ಬೆಂಗಳೂರು:ರಾಜ್ಯದ ಯಾವ ಸೋಂಕಿತರೂ ಕೂಡಾ ವೆಂಟಿಲೇಟರ್‌ನಲ್ಲಿ ಇಲ್ಲ. ಇಬ್ಬರು ಮಾತ್ರ ಆಕ್ಸಿಜನ್ ತೆಗೆದುಕೊಳ್ಳುತ್ತಿದ್ದಾರೆ ಎಂದು ಸಿಎಂ ಸ್ಪಷ್ಟಪಡಿಸಿದರು.
ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.
ವಿಧಾನಸೌಧದಲ್ಲಿ ಮಾತನಾಡಿದ ಸಿಎಂ 'ಮತ್ತಷ್ಟು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ನಿರ್ಧಾರ'
ಮನೆ ಬಿಟ್ಟು ಯಾರೂ ಹೊರಗೆ ಬರಬಾರದು. ಮತ್ತಷ್ಟು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ನಿರ್ಧಾರ ಕೈಗೊಳ್ಳಲಾಗಿದೆ. ಕೋವಿಡ್-19 ತಡೆಗಟ್ಟಲು ತೆಗೆದುಕೊಂಡ ಕ್ರಮದ ಕುರಿತು ಶಾಸಕರ ಜೊತೆ ಚರ್ಚಿಸಲಾಗಿದೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕೆಂದು ಮನವಿ ಮಾಡಿದ್ದು, ಎಲ್ಲರೂ ಸಹಕಾರ ವ್ಯಕ್ತಪಡಿಸುವುದಾಗಿ ಸೂಚಿಸಿದ್ದಾರೆ ಎಂದು ತಿಳಿಸಿದರು.
ಪಿಪಿಇ ಮತ್ತು ಎನ್95 ಮಾಸ್ಕ್‌ಗಳಿಗೆ ಕೊರತೆ ಇಲ್ಲ:
ಒಟ್ಟು 9.80 ಲಕ್ಷ ಪಿಪಿಇಗೆ (ವೈಯಕ್ತಿಕ ಸುರಕ್ಷತಾ ಸಾಧನ) ಆರ್ಡರ್ ಮಾಡಲಾಗಿದೆ. ಈ ಪೈಕಿ 1.43 ಲಕ್ಷ ಸರಬರಾಜು ಆಗಿದೆ. ಇವತ್ತು 20 ಸಾವಿರ ಪಿಪಿಇ ಪೂರೈಕೆ ಆಗಿದೆ. ಉಳಿದ 1.23 ಲಕ್ಷ ಪಿಪಿಇ ಮುಂದಿನ ವಾರ ಬರುತ್ತದೆ ಎಂದು ಇದೇ ವೇಳೆ ತಿಳಿಸಿದರು. ಪಿಪಿಇಗೆ ಯಾವುದೇ ಕೊರತೆ ಇಲ್ಲ. N 95 ಮಾಸ್ಕ್‌ಗಳಿಗೂ ಕೊರತೆಯಿಲ್ಲ ಎಂದರು.
'ಚೆಕ್‌ಪೋಸ್ಟ್‌ನಲ್ಲಿ ಜನರ ಸುಲಿಗೆ ಸಹಿಸಲ್ಲ'
ಚೆಕ್‌ಪೋಸ್ಟ್‌ಗಳಲ್ಲಿ ಆರ್ಟಿಒ ಅಧಿಕಾರಿಗಳು ಹಣ ತೆಗೆದುಕೊಳ್ತಿದ್ದಾರೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಸಿಎಂ, ಇಂಥ ಸಂದರ್ಭದಲ್ಲಿ ಜನರನ್ನು ಸುಲಿಗೆ ಮಾಡೋದನ್ನು ಸಹಿಸಲ್ಲ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇಂದಿರಾ ಕ್ಯಾಂಟೀನ್ ಉಚಿತ ಆಹಾರ ದುರ್ಬಳಕೆ ಮಾಡಲಾಗುತ್ತಿದೆ. ಹಾಗಾಗಿ ಆಹಾರಕ್ಕೆ ಹಣ ನೀಡುವಂತೆ ನಿರ್ಧರಿಸಲಾಗಿದೆ. ಮುಂದೆ ಪರಿಸ್ಥಿತಿ ನೋಡಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಸರಳ ಕರಗಕ್ಕೆ ಅನುಮತಿ:
ಬೆಂಗಳೂರು ಕರಗವನ್ನು ನಾಲ್ಕು ಐದು ಜನ ಸೇರಿ ಸರಳವಾಗಿ ಮಾಡಲು ಸೂಚನೆ ನೀಡಲಾಗಿದೆ ಎಂದು ಇದೇ ವೇಳೆ ಸಿಎಂ ಸ್ಪಷ್ಟಪಡಿಸಿದರು.