ಬೆಂಗಳೂರು :ನಾಡಿನ ಹೆಮ್ಮೆಯ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಇಂದು ಸಂಜೆ ನನಗಾಗಿ ಪರಿಷತ್ತಿನಲ್ಲಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಆದರೇ, ಅನಾರೋಗ್ಯದ ಕಾರಣದಿಂದ ಸಮಾರಂಭಕ್ಕೆ ಹಾಜರಾಗುತ್ತಿಲ್ಲದಿರುವುದಕ್ಕೆ ವೈಯಕ್ತಿಕವಾಗಿ ನನಗೆ ಬಹಳ ನೋವಿದೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಹೇಳಿದ್ದಾರೆ.
ಈ ಕುರಿತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕೊಂಚ ಮಟ್ಟಿಗೆ ಅನಾರೋಗ್ಯ ಉಂಟಾಗಿ ದೇಹದಲ್ಲಿ ತುಸು ನಿತ್ರಾಣವಿದೆ. ವೈದ್ಯರು ಮನೆಯಲ್ಲಿಯೇ ವಿಶ್ರಾಂತಿ ಪಡೆಯುವಂತೆ ಸಲಹೆ ಮಾಡಿದ್ದಾರೆ. ಆದರೆ, ಈ ಕಾರ್ಯಕ್ರಮ ಪೂರ್ವನಿಗದಿಯಾಗಿರುವ ಕಾರಣಕ್ಕೆ ಸರ್ವೋಚ್ಚ ನ್ಯಾಯಾಲಯದ ವಿಶ್ರಾಂತ ಮುಖ್ಯ ನ್ಯಾಯಮೂರ್ತಿ ಜಸ್ಟೀಸ್ ಎಂ.ಎನ್. ವೆಂಕಟಾಚಲಯ್ಯ ಅವರು ಹಾಗೂ ಪರಿಷತ್ ಅಧ್ಯಕ್ಷರು, ನಾಡೋಜ ಡಾ. ಮಹೇಶ್ ಜೋಶಿ ಅವರು ನನ್ನ ಸ್ವಗೃಹಕ್ಕೆ ಆಗಮಿಸಿ ಪ್ರಶಸ್ತಿ ಪ್ರದಾನ ಮಾಡುವುದಾಗಿ ತಿಳಿಸಿದ್ದಾರೆ.
ಇವರ ಪ್ರೀತಿ, ವಿಶ್ವಾಸಕ್ಕೆ ನಾನು ಕೃತಜ್ಞನಾಗಿದ್ದೇನೆ. ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರಿನ ಪ್ರಶಸ್ತಿ ಸ್ವೀಕರಿಸುವುದು ಮಹಾನ್ ಭಾಗ್ಯ ಎಂದೇ ನಾನು ಭಾವಿಸಿದ್ದೇನೆ ಎಂದಿದ್ದಾರೆ.