ಬೆಂಗಳೂರು: ಬಾಲ್ಯದಿಂದಲೂ ಸಿನಿಮಾ, ಕ್ರಿಕೆಟ್, ಶ್ವಾನ ಎಂದರೆ ಬಸವರಾಜ ಬೊಮ್ಮಾಯಿ ಅವರಿಗೆ ಎಲ್ಲಿಲ್ಲದ ಪ್ರೀತಿ, ಮುಖ್ಯಮಂತ್ರಿ ಸ್ಥಾನಕ್ಕೆ ಬಂದ ನಂತರವೂ ಈ ಪ್ರೀತಿ ಬದಲಾಗಿಲ್ಲ. ಶ್ವಾನದೊಂದಿಗಿನ ಒಡನಾಟ, ಸಿನಿಮಾ, ಕ್ರಿಕೆಟ್ ವೀಕ್ಷಣೆ ಬಿಟ್ಟಿಲ್ಲ. ಬಿಡುವಿಲ್ಲದ ರಾಜಕೀಯ ಒತ್ತಡದ ನಡುವೆಯೂ ತಮ್ಮ ಖಾಸಗಿ ಬದುಕನ್ನು ಇವರು ಕಡೆಗಣಿಸಿಲ್ಲ.
ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ವರ್ಷ ಪೂರ್ಣಗೊಳಿಸುತ್ತಿದ್ದಾರೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಉಪ ಚುನಾವಣೆ, ಪರಿಷತ್ ಚುನಾವಣೆಯಂತಹ ಸವಾಲುಗಳ ನಡುವೆಯೂ ಖಾಸಗಿ ಬದುಕನ್ನು ಕಡೆಗಣಿಸಿಲ್ಲ. ರಾಜಕೀಯವೇ ಬೇರೆ, ಖಾಸಗಿ ಬದುಕೇ ಬೇರೆ ಎಂದು ಪ್ರತ್ಯೇಕಿಸಿಕೊಂಡಿದ್ದಾರೆ. ಅದಕ್ಕಾಗಿಯೇ ಖಾಸಗಿ ನಿವಾಸದಲ್ಲೇ ಕುಟುಂಬ ವಾಸ್ತವ್ಯ ಹೂಡಿದ್ದು, ರಾಜಕೀಯ ಚಟುವಟಿಕೆ ಬಹುತೇಕ ಅಧಿಕೃತ ಸರ್ಕಾರಿ ನಿವಾಸದಲ್ಲೇ ನಡೆಸುತ್ತಿದ್ದಾರೆ.
ಪ್ರೀತಿಯ ಸ್ವಾನ ಸತ್ತಾಗ ದುಃಖಗೊಂಡಿದ್ದ ಸಿಎಂ ಬೊಮ್ಮಾಯಿ ಶ್ವಾನ ಪ್ರೀತಿ:ಬಸವರಾಜ ಬೊಮ್ಮಾಯಿ ಅವರಿಗೆ ಶ್ವಾನದ ಮೇಲಿನ ಪ್ರೀತಿ ಎಷ್ಟು ಎನ್ನುವುದು ಅವರ ಪ್ರೀತಿಯ ಸನ್ನಿ ಹೆಸರಿನ ಸಾಕು ನಾಯಿ ಮೃತಪಟ್ಟಾಗ ಇಡೀ ರಾಜ್ಯಕ್ಕೆ ಗೊತ್ತಾಗಿದೆ. ಮುಖ್ಯಮಂತ್ರಿಯಾಗುವ ಕೆಲವೇ ದಿನಗಳ ಮೊದಲು 2021ರ ಜುಲೈ 12 ರಂದು ಅವರ ಸಾಕು ನಾಯಿ ಸನ್ನಿ ಮೃತಪಟ್ಟಿದ್ದಕ್ಕೆ ಇಡೀ ಬೊಮ್ಮಾಯಿ ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯಿತು.
ಮೃತ ಶ್ವಾನವನ್ನ ಅಪ್ಪಿ, ತಬ್ಬಿ ಮುದ್ದಾಡಿ ಅಂತ್ಯ ಸಂಸ್ಕಾರ ನಡೆಸಿದ್ದರು. ಅಷ್ಟು ಮಾತ್ರವಲ್ಲದೇ ಇಂದು ನಮ್ಮ ಮನೆಯ ಮುದ್ದಿನ ನಾಯಿ ಸನ್ನಿ ವಯೋಸಹಜದಿಂದ ಸಾವನ್ನಪ್ಪಿದ್ದು, ತೀವ್ರ ದುಃಖ ತರಿಸಿತ್ತು. ಕುಟುಂಬದ ಓರ್ವ ಸದಸ್ಯನನ್ನು ಕಳೆದುಕೊಂಡ ಅನುಭವ ಸಿಎಂಗೆ ಆಗಿತ್ತು. ಮನೆಯ ಹಾಗು ಮನೆಗೆ ಬರುವ ಎಲ್ಲರೊಂದಿಗೆ ಅತ್ಯಂತ ಪ್ರೀತಿಯಿಂದ ಬೆರೆಯುತ್ತಿತ್ತು. ಹೀಗಾಗಿ ಅವರು ಅದನ್ನು ಭಾರಿ ಹಚ್ಚಿಕೊಂಡಿದ್ದರು.
ಪ್ರೀತಿಯ ಸ್ವಾನ ಸತ್ತಾಗ ದುಃಖಗೊಂಡಿದ್ದ ಸಿಎಂ ಬೊಮ್ಮಾಯಿ ಶ್ವಾನ ಪ್ರೇಮಿಯಾಗಿರುವ ಸಿಎಂ ತಮ್ಮ ಸಹೋದ್ಯೋಗಿಗಳೊಂದಿಗೆ 777 ಚಾರ್ಲಿ ಸಿನಿಮಾ ವೀಕ್ಷಣೆ ಮಾಡಿದ್ದರು. ಒರಾಯನ್ ಮಾಲ್ ನಲ್ಲಿ ಸಚಿವರಾದ ಆರ್.ಅಶೋಕ್, ಬಿ ಸಿ ನಾಗೇಶ್, ಶಾಸಕ ರಘುಪತಿ ಜೊತೆ ಸಿನಿಮಾ ವೀಕ್ಷಿಸಿ ಭಾವುಕರಾಗಿದ್ದರು. ಚಾರ್ಲಿ ಸಿನಿಮಾದ ಕೊನೆಯಲ್ಲಿ ಶ್ವಾನ ಸಾವನ್ನಪ್ಪುತ್ತದೆ. ಆ ಸನ್ನಿವೇಶ ನೆನಪಿಸಿಕೊಂಡು ಗಳಗಳನೆ ಅತ್ತುಬಿಟ್ಟಿದ್ದರು.
ಮಾಧ್ಯಮಗಳಿಗೆ ಹೇಳಿಕೆ ನೀಡುವಾಗಲೂ ಕಣ್ಣೀರು ಹಾಕಿದ್ದರು. ಅಷ್ಟೊಂದು ಪ್ರೀತಿ ಶ್ವಾನಗಳ ಮೇಲಿದೆ. ಚಾರ್ಲಿ ಸಿನಿಮಾ ವೀಕ್ಷಣೆ ಮಾಡುವಂತೆ ಮಕ್ಕಳಿಗೆ ಕರೆ ನೀಡಿದ್ದ ಸಿಎಂ, ಚಾರ್ಲಿಗೆ ಆರು ತಿಂಗಳ ತೆರಿಗೆ ವಿನಾಯಿತಿ ಘೋಷಿಸಿದ್ದರು. ಇದು ಸಿಎಂ ಬೊಮ್ಮಾಯಿಗೆ ಶ್ವಾನದ ಮೇಲಿರುವ ಪ್ರೀತಿಗೆ ನಿದರ್ಶನ.
ಕ್ರಿಕೆಟ್ ಪ್ರೇಮಿ: ಇನ್ನು ಶಾಲಾ ಹಂತದಿಂದಲೇ ಬೊಮ್ಮಾಯಿ ಅವರಿಗೆ ಕ್ರಿಕೆಟ್ ಮೇಲೆ ಎಲ್ಲಿಲ್ಲದ ಪ್ರೀತಿ. ಕ್ರಿಕೆಟ್ ಬಿಟ್ಟರೆ ಗಾಲ್ಫ್ ಆಟದ ಮೇಲೆ ಆಸಕ್ತಿ ಹೊಂದಿದ್ದಾರೆ. ಈಗಲೇ ಸಿಎಂ ಬಸವರಾಜ ಬೊಮ್ಮಾಯಿ ಸಮಯವಿದ್ದಾಗ, ರಾಜಕೀಯ ಜಂಜಾಟ ಇಲ್ಲದಾಗ ಕ್ರಿಕೆಟ್ ವೀಕ್ಷಣೆ ಮಾಡುತ್ತಿರುತ್ತಾರೆ. 1983ರ ಭಾರತದ ಏಕದಿನ ಕ್ರಿಕೆಟ್ ವಿಶ್ವಕಪ್ ಗೆಲುವನ್ನು ಆಧರಿಸಿ ನಿರ್ಮಿಸಲಾದ 83 ಸಿನಿಮಾವನ್ನು ಸಿಎಂ ವೀಕ್ಷಿಸಿದ್ದರು.
ಕೋರಮಂಗಲದ ಫೋರಂ ಮಾಲ್ ನಲ್ಲಿನ ಪಿವಿಆರ್ ಚಿತ್ರಮಂದಿರದಲ್ಲಿ ಮಾಜಿ ಕ್ರಿಕೆಟಿಗ ಸೈಯದ್ ಕಿರ್ಮಾನಿ, ಅಶೋಕ್ ಜೊತೆಯಲ್ಲಿ 2021ರ ಡಿಸೆಂಬರ್ 27 ರಂದು ಚಿತ್ರ ವೀಕ್ಷಣೆ ಮಾಡಿದ್ದರು. ಇದು ಅವರ ಸಿನಿಮಾ ಪ್ರೀತಿ, ಕ್ರಿಕೆಟ್ ಮೇಲಿನ ವ್ಯಾಮೋಹಕ್ಕೆ ನಿದರ್ಶನವಾಗಿದೆ. ಒಂದು ಬಾರಿ ಧಾರವಾಡದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘದ ಅಧ್ಯಕ್ಷರಾಗಿದ್ದರು ಎನ್ನುವುದು ಅವರ ಕ್ರಿಕೆಟ್ ಆಸಕ್ತಿಗೆ ಹಿಡಿದ ಕೈಗನ್ನಡಿಯಾಗಿದೆ.
ಇಂದು ಸಿಎಂ ಅಂದು 'ಟಾಟಾ' ಉದ್ಯೋಗಿ: ರಾಜಕೀಯ ಹಿನ್ನಲೆಯಿಂದ ಬಂದಿದ್ದರೂ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮಾಡಿದ್ದ ಬಸವರಾಜ ಬೊಮ್ಮಾಯಿ ಆರಂಭದಲ್ಲಿ ಟಾಟಾ ಕಂಪನಿಯಲ್ಲಿ ಕೆಲಸ ಮಾಡಿದ್ದರು ಎನ್ನುವುದು ಬಹುತೇಕರಿಗೆ ಗೊತ್ತೇ ಇಲ್ಲದ ವಿಷಯವಾಗಿದೆ. ಜನತಾ ಪರಿವಾರದ ಹಿರಿಯ ನಾಯಕ ಎಸ್.ಆರ್.ಬೊಮ್ಮಾಯಿ ಪುತ್ರರಾಗಿದ್ದ ಬಸವರಾಜ ಬೊಮ್ಮಾಯಿ ವಿದ್ಯಾರ್ಥಿ ಜೀವನ ಮುಗಿಸಿ ಉದ್ಯಮಿಯಾಗುವ ಮೊದಲು ಟಾಟಾ ಮೋಟಾರ್ಸ್ ನಲ್ಲಿ ಮೂರು ವರ್ಷ ಮೆಕ್ಯಾನಿಕಲ್ ಎಂಜಿನಿಯರ್ ಆಗಿ ಕೆಲಸ ಮಾಡಿದ್ದರು.
ಸಹಕಾರಿ ಕ್ಷೇತ್ರದ ನಂಟು: ರಾಜಕೀಯಕ್ಕೂ ಮೊದಲ ಸಹಕಾರಿ ಕ್ಷೇತ್ರದತ್ತ ಬಸವರಾಜ ಬೊಮ್ಮಾಯಿ ಒಲವು ಹೊಂದಿದ್ದರು. ಕೆಲ ಕಾಲ ಸಹಕಾರಿ ಕ್ಷೇತ್ರದಲ್ಲೂ ಕೆಲಸ ಮಾಡಿದ್ದಾರೆ. ಅರುಣೋದಯ ಕೋ-ಆಪರೇಟಿವ್ ಸೊಸೈಟಿಯ ಸ್ಥಾಪಕರಾಗಿದ್ದರು.
ಕುಟುಂಬಕ್ಕೆ ಆದ್ಯತೆ:ಬೊಮ್ಮಾಯಿ ಅವರಿಗೆ ಪತ್ನಿ ಚನ್ನಮ್ಮ, ಓರ್ವ ಪುತ್ರ, ಓರ್ವ ಪುತ್ರಿ ಇದ್ದು, ಕುಟುಂಬದೊಂದಿಗೆ ಆರ್.ಟಿ ನಗರದ ಖಾಸಗಿ ನಿವಾಸದಲ್ಲೇ ವಾಸವಾಗಿದ್ದಾರೆ. ಮುಖ್ಯಮಂತ್ರಿಯಾದರೂ ಕುಟುಂಬ ಸರ್ಕಾರಿ ನಿವಾಸಕ್ಕೆ ಬಾರದೇ ಖಾಸಗಿ ನಿವಾಸದಲ್ಲೇ ಇದೆ. ಸಿಎಂ ಬೊಮ್ಮಾಯಿ ಕೂಡ ರಾಜಕೀಯ ಕೆಲಸ ಕಾರ್ಯ ಮುಗಿಸಿಕೊಂಡು ಖಾಸಗಿ ನಿವಾಸದಲ್ಲಿ ಕುಟುಂಬದೊಂದಿಗೆ ವಾಸ್ತವ್ಯ ಹೂಡುತ್ತಿದ್ದಾರೆ. ಕುಟುಂಬಕ್ಕೆ ಕೊಡಬೇಕಾದ ಸಮಯವನ್ನು ಕೊಡುತ್ತಿದ್ದಾರೆ. ಕುಟುಂಬದ ಜೊತೆ ಆಗಾಗ ಪ್ರವಾಸವನ್ನೂ ಕೈಗೊಳ್ಳುತ್ತಿರುತ್ತಾರೆ. ಇತ್ತೀಚೆಗೆ ವಾರಣಾಸಿಗೆ ಭೇಟಿ ನೀಡಿ ಬಂದಿದ್ದರು.
ಶಾಪಿಂಗ್ ಹವ್ಯಾಸ: ಯಾವುದಾದರೂ ಮೇಳಗಳ ಉದ್ಘಾಟನೆ, ವೀಕ್ಷಣೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೆರಳಿದರು ಎಂದರೆ ಅಲ್ಲಿ ಶಾಪಿಂಗ್ ಕನ್ಫರ್ಮ್ ಆಗಿರುತ್ತೆ, ತಮ್ಮ ಪತ್ನಿಗೆ ಸೀರೆಗಳ ಖರೀದಿ ಮಾಡುವುದನ್ನು ಸಿಎಂ ಮರೆಯುವುದಿಲ್ಲ, ಅದರಲ್ಲೂ ರೇಷ್ಮೆ ಸೀರೆಗಳ ಖರೀದ ಮಾಡಿ ಪತ್ನಿಗೆ ಉಡುಗೊರೆಯಾಗಿ ಕೊಡುತ್ತಿರುತ್ತಾರೆ.
ಇದನ್ನೂ ಓದಿ:12ಕ್ಕೂ ಹೆಚ್ಚು ಬಿಜೆಪಿ ಶಾಸಕರು ಕಾಂಗ್ರೆಸ್ ಸೇರಲಿದ್ದಾರೆ: ತ್ರಿಪುರಾ ಕಾಂಗ್ರೆಸ್ ಮುಖ್ಯಸ್ಥರ ಹೇಳಿಕೆ