ಬೆಂಗಳೂರು :ಲಾಕ್ಡೌನ್ನಿಂದ ಸಿಲಿಕಾನ್ ಸಿಟಿಯಲ್ಲಿರುವ ಕಟ್ಟಡ, ಕೂಲಿ ಕಾರ್ಮಿಕರು, ದಿನಗೂಲಿ ನೌಕರರು, ಮಂಗಳಮುಖಿಯರು ನಿರಾಶ್ರಿತರಾಗಿದ್ದಾರೆ. ಸರ್ಕಾರ ಒಂದೆಡೆ ಕಾರ್ಮಿಕ ಇಲಾಖೆಯಿಂದ ಆಹಾರ ಕಿಟ್ಗಳನ್ನು ಒದಗಿಸುತ್ತಿವೆ. ಇದರ ಜೊತೆಗೆ ನಗರದ ಸ್ವಯಂಸೇವಾ ಸಂಸ್ಥೆಗಳು, ಶ್ರೀಮಂತ ದಾನಿಗಳು, ಸರ್ಕಾರೇತರ ಸಂಸ್ಥೆಗಳು ಬಡ ಜನರ ಸೇವೆಗೆ ಧಾವಿಸಿದೆ. ಪ್ರತಿನಿತ್ಯ ಲಕ್ಷಾಂತರ ಜನರ ಹೊಟ್ಟೆ ತುಂಬಿಸಲು ಪರಸ್ಪರ ಕೈಜೋಡಿಸಿ ಅವಶ್ಯಕತೆ ಇದ್ದವರಿಗೆ ನೆರವು ನೀಡುತ್ತಿವೆ. ಅವುಗಳ ವಿವರ ಹೀಗಿದೆ..
ಇಸ್ಕಾನ್ ಅಕ್ಷಯಪಾತ್ರ :ಈ ಸಂಸ್ಥೆ ಬಡವರ್ಗದ ಜನರು, ಕೂಲಿ ಕಾರ್ಮಿಕರಿಗೆ ಅಡುಗೆ ಮಾಡಲು ಬೇಕಾಗುವ ಅಕ್ಕಿ, ಉಪ್ಪು, ಎಣ್ಣೆ, ಬೇಳೆ, ಸಾಂಬಾರ್ ಪುಡಿ ಸೇರಿ 14 ಕೆಜಿ ಸಾಮeಗ್ರಿಗಳಿರುವ 40 ಸಾವಿರ ಬಾಕ್ಸ್ ವಿತರಿಸುತ್ತಿದ್ದಾರೆ.
ಜೈನ್ ಸ್ವಯಂ ಸೇವಾಸಂಸ್ಥೆ :ಈ ಸ್ವಯಂಸೇವಾ ಸಂಸ್ಥೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಹಾರ ತಯಾರಿಸಿ ಸುಮಾರು 14 ಸಾವಿರಕ್ಕೂ ಹೆಚ್ಚು ಪೊಟ್ಟಣಗಳನ್ನು ಬೆಳಗ್ಗೆ ಹಾಗೂ ಮಧ್ಯಾಹ್ನ ವಿವಿಧ ಸ್ಥಳಗಳಿಗೆ ತಲುಪಿಸುತ್ತದೆ.
ಏಟ್ರಿಯಾ ಫೌಂಡೇಶನ್ :ಈ ಫೌಂಡೇಶನ್ ಸಿಎಸ್ಆರ್ ಅಂಗವಾಗಿ ನಗರದ ನೂರಕ್ಕೂ ಹೆಚ್ಚು ಸ್ಥಳಗಳಲ್ಲಿ ಪ್ರತಿದಿನ ಒಂದೂವರೆ ಲಕ್ಷಕ್ಕೂ ಹೆಚ್ಚು ಊಟದ ಪೊಟ್ಟಣಗಳನ್ನು ವಿತರಣೆ ಮಾಡುತ್ತಿದೆ. ಸರ್ವ್ ಬೆಂಗಳೂರು ಅಡಿ ಈ ಪೊಟ್ಟಣಗಳ ವಿತರಣೆ ಮಾಡುತ್ತಿದ್ದು, ಇದಕ್ಕಾಗಿ ನಗರದ ವಿವಿಧೆಡೆ 12 ಅಡುಗೆ ಮನೆಗಳನ್ನು ನಿರ್ಮಾಣ ಮಾಡಿದೆ. ಪೊಂಗಲ್, ಉಪ್ಪಿಟ್ಟು, ಅನ್ನ, ಸಾಂಬಾರ್‌ನ ನೀಡುತ್ತಿದೆ.
ನಮ್ಮ ಬೆಂಗಳೂರು ಪ್ರತಿಷ್ಠಾನ :ನಮ್ಮ ಬೆಂಗಳೂರು ಪ್ರತಿಷ್ಠಾನದ ವತಿಯಿಂದ ಬಡವರು, ಅಶಕ್ತರಿಗೆ ದೊಡ್ಡ ಮಟ್ಟದಲ್ಲಿ ಆಹಾರ ಪೂರೈಕೆ ಮಾಡಲಾಗುತ್ತಿದೆ. ಜೆಐಟಿಒ, ಭಾಸ್ಕರ್ ಮನೆ ಹೋಳಿಗೆ, ಗಿಲ್ಗಲ್ ಚಾರಿಟೇಬಲ್ ಟ್ರಸ್ಟ್ ಹಾಗೂ ಇತರರ ಸಹಾಯದಿಂದ ಎರಡು ದಿನದಲ್ಲಿ 4,785 ಬಡ ಜನರಿಗೆ ಆಹಾರ ಪದಾರ್ಥ ನೀಡಲಾಗಿದೆ. ಆಹಾರವನ್ನು ಅಮರ್ ಜ್ಯೋತಿ ಸ್ಲಂ, ನಾಗಾವರದ ಲಿಡ್ಕರ್ ಸ್ಲಂ, ವೈಯಾಲಿಕಾವಲ್ ಕೊಳೆಗೇರಿಗಳಲ್ಲಿ ಸುಮಾರು 14 ಸಾವಿರ ಮಂದಿಗೆ ಆಹಾರ ವಿತರಣೆ ಮಾಡಲಾಗಿದೆ.
ಹಸಿರು ದಳ ಸಂಸ್ಥೆಯ ನಳಿನಿ ಶೇಖರ್, ಚಿಂದಿ ಆಯುವವರು ಹಾಗೂ ಒಣಕಸ ಸಂಗ್ರಹಿಸುವವರಿಗೆ ಆಹಾರ ಸಾಮಾಗ್ರಿಗಳ ಕಿಟ್ ಒದಗಿಸಿದ್ದಾರೆ. ಜೆಪಿನಗರದ ಸೇವಕ್ ಟ್ರಸ್ಟ್ ಪ್ರತಿನಿತ್ಯ 2500 ಸಾವಿರಕ್ಕೂ ಹೆಚ್ಚು ಆಹಾರ ಸಾಮಾಗ್ರಿಗಳನ್ನು ವಿತರಿಸುತ್ತಿದೆ. ಶ್ರಮಜೀವಿ ಮದರ್ ಥೆರೇಸಾ ದತ್ತಿಸಂಸ್ಥೆಯ ಹೃದಯರಾಜ್ ಅವರು ಸಾವಿರ ಜನಕ್ಕೆ ಒಂದು ತಿಂಗಳಿಗಾಗುವ ಅಗತ್ಯ ಸಾಮಾಗ್ರಿಗಳನ್ನು ಕೊಡುತ್ತಿದ್ದಾರೆ.
ಅಷ್ಟೇ ಅಲ್ಲ, ಸ್ಮೈಲ್ ಫೌಂಡೇಶನ್, ಸಮರ್ಥನಂ ಸಂಸ್ಥೆ ಸೇರಿದಂತೆ ನೂರಾರು ದಾನಿಗಳು ತಮ್ಮ ಕೈಲಾದಷ್ಟು ಬಡವರಿಗೆ, ನಿರ್ಗತಿಕರಿಗೆ ಮೂರು ಹೊತ್ತು ಊಟಕ್ಕೆ ನೆರವಾಗುತ್ತಿದ್ದಾರೆ. ಇಂದಿರಾ ಕ್ಯಾಂಟೀನ್, ಕಾರ್ಮಿಕ ಇಲಾಖೆ, ಮಾತ್ರವಲ್ಲದೇ ಇತರರೂ ಕೂಡಾ ಬಡವರಿಗೆ, ನಿರಾಶ್ರಿತರಿಗೆ, ಮಂಗಳಮುಖಿಯರಿಗೆ ನೆರವಿನ ಹಸ್ತ ಚಾಚಿದ್ದಾರೆ. ಪಾಲಿಕೆಯ ಅಂಕಿ ಅಂಶಗಳ ಪ್ರಕಾರ ದಿನವೊಂದಕ್ಕೆ ಸುಮಾರು 2,23,099 ಮಂದಿಗೆ ಆಹಾರ ಒದಗಿಸಲಾಗಿದೆ.