ಬೆಂಗಳೂರು:ನಮ್ಮ ಶಾಸಕರು ಯಾರೂ ಬಿಜೆಪಿ ಪಕ್ಷ ಬಿಟ್ಟು ಬೇರೆ ಪಕ್ಷಕ್ಕೆ ಹೋಗುವುದಿಲ್ಲ. ಇಲ್ಲೇ ಇದ್ದು ಕೆಲಸ ಮಾಡ್ತೀವಿ ಅಂತ ಸಂತೋಷದಿಂದ ಒಪ್ಪಿಕೊಂಡಿದ್ದಾರೆ ಎಂದು ಮಾಜಿ ಸಿಎಂ ಯಡಿಯೂರಪ್ಪ ತಿಳಿಸಿದರು.
ಕಾವೇರಿ ನಿವಾಸದ ಬಳಿ, ಅಸಮಾಧಾನಿತರ ಜತೆ ಯಡಿಯೂರಪ್ಪ ಸಂಧಾನ ಮಾತುಕತೆ ವಿಚಾರವಾಗಿ ಪ್ರತಿಕ್ರಿಯಿಸಿ, ಸಚಿವ ನಾರಾಯಣ ಗೌಡರು, ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರ ಜತೆಗೂ ಮಾತಾಡಿದ್ದೇನೆ. ಯಾರೂ ಬಿಜೆಪಿ ಬಿಟ್ಟು ಹೋಗಲ್ಲ. ಸಂತೋಷವಾಗಿ ಬಿಜೆಪಿಯಲ್ಲೇ ಇದ್ದು ಕೆಲಸ ಮಾಡೋದಾಗಿ ಹೇಳಿದ್ದಾರೆ ಎಂದರು.
ಬಿಜೆಪಿಯಿಂದ ಕೆಲವರು ಕಾಂಗ್ರೆಸ್ ಕಡೆ ಮುಖ ಮಾಡುತ್ತಿರುವ ವಿಚಾರವಾಗಿ ರಾಜ್ಯ ಬಿಜೆಪಿ ನಾಯಕರ ಮೇಲೆ ಹೈಕಮಾಂಡ್ ಅಸಮಾಧಾನಗೊಂಡಿದೆ ಎನ್ನಲಾಗುತ್ತಿದೆ. ಬಾಬುರಾವ್ ಚಿಂಚನಸೂರ್ ಸೇರಿ ಕೆಲವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗಿದ್ದು, ಇನ್ನೂ ಕೆಲವರು ಬಿಜೆಪಿಗೆ ತ್ಯಜಿಸಲಿದ್ದಾರೆ ಎಂಬ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ಹೈಕಮಾಂಡ್, ಅಸಮಾಧಾನಿತರನ್ನು ಕರೆದು ಮಾತನಾಡಿ ಪಕ್ಷದಲ್ಲಿ ಉಳಿಸಿಕೊಳ್ಳುವಂತೆ ರಾಜ್ಯ ನಾಯಕರಿಗೆ ಹೈಕಮಾಂಡ್ ಸೂಚಿಸಿದೆ ಎಂದು ಹೇಳಲಾಗಿದೆ.
ಇತ್ತೀಚೆಗೆ ವಸತಿ ಸಚಿವ ವಿ.ಸೋಮಣ್ಣ ಅವರೂ ಕೂಡ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಳ್ಳದೆ ಪಕ್ಷದ ಜೊತೆ ಅಂತರ ಕಾಪಾಡಿಕೊಂಡಿದ್ದರು. ಸೋಮಣ್ಣ ಬಿಜೆಪಿ ಬಿಟ್ಟು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಳ್ಳುತ್ತಾರೆ ಎನ್ನುವ ಮಾತುಗಳೂ ರಾಜಕೀಯ ವಲಯದಲ್ಲಿ ಬಿಸಿ ಬಿಸಿ ಚರ್ಚೆಯಾಗಿತ್ತು. ಆದರೆ ನಂತರದಲ್ಲಿ ಹೈಕಮಾಂಡ್ ಭೇಟಿಯಾಗಿ ಬಂದ ಸೋಮಣ್ಣ ಎಲ್ಲದಕ್ಕೂ ಸ್ಪಷ್ಟನೆ ನೀಡಿ, ಪಕ್ಷವನ್ನು ಬಿಟ್ಟು ಹೋಗುವುದಿಲ್ಲ ಎಂದು ಹೇಳಿದ್ದರು.
ಮುಧೋಳದಲ್ಲಿ ನಿನ್ನೆ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಮಾತನಾಡಿದ ವೇಳೆ ನಾನು ಮತ್ತೆ ಮುಖ್ಯಮಂತ್ರಿಯಾಗಿ ಬರುತ್ತೇನೆ ಎಂದಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಇದರಲ್ಲಿ ತಪ್ಪೇನಿದೆ. ಬೊಮ್ಮಾಯಿ ಒಳ್ಳೆ ಕೆಲಸ ಮಾಡಿದ್ದಾರೆ. ಮತ್ತೊಮ್ಮೆ ಮುಖ್ಯಮಂತ್ರಿ ಆಗ್ತೀನಿ ಅಂತ ಹೇಳಿರೋದ್ರಲ್ಲಿ ತಪ್ಪಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರ ಹೇಳಿಕೆಯನ್ನು ಸ್ವಾಗತಿಸುತ್ತೇನೆ ಎಂದು ಬೆಂಬಲ ಸೂಚಿಸಿದರು.
ಸಿದ್ದರಾಮಯ್ಯ ಕ್ಷೇತ್ರ ಗೊಂದಲದ ಕುರಿತು ಮಾತನಾಡಿದ ಯಡಿಯೂರಪ್ಪ, ಸಿದ್ದರಾಮಯ್ಯ ಅವರಿಗೆ ಮುಂದಿನ ವಿಧಾನಸಭಾ ಚುನಾವಣೆಗೆ ಕ್ಷೇತ್ರ ಆಯ್ಕೆ ಮಾಡುವುದು ಗೊಂದಲ ಆಗ್ತಿಲ್ಲ. ಕೇವಲ ಈ ಥರ ಹೇಳ್ಕೊಂಡು ಪ್ರಚಾರ ತಗೋತಿದ್ದಾರೆ. ಸುಮ್ನೆ ಜನರ ಮಧ್ಯೆ ನಾನು ಅಲ್ಲಿ ಇಲ್ಲಿ ನಿಲ್ತೀನಿ, ಎಲ್ಲಿ ಬೇಕಾದ್ರೂ ನಿಂತು ಗೆಲ್ತೀನಿ ಅಂತ ವಾತಾವರಣ ಸೃಷ್ಟಿ ಮಾಡಲು ಹೊರಟಿದ್ದಾರೆ. ಇದರಿಂದೇನು ಪ್ರಯೋಜನ ಅಂತ ನಮಗೇನೂ ಅರ್ಥ ಆಗಲ್ವಾ.?. ಇದಕ್ಕೆಲ್ಲ ಉತ್ತರ ಕೊಡುವ ಅಗತ್ಯ ಇಲ್ಲ. ಸಿದ್ದರಾಮಯ್ಯ ಎಲ್ಲಿ ನಿಂತ್ಕೋಬೇಕು ಅಂತ ಕಾಂಗ್ರೆಸ್ ಪಕ್ಷ ನೋಡಿಕೊಳ್ಳುತ್ತದೆ ಎಂದರು.
ಇದನ್ನೂ ಓದಿ:'ನಾನು ಮತ್ತೆ ಸಿಎಂ ಆಗಿ ಕ್ಷೇತ್ರಕ್ಕೆ ಬರುತ್ತೇನೆ': ಮುಧೋಳದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ