೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಮತ್ತೆ ಡಬಲ್ ಎಂಜಿನ್ ಸರ್ಕಾರ ಅಭಿವೃದ್ಧಿಯ ಕೆಲಸ ಮಾಡಲಿದೆ ಎಂದು ತಿಳಿಸಿದರು.
ಬಿಜೆಪಿ ಕೆಲಸ ಗುರುತಿಸಿ ಅವಕಾಶ ನೀಡುತ್ತೆ: ಬಿಜೆಪಿ ಕೆಲಸವನ್ನು ನೋಡುತ್ತದೆ. ಮನೆತನದ, ಕುಟುಂಬದ ಹಿನ್ನೆಲೆ ನೋಡುವುದಿಲ್ಲ. ಬಿಜೆಪಿ ಸಮಾಜದ ಜೊತೆಗಿನ ಒಡನಾಟ, ಸಿದ್ಧಾಂತದ ಮೇಲಿನ ನಂಬಿಕೆ, ಕೆಲಸಗಳನ್ನು ಗುರುತಿಸಿ ಅವಕಾಶ ಕೊಡುತ್ತದೆ. ಇದಕ್ಕೆ ಚಹಾ ಮಾರಾಟ ಮಾಡುತ್ತಿದ್ದ ಹುಡುಗ ಪ್ರಧಾನಿ ಆಗಿದ್ದು, ಭಿತ್ತಿಪತ್ರ ಹಂಚುವ ಹುಡುಗ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದು ಉದಾಹರಣೆ. ಕೋವಿಡ್ ಲಸಿಕೆ ಸಂಶೋಧನೆ ಆದ ಬಳಿಕ ಪ್ರಧಾನಿಯವರು ತಾವು ಮತ್ತು ಪಕ್ಷದವರಿಗೆ ಮೊದಲ ಆದ್ಯತೆ ಕೊಡಲಿಲ್ಲ. ಬದಲಾಗಿ ಆರೋಗ್ಯ ಕ್ಷೇತ್ರ, ಪೂರಕವಾಗಿ ಕೆಲಸ ಮಾಡುವವರಿಗೆ ಆದ್ಯತೆ ನೀಡಿದರು. ಒಂದು ವೇಳೆ ಕೋವಿಡ್ ಬಂದಾಗ ಕಾಂಗ್ರೆಸ್ ಆಡಳಿತದಲ್ಲಿ ಇದ್ದರೆ ಸೋನಿಯಾ, ರಾಹುಲ್, ಪ್ರಿಯಾಂಕಾ ಅವರಿಗೆ ಮೊದಲು ಲಸಿಕೆ ಕೊಡುತ್ತಿದ್ದರು ಎಂದು ಟೀಕಿಸಿದರು.
ಪ್ರಧಾನಿಯವರು ತಮ್ಮ ತಾಯಿ ನಿಧನರಾದಾಗ ದೆಹಲಿಯಿಂದ ಸಾಮಾನ್ಯ ಕಾರ್ಯಕರ್ತರಂತೆ ಬಂದು ಕೇವಲ ಮೂರು ಗಂಟೆಗಳಲ್ಲೇ ತಮ್ಮ ಕರ್ತವ್ಯಕ್ಕೆ ಹಿಂತಿರುಗಿದರು. ನರೇಂದ್ರ ಮೋದಿಯವರ ಈ ಆದರ್ಶವನ್ನು ಬಿಜೆಪಿ ಸದಾ ಪಾಲಿಸುತ್ತಿದೆ. ಇಡೀ ದೇಶ ಮತ್ತು ರಾಜ್ಯದಲ್ಲಿ ಇಂದು ರಾಜಕೀಯ ಪರಿವರ್ತನೆ ಆಗುತ್ತಿದೆ. ಚುನಾವಣೆ ಹತ್ತಿರ ಬರುತ್ತಿದ್ದು, ರಾಜ್ಯದ ರಾಜಕೀಯ ತಿರುವನ್ನು ಪಡೆದಿದೆ. 5 ವರ್ಷಗಳ ಹಿಂದೆ ರಾಜ್ಯದ ಜನರು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷವನ್ನು ತಿರಸ್ಕರಿಸಿದ್ದರು. ಜನರು ಮತದಾನದ ಮೂಲಕ ಬಿಜೆಪಿಗೆ ಅತಿ ಹೆಚ್ಚಿನ ಗೌರವ ಕೊಟ್ಟಿದ್ದರು.