ಬೆಂಗಳೂರು :ಉತ್ತರ ಭಾರತದ ವಿವಿಧ ರಾಜ್ಯಗಳಿಗೆ ತೆರಳಲು ಸಾಕಷ್ಟು ಸಂಖ್ಯೆಯ ಪ್ರಯಾಣಿಕರು ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಮುಂಭಾಗ ಸಾಲಲ್ಲಿ ನಿಂತಿದ್ದಾರೆ.
ಮಂಗಳವಾರ ರಾತ್ರಿಯಿಂದ ಜಾರಿಗೆ ಬಂದಿರುವ ಜನತಾ ಕರ್ಪ್ಯೂ (ಲಾಕ್ಡೌನ್) ನಂತರ ರೈಲು ಹೊರತುಪಡಿಸಿ ಬೇರೆಲ್ಲಾ ಸಂಚಾರ ಮೂಲಗಳು ಬಂದಾಗಿದ್ದು, ಕಳೆದ ನಾಲ್ಕೈದು ದಿನಗಳಿಂದ ಸಾಕಷ್ಟು ಪ್ರಯಾಣಿಕರು ಹಂತ ಹಂತವಾಗಿ ತಮ್ಮ ಊರಿನತ್ತ ತೆರಳುತ್ತಿದ್ದಾರೆ.
ಆದರೆ, ಇಂದು ಭಾರಿ ಸಂಖ್ಯೆಯಲ್ಲಿ ಪ್ರಯಾಣಿಕರು ರೈಲು ನಿಲ್ದಾಣದ ಆಗಮಿಸಿದ್ದಾರೆ. 11.30, ಮಧ್ಯಾಹ್ನ 1.30, ಸಂಜೆ 7:30, 8 ಹಾಗೂ 9 ಗಂಟೆಗೆ ತಲಾ ಒಂದೊಂದು ರೈಲುಗಳು ಪ್ರಯಾಣ ಬೆಳೆಸಲಿವೆ. 1.30 ರೈಲು ಪ್ರಶಾಂತಿ ಎಕ್ಸ್ ಪ್ರೆಸ್ ಆಗಿದ್ದು ಆಂಧ್ರಪ್ರದೇಶದ ಮೂಲಕ ತೆರಳಲಿದೆ.
ಸಂಜೆ ದಿಲ್ಲಿಗೆ ತೆರಳುವ ಒಂದು ರೈಲು ಸಹ ಇದೆ. ಉತ್ತರ ಭಾರತದ ಬಿಹಾರ, ಮಧ್ಯಪ್ರದೇಶ, ಉತ್ತರಪ್ರದೇಶ, ಛತ್ತೀಸ್‌ಗಢ, ದಿಲ್ಲಿ ಮತ್ತಿತರ ರಾಜ್ಯಗಳಿಗೆ ತೆರಳಲು ನೂರಾರು ಪ್ರಯಾಣಿಕರು ತಮ್ಮ ಲಗೇಜ್ ಸಮೇತ ರೈಲ್ವೆ ನಿಲ್ದಾಣ ಹೊರಭಾಗ ಸಾಲಲ್ಲಿ ನಿಂತಿದ್ದಾರೆ.
ಕೋವಿಡ್ ನಿಯಮಾವಳಿಗಳು ಹಾಗೂ ರೈಲ್ವೆ ಇಲಾಖೆಯ ನಿಯಮಗಳ ಪ್ರಕಾರ ರೈಲು ತೆರಳುವ ಮುನ್ನ ಪ್ರಯಾಣಿಕರನ್ನು ಅಥವಾ ರೈಲು ನಿಲ್ದಾಣದ ಆವರಣದ ಒಳಗೆ ಬಿಟ್ಟುಕೊಳ್ಳುವಂತಿಲ್ಲ. ಈ ಹಿನ್ನೆಲೆ ನೈರುತ್ಯ ರೈಲ್ವೆಯ ಬೆಂಗಳೂರು ಮಹಾನಗರದ ಪ್ರಮುಖ ರೈಲು ನಿಲ್ದಾಣವಾಗಿರುವ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಹೊರ ಭಾಗದಲ್ಲಿ ಪ್ರಯಾಣಿಕರನ್ನು ಸರತಿಯಲ್ಲಿ ನಿಲ್ಲಿಸಲಾಗಿದೆ.